ಸಂವಿಧಾನ ದಿನ WEB
ದೇಶ

ಸಂವಿಧಾನ ದಿನದಂದು ಮೋದಿ-ಕಾಂಗ್ರೆಸ್ ಜುಗಲ್ಬಂದಿ ! ನಮನದ ಹಿಂದೆ ರಕ್ಷಣೆಯ ಸದ್ದು | Constitution Day

ಭಾರತದ ಸಂವಿಧಾನವು ಪ್ರಜಾಪ್ರಭುತ್ವದ ಅಮೂಲ್ಯ ಪರಂಪರೆಯಾಗಿದ್ದು, ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಸಾಕಾರಗೊಳಿಸಲು ಮಾರ್ಗದರ್ಶನ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನ ದಿನದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಎಲ್ಲ ಸದಸ್ಯರಿಗೆ ಗೌರವ ಸಲ್ಲಿಸಿರುವ ಅವರು, ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಉದ್ದೇಶದಿಂದ ಕಾಂಗ್ರೆಸ್ ದೇಶಾದ್ಯಂತ ಸಂವಿಧಾನ ರಕ್ಷಣಾ ಜಾಥಾ ಆಯೋಜಿಸಿದೆ.Constitution Day

ನವದೆಹಲಿ: ಭಾರತದ ಸಂವಿಧಾನವು ಪ್ರಜಾಪ್ರಭುತ್ವದ ಅಮೂಲ್ಯ ಪರಂಪರೆಯಾಗಿದ್ದು, ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಸಾಕಾರಗೊಳಿಸಲು ಮಾರ್ಗದರ್ಶನ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನ ದಿನದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಎಲ್ಲ ಸದಸ್ಯರಿಗೆ ಗೌರವ ಸಲ್ಲಿಸಿರುವ ಅವರು, ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಉದ್ದೇಶದಿಂದ ಕಾಂಗ್ರೆಸ್ ದೇಶಾದ್ಯಂತ ಸಂವಿಧಾನ ರಕ್ಷಣಾ ಜಾಥಾ ಆಯೋಜಿಸಿದೆ.

ನವೆಂಬರ್ 26ರಂದು ಆಚರಿಸಲಾಗುವ ಸಂವಿಧಾನ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಭೆಯ ಎಲ್ಲ ಮಹನೀಯರಿಗೆ ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.

ಸಂವಿಧಾನದ ರೂಪದಲ್ಲಿ ಅವರು ನಮಗೆ ನೀಡಿರುವ ಕೊಡುಗೆ ಭಾರತದ ಪ್ರಜಾಪ್ರಭುತ್ವದ ಅಮೂಲ್ಯ ಪರಂಪರೆಯಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ನನಸಾಗಿಸಲು ಇದು ಮುಂದೆಯೂ ನಮಗೆ ಮಾರ್ಗದರ್ಶನ ನೀಡಲಿದೆ ಎಂದು ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಸಂವಿಧಾನ ದಿನವು ಸಂವಿಧಾನ ರಚನೆಕಾರರನ್ನು ಸ್ಮರಿಸುವುದರ ಜತೆಗೆ ಅದರಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಬಲಪಡಿಸುವ ಸಂಕಲ್ಪವನ್ನು ಪುನರುಚ್ಚರಿಸುವ ದಿನವಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ವಿಡಿಯೊ ಸಂದೇಶದಲ್ಲಿ ಸಂಸ್ಕೃತ ಶ್ಲೋಕವನ್ನೂ ಹಂಚಿಕೊಂಡಿದ್ದಾರೆ.

ದೇಶಾದ್ಯಂತ ಕಾಂಗ್ರೆಸ್‌ನಿಂದ ಸಂವಿಧಾನ ರಕ್ಷಣಾ ಜಾಥಾ

ಸಂವಿಧಾನ ದಿನದ ಅಂಗವಾಗಿ ಕಾಂಗ್ರೆಸ್ ಪಕ್ಷ ಗುರುವಾರ ದೇಶದ ಎಲ್ಲ ರಾಜ್ಯಗಳಲ್ಲಿ ಬೃಹತ್ ಸಂವಿಧಾನ ರಕ್ಷಣಾ ಜಾಥಾ ಆಯೋಜಿಸಿದೆ. ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಅಧಿಕೃತ ಪ್ರಕಟಣೆ ತಿಳಿಸಿದೆ. ಲಖನೌನಲ್ಲಿ ನಡೆಯಲಿರುವ ಜಾಥಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಈ ಕಾರ್ಯಕ್ರಮ ನಡೆಯುತ್ತಿರುವುದು ಗಮನ ಸೆಳೆದಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೀಡಿರುವ ಮಾಹಿತಿಯಂತೆ, ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳು ತಮ್ಮ ರಾಜ್ಯಗಳಲ್ಲಿ ಜಾಥಾ ಆಯೋಜಿಸಲಿವೆ. ಪ್ರತಿಯೊಂದು ಜಾಥಾವೂ ಡಾ. ಬಿ.ಆರ್. ಅಂಬೇಡ್ಕರ್ ಅಥವಾ ಮಹಾತ್ಮ ಗಾಂಧಿ ಅವರ ಪ್ರತಿಮೆಗಳಿಗೆ ಗೌರವ ಸಲ್ಲಿಸುವ ಮೂಲಕ ಆರಂಭವಾಗಲಿದೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ಓದಲಿದ್ದಾರೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳನ್ನು ನೆನಪಿಸಿಕೊಳ್ಳುವುದರ ಜತೆಗೆ ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆಯನ್ನೂ ಸ್ವೀಕರಿಸಲಿದ್ದಾರೆ.

ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧವೂ ಅಭಿಯಾನ

ಜಾಥಾದ ಜತೆಗೆ ಕಾಂಗ್ರೆಸ್ 'ವೋಟ್ ರಕ್ಷಕ್' ಅಭಿಯಾನವನ್ನೂ ಮುಂದುವರಿಸಲಿದೆ. ಮತಗಟ್ಟೆ ಮಟ್ಟದಲ್ಲಿ ಕಾರ್ಯಕರ್ತರು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ. ಹೆಸರು ಕೈಬಿಟ್ಟಿರುವ ಅರ್ಹ ಮತದಾರರಿಗೆ ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ನೆರವಾಗುವುದು ಈ ಅಭಿಯಾನದ ಉದ್ದೇಶವಾಗಿದೆ.

ಇದೇ ವೇಳೆ ನಾಗಪುರದಲ್ಲಿ ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ಉಳಿಸಿ ಎಂಬ ಹೆಸರಿನಲ್ಲಿ ರ‍್ಯಾಲಿ ನಡೆಸುವುದಾಗಿ ಸಿಜೆಪಿ ಕಾರ್ಯಕರ್ತ ಅಭಿಜೀತ್ ದಿಪ್ಕೆ ಘೋಷಿಸಿದ್ದಾರೆ. ನವೆಂಬರ್ 26ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾರತೀಯ ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ.

ನವೆಂಬರ್ 26ರಂದೇ ಸಂವಿಧಾನ ದಿನ ಏಕೆ?

ಭಾರತದ ಸಂವಿಧಾನ ರಚನಾ ಸಭೆಯು 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿತು. ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನ ಅಥವಾ ಸಂವಿಧಾನ ದಿವಸ್ ಆಚರಿಸಲಾಗುತ್ತದೆ. 2015ರಿಂದ ಕೇಂದ್ರ ಸರ್ಕಾರ ಈ ದಿನವನ್ನು ಅಧಿಕೃತವಾಗಿ ಸಂವಿಧಾನ ದಿನವಾಗಿ ಆಚರಿಸುತ್ತಿದೆ. ಭಾರತದ ಸಂವಿಧಾನವು 1950ರ ಜನವರಿ 26ರಂದು ಜಾರಿಗೆ ಬಂದಿತು. ಈ ದಿನವೇ ಭಾರತ ಗಣರಾಜ್ಯವಾಗಿ ರೂಪುಗೊಂಡಿತು. 'ಭಾರತದ ಪ್ರಜೆಗಳಾದ ನಾವು' ಎಂಬ ಅರ್ಥ ನೀಡುವ 'We, the People of India' ಎಂಬ ಪದಗಳೊಂದಿಗೆ ಆರಂಭವಾಗುವ ಸಂವಿಧಾನವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಧಾರವಾಗಿದೆ.