

ನವದೆಹಲಿ: ಸಂವಿಧಾನ ದಿನಾಚರಣೆಯ (Constitution Day) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಸಂವಿಧಾನ ನಿರ್ವಹಣೆಯ ವೈಖರಿಯನ್ನು ತೀವ್ರವಾಗಿ ಟೀಕಿಸಿದ್ದು, ತುರ್ತು ಪರಿಸ್ಥಿತಿ, ಆ ಅವಧಿಯಲ್ಲಿ ಮಾಡಲಾದ ಸಂವಿಧಾನ ತಿದ್ದುಪಡಿಗಳು ಹಾಗೂ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35A ವಿಧಿಗಳನ್ನು ಉಲ್ಲೇಖಿಸಿರುವ ಅವರು, ಕಾಂಗ್ರೆಸ್ ನಾಯಕತ್ವವನ್ನು ಅಧಿಕಾರದಾಹದ ಮತ್ತು ಸಂವಿಧಾನ ವಿರೋಧಿ ಎಂದು ಆರೋಪಿಸಿದ್ದಾರೆ.
ಸಂವಿಧಾನ ದಿನದ ಅಂಗವಾಗಿ ವಿಶೇಷ ಲೇಖನ ಬರೆದಿರುವ ಪ್ರಧಾನಿ ಮೋದಿ, ದೇಶದಲ್ಲಿ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಿದ ಈ ಹಿಂದಿನ ಘಟನೆಗಳನ್ನು ತಮ್ಮ ಬರಹದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
1951ರ ಮೊದಲ ಸಂವಿಧಾನ ತಿದ್ದುಪಡಿಗೆ ಈ ವರ್ಷ 75 ವರ್ಷಗಳು ತುಂಬುತ್ತಿರುವುದನ್ನು ಪ್ರಧಾನಿ ನೆನಪಿಸಿಕೊಂಡಿದ್ದಾರೆ. ಜನರಿಂದ ನೇರವಾಗಿ ಆಯ್ಕೆಯಾಗದ ಸರ್ಕಾರವು ತಾತ್ಕಾಲಿಕ ಸಂಸತ್ತಿನಲ್ಲಿ ತನ್ನ ಬಹುಮತವನ್ನು ಬಳಸಿಕೊಂಡು ಮೂಲಭೂತ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿತು. ದೇಶದ ಮೊದಲ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ತಿದ್ದುಪಡಿ ತಂದಿರುವುದು, ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಮತ್ತು ಸಾರ್ವಜನಿಕ ವಿರೋಧವನ್ನು ಹತ್ತಿಕ್ಕಲು ಮಾಡಿದ ಪ್ರಯತ್ನವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಮೋದಿ ಬರೆದಿದ್ದಾರೆ.
ಅಲ್ಲದೆ, ತುರ್ತು ಪರಿಸ್ಥಿತಿಯ ವೇಳೆ ಜಾರಿಗೆ ತಂದ 42ನೇ ಸಂವಿಧಾನ ತಿದ್ದುಪಡಿಗೆ 50 ವರ್ಷಗಳು ಸಂದಿರುವುದನ್ನು ಉಲ್ಲೇಖಿಸಿದ ಅವರು, ಈ ತಿದ್ದುಪಡಿಯು ನ್ಯಾಯಾಂಗ ವಿಮರ್ಶೆಯ ಅಧಿಕಾರವನ್ನು ಮೊಟಕುಗೊಳಿಸಿತು ಮತ್ತು ಸಾಂಸ್ಥಿಕ ಅಧಿಕಾರಗಳ ಸಮತೋಲನವನ್ನೇ ಮೂಲಭೂತವಾಗಿ ಬದಲಾಯಿಸಿತು ಎಂದು ಟೀಕಿಸಿದ್ದಾರೆ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜಾರಿಗೆ ತಂದ 38ನೇ ಮತ್ತು 39ನೇ ಸಂವಿಧಾನ ತಿದ್ದುಪಡಿಗಳನ್ನು ಯುವಜನರು ಅಧ್ಯಯನ ಮಾಡಬೇಕೆಂದು ಕರೆ ನೀಡಿರುವ ಪ್ರಧಾನಿ, ಅಧಿಕಾರದಾಹದ ಮತ್ತು ಸಂವಿಧಾನ ವಿರೋಧಿ ನಾಯಕತ್ವ ಏನು ಮಾಡಬಹುದು ಎಂಬುದನ್ನು ತಿಳಿಯಲು ಇಂದಿನ ಯುವಕರು ಈ ತಿದ್ದುಪಡಿಗಳನ್ನು ಓದಬೇಕು ಎಂದು ಹೇಳಿದ್ದಾರೆ.
1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ಐತಿಹಾಸಿಕ ದಿನವನ್ನು ಸ್ಮರಿಸಿದ ಪ್ರಧಾನಿ ಮೋದಿ, ಡಾ. ರಾಜೇಂದ್ರ ಪ್ರಸಾದ್, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯ ಎಲ್ಲಾ ಸದಸ್ಯರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ನಾಗರಿಕತೆಯ ಪರಂಪರೆ ಮತ್ತು ಬುದ್ಧಿವಂತಿಕೆಯಿಂದ ಪ್ರೇರಣೆ ಪಡೆದಿರುವ ನಮ್ಮ ಸಂವಿಧಾನವು ಆಧುನಿಕ ರಾಷ್ಟ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿದೆ ಎಂದು ಅವರು ಶ್ಲಾಘಿಸಿದರು.
ಸಂವಿಧಾನದ ಮಹತ್ವವನ್ನು ಕೇವಲ ಸಂಸತ್ತು ಮತ್ತು ನ್ಯಾಯಾಲಯಗಳ ಆವರಣಕ್ಕೆ ಸೀಮಿತಗೊಳಿಸದೆ, ದೇಶದ ಜನಸಾಮಾನ್ಯರ, ವಿಶೇಷವಾಗಿ ಯುವಜನರ ಸಾಮೂಹಿಕ ಪ್ರಜ್ಞೆಯೊಂದಿಗೆ ಬೆಸೆಯುವ ಉದ್ದೇಶದಿಂದ ತಮ್ಮ ಸರ್ಕಾರವು ಒಂದು ದಶಕದ ಹಿಂದೆ ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ವೈವಿಧ್ಯಮಯ ಭಾರತದ ಉಜ್ವಲ ಭವಿಷ್ಯಕ್ಕಾಗಿ ಏಕತೆಯ ಮನೋಭಾವವನ್ನು ಬಲಪಡಿಸುವುದು ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ(ಏಜೆನ್ಸೀಸ್).