ಆಗಸ್ಟ್ 1ರಿಂದ ಬೆಲೆಯೇರಿಕೆ ಬಿಸಿ: ಅಗತ್ಯ ವಸ್ತುಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಕಾರು, ಫೋನ್ ಎಲ್ಲವೂ ದುಬಾರಿ! ಕಾರಣವೇನು? Price Hike
- ಆಗಸ್ಟ್ 1ರಿಂದ ದೇಶಾದ್ಯಂತ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ
- ಎಫ್ಎಂಸಿಜಿ ಹಾಗೂ ಎಲೆಕ್ಟ್ರಾನಿಕ್ಸ್ ಸೇರಿದಂತೆ ಕಾರುಗಳ ದರ ಗಗನಕ್ಕೆ
- ಮಾರುತಿ ಸುಜುಕಿ ವಾಹನಗಳ ಬೆಲೆಯಲ್ಲಿ ಮೂವತ್ತು ಸಾವಿರ ರೂಪಾಯಿ ಹೆಚ್ಚಳ
- ಜಾಗತಿಕ ಮಾರುಕಟ್ಟೆ ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯಿಂದ ಬೆಲೆ ಪರಿಷ್ಕರಣೆ
- ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ತೀವ್ರ ಹೊರೆ
ನವದೆಹಲಿ: ಪೆಟ್ರೋಲ್, ಡೀಸಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ಪರಿಣಾಮವಾಗಿ ಈಗಾಗಲೇ ಅನೇಕ ಸರಕುಗಳ ಬೆಲೆ ಗಗನಕ್ಕೇರಿದ್ದು, ಆಗಸ್ಟ್ 1ರಿಂದ ಮತ್ತೊಮ್ಮೆ ಸಾಮಾನ್ಯ ಜನರ ಜೀವನದ ಮೇಲೆ ತೀವ್ರ ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ. ದೈನಂದಿನ ಅಗತ್ಯ ವಸ್ತುಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಕಾರುಗಳವರೆಗೆ ಹಲವು ವಸ್ತುಗಳ ಬೆಲೆ ಏರಿಕೆಯಾಗುವ ( Price Hike ) ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
ಎಫ್ಎಂಸಿಜಿ (FMCG) ಉತ್ಪನ್ನಗಳಾದ ಟೀ, ಹೇರ್ ಆಯಿಲ್, ಸಾಬೂನು, ಪ್ಯಾಕ್ ಮಾಡಿದ ಆಹಾರಗಳು ಶೇ. 6 ರಿಂದ 8%ರಷ್ಟು ದುಬಾರಿಯಾಗಲಿವೆ. ಈಗಾಗಲೇ ಹಣದುಬ್ಬರದಡಿ ಸಿಲುಕಿ ನರಳುತ್ತಿರುವ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಇನ್ನಷ್ಟು ಒತ್ತಡ ಬೀಳಲಿದ್ದು, ಈ ಬೆಲೆ ಏರಿಕೆಯು ಸಾಮಾನ್ಯ ಜನರ ಜೀವನವನ್ನು ಮತ್ತಷ್ಟು ಕಷ್ಟಕರಗೊಳಿಸುವ ಸಾಧ್ಯತೆಯಿದೆ.
ಎಲೆಕ್ಟ್ರಾನಿಕ್ಸ್ ಹಾಗೂ ಸ್ಮಾರ್ಟ್‌ಫೋನ್ ದರ ಹೆಚ್ಚಳ
ಎಲೆಕ್ಟ್ರಾನಿಕ್ಸ್ ವಲಯದಲ್ಲೂ ಬೆಲೆ ಏರಿಕೆಯಾಗಲಿದೆ. ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಹಾಗೂ ಟೆಲಿವಿಷನ್ ಬೆಲೆಗಳು ಶೇ. 4 ರಿಂದ 6 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್ ಬೆಲೆಗಳು ತೀವ್ರವಾಗಿ ಹೆಚ್ಚಿರುವುದರಿಂದ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ಏರಿಕೆಯಾಗಲಿದೆ.
ಆಟೋಮೊಬೈಲ್ ವಲಯದಲ್ಲಿ ಬೆಲೆ ಪರಿಷ್ಕರಣೆ
ಆಟೋಮೊಬೈಲ್ ವಲಯದಲ್ಲಿ ಬೆಲೆ ಏರಿಕೆ ಅನಿವಾರ್ಯವೆಂದು ಕಂಪನಿಗಳು ಈಗಾಗಲೇ ಸ್ಪಷ್ಟಪಡಿಸಿವೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಿರುವ ಕಾರಣ ಮಾರುತಿ ಸುಜುಕಿ ತನ್ನ ಕೆಲವು ಮಾದರಿಗಳ ಬೆಲೆಯನ್ನು ಆಗಸ್ಟ್‌ನಿಂದ 30,000 ರೂಪಾಯಿವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಹೋಂಡಾ ಕಾರ್ಸ್ ಹಾಗೂ ಮರ್ಸಿಡಿಸ್-ಬೆನ್ಜ್ ಕಂಪನಿಗಳೂ ಸಹ ಶೀಘ್ರದಲ್ಲೇ ಬೆಲೆ ಪರಿಷ್ಕರಿಸುವ ಸಾಧ್ಯತೆಯಿದೆ.
ಬೆಲೆ ಏರಿಕೆಗೆ ಜಾಗತಿಕ ಮಾರುಕಟ್ಟೆ ಕಾರಣಗಳು
ಕಚ್ಚಾ ತೈಲ ಹಾಗೂ ಪಾಮ್ ಆಯಿಲ್ ಬೆಲೆ ಏರಿಕೆ, ಪ್ಯಾಕಿಂಗ್ ಸಾಮಗ್ರಿಗಳ ವೆಚ್ಚ ಹೆಚ್ಚಳ ಮತ್ತು ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಜಾಗತಿಕ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿವೆ ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ. ಜತೆಗೆ ಸಮುದ್ರ ಸಾರಿಗೆ ವೆಚ್ಚದ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯದ ಏರಿಳಿತಗಳು ಆಮದು ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಈ ಎಲ್ಲ ಕಾರಣಗಳಿಂದ ಬೆಲೆ ಏರಿಕೆ ಅನಿವಾರ್ಯ ಎಂಬ ನಿರ್ಧಾರಕ್ಕೆ ಕಂಪನಿಗಳು ಬಂದಿವೆ.
ಹಂತ ಹಂತವಾಗಿ ಬೆಲೆ ಹೆಚ್ಚಳ
ಕಂಪನಿಗಳು ಒಮ್ಮೆಲೇ ಬೆಲೆ ಏರಿಸದೆ ಹಂತ ಹಂತವಾಗಿ ಹೆಚ್ಚಿಸಲು ನಿರ್ಧರಿಸಿವೆ. ಮೊದಲು ಪ್ರೀಮಿಯಂ ಉತ್ಪನ್ನಗಳ ಬೆಲೆ ಏರಿಸಿ, ನಂತರ ಸಣ್ಣ ಪ್ಯಾಕೆಟ್‌ಗಳ ದರ ಪರಿಷ್ಕರಿಸುವ ಸಾಧ್ಯತೆಯಿದೆ. ಜೂನ್ ತ್ರೈಮಾಸಿಕದ ನಷ್ಟವನ್ನು ಸಂಪೂರ್ಣವಾಗಿ ಗ್ರಾಹಕರ ಮೇಲೆ ಹೇರದ ಕಾರಣ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 2 ರಿಂದ 5 ರಷ್ಟು ಮತ್ತಷ್ಟು ಬೆಲೆ ಹೆಚ್ಚಳದ ಮೂಲಕ ಆ ನಷ್ಟವನ್ನು ಸರಿದೂಗಿಸಲು ಕಂಪನಿಗಳು ಸಜ್ಜಾಗಿವೆ. ಇದರೊಂದಿಗೆ ಜವಳಿ ಕಂಪನಿಗಳು ಕೂಡ ಹೊಸ ಸೀಸನ್ ಬಟ್ಟೆಗಳ ಬೆಲೆಯನ್ನು ಏರಿಸಲು ತಯಾರಿ ನಡೆಸುತ್ತಿವೆ.
ಆರ್ಥಿಕತೆ ಹಾಗೂ ಮಧ್ಯಮ ವರ್ಗದ ಮೇಲೆ ಪರಿಣಾಮ
ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚಾಗುವ ಅಪಾಯವಿದ್ದು, ಇದು ದೇಶದ ಜಿಡಿಪಿ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿತ್ತೀಯ ತಜ್ಞರು ಎಚ್ಚರಿಸಿದ್ದಾರೆ. ಸೀಮಿತ ಆದಾಯದಲ್ಲಿ ಜೀವನ ನಡೆಸುವ ಮಧ್ಯಮ ವರ್ಗದವರಿಗೆ ಮುಂಬರುವ ಹಬ್ಬದ ಸೀಸನ್‌ನಲ್ಲಿ ತಮ್ಮ ಬಜೆಟ್ ನಿರ್ವಹಿಸುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ, (ಏಜೆನ್ಸೀಸ್).