ರಾಷ್ಟ್ರಪತಿ ದ್ರೌಪದಿ ಮುರ್ಮು 
ದೇಶ

MGNREGA ಬದಲಿಗೆ VB-G RAM G ಮಸೂದೆಗೆ ಒಪ್ಪಿಗೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: 20 ವರ್ಷಗಳಷ್ಟು ಹಳೆಯದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(MGNREGA) ಬದಲಿಗೆ 'ವೀಕ್ಷಿತ್ ಭಾರತ್ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ-2025 (VB-G RAM G) ಮಸೂದೆಗೆ ಭಾನುವಾರ(ಡಿ. 21) ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಹೊಸ ಕಾನೂನಿಗೆ ರಾಷ್ಟ್ರೊತಿಯವರು ಅನುಮೋದನೆ ನೀಡಿದ್ದಾರೆ. ಈ ಕಾನೂನು ಪ್ರಕಾರ ವಿಕ್ಷಿತ್ ಭಾರತ್ 2047 ಕ್ಕೆ ಅನುಗುಣವಾಗಿ ಕೌಶಲ್ಯರಹಿತ ದೈಹಿಕ ಕೆಲಸಕ್ಕೆ ಸ್ವಯಂ ಸೇವಕರಾಗಿರುವ ವಯಸ್ಕ ಸದಸ್ಯರಿರುವ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ವರ್ಷದಲ್ಲಿ 125 ದಿನಗಳ ಕೂಲಿ ಖಾತರಿಯನ್ನು ಒದಗಿಸುವ ಗುರಿ ಹೊಂದಿದೆ ಎಂದು ಹೇಳಿದೆ.
ವಿಪಕ್ಷಗಳ ನಿರಂತರ ಪ್ರತಿಭಟನೆ ಹೊರತಾಗಿಯೂ ಗುರುವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು MGNREGA ರದ್ದತಿಯನ್ನು ತೀವ್ರವಾಗಿ ಟೀಕಿಸಿವೆ. ನಾಳೆ(ಡಿ.22) ದೇಶಾದ್ಯಂತ ಈ ಬಗ್ಗೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕರೆ ನೀಡಿದೆ.
ಶನಿವಾರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವೀಡಿಯೊ ಸಂದೇಶದಲ್ಲಿ ಪ್ರಧಾನಿ ಮೋದಿ ಸರ್ಕಾರವು MGNREGA ವನ್ನು "ಬುಲ್ಡೋಜರ್" ಮಾಡಿದೆ ಎಂದು ಆರೋಪಿಸಿದ್ದಾರೆ. ಮತ್ತು ಅದನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿರುವ ಕರಾಳ ಕಾನೂನನ್ನು ವಿರೋಧಿಸಿ ದೇಶಾದ್ಯಂತ ಕಾರ್ಯಕರ್ತರು ವಿರೋಧಿಸುತ್ತಾರೆ, ಹಿಂದಕ್ಕೆ ಪಡೆಯಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).