ಡ್ರಮ್​ಗಳಲ್ಲಿ ನೋಟಿನ ಕಂತೆ 
ದೇಶ

ಭೂಮಿಯ ಆಳದಲ್ಲಿ 3 ಡ್ರಮ್​ಗಳಲ್ಲಿ ಹೂತಿಟ್ಟಿದ್ದ ಕಂತೆ ಕಂತೆ ನೋಟಿನ ರಹಸ್ಯವನ್ನು ಬಯಲು ಮಾಡಿತು ಒಂದು ಚಿಕ್ಕ ಜಗಳ! Prayagraj Cash in Drums

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಎಲ್ಲರನ್ನೂ ಅಚ್ಚರಿಗೆ ದೂಡುವ ಘಟನೆಯೊಂದು ( Prayagraj Cash in Drums ) ಬೆಳಕಿಗೆ ಬಂದಿದೆ. ಅದೇನೆಂದರೆ, ಭಾರಿ ಪ್ರಮಾಣದ ಕಪ್ಪು ಹಣ ಪತ್ತೆಯಾಗಿರುವುದು ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಹಳ್ಳಿಯೊಂದರ ಮನೆಯ ಆವರಣದದಲ್ಲಿ ಬರೋಬ್ಬರಿ 15 ಅಡಿ ಆಳದಲ್ಲಿ ಹೂತುಹಾಕಲಾಗಿದ್ದ ಮೂರು ಬೃಹತ್ ಪ್ಲಾಸ್ಟಿಕ್ ಡ್ರಮ್‌ಗಳನ್ನು ಪೊಲೀಸರು ಹೊರತೆಗೆದಾಗ, ಅಧಿಕಾರಿಗಳ ಒಂದು ಕ್ಷಣ ದಂಗಾಗುವಂತಹ ದೃಶ್ಯ ಕಂಡುಬಂದಿದೆ. ಆ ಡ್ರಮ್‌ಗಳಲ್ಲಿ ತಲಾ 500 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ 5 ಕೋಟಿಯಿಂದ 10 ಕೋಟಿ ರೂಪಾಯಿಗೂ ಅಧಿಕವಿರಬಹುದು ಎಂದು ಶಂಕಿಸಲಾಗಿದೆ.

ಈ ರೋಚಕ ಘಟನೆಯು ಪ್ರಯಾಗ್‌ರಾಜ್ ಜಿಲ್ಲೆಯ ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾರೈಪುರ್ ರಾಂಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ರಾಕೇಶ್ ಯಾದವ್ ಮತ್ತು ರಾಜೇಶ್ ಯಾದವ್ ಅವರಿಗೆ ಸೇರಿದ ಮನೆಯ ಜಮೀನಿನಲ್ಲಿ ಭಾರಿ ಪ್ರಮಾಣದ ನಗದು ಹಣವನ್ನು ಹೂತಿಡಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಫೂಲ್‌ಪುರ ಹಾಗೂ ಸೊಹ್ರಾಬ್ ಎಸಿಪಿಗಳ ನೇತೃತ್ವದ ವಿಶೇಷ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿ, ಇಡೀ ಗ್ರಾಮವನ್ನು ಸುತ್ತುವರೆದು ತೀವ್ರ ಶೋಧ ಕಾರ್ಯಾಚರಣೆ ನಡೆಸಿದವು.

ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸುದೀರ್ಘ ಹಾಗೂ ರೋಚಕ ಕಾರ್ಯಾಚರಣೆಯ ನಂತರ, ಭೂಮಿಯ ಆಳದಲ್ಲಿ ಮುಚ್ಚಿಟ್ಟಿದ್ದ ಮೂರು ಡ್ರಮ್‌ಗಳು ಪತ್ತೆಯಾದವು. ಅವುಗಳನ್ನು ಮೇಲೆತ್ತಿ ಪರಿಶೀಲಿಸಿದಾಗ, ಕಪ್ಪು ಪ್ಲಾಸ್ಟಿಕ್ ಕವರ್‌ಗಳು ಹಾಗೂ ಬಟ್ಟೆಯಲ್ಲಿ ಭದ್ರವಾಗಿ ಸುತ್ತಿಡಲಾಗಿದ್ದ 500 ರೂ. ಮುಖಬೆಲೆಯ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಈ ಕಪ್ಪು ಹಣದ ಮೊತ್ತ ಸುಮಾರು 10 ಕೋಟಿ ರೂಪಾಯಿಗಳಿಗೂ ಅಧಿಕವಾಗಿರಬಹುದು ಎಂದು ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ ಯಾದವ್ ಹಾಗೂ ರಾಜೇಶ್ ಯಾದವ್ ಅವರ ಪಾತ್ರದ ಕುರಿತು ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಇವರಿಬ್ಬರೂ ಹಿಂದೆ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ರಾಕೇಶ್ ಯಾದವ್ ಪುಣೆಯ ಚಿನ್ನದ ಆಭರಣ ಮಳಿಗೆಯೊಂದರಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದು, 2020ರ ಕರೊನಾ ಲಾಕ್‌ಡೌನ್ ಅವಧಿಯಲ್ಲಿ ಕೆಲಸ ತೊರೆದು ಸ್ವಗ್ರಾಮಕ್ಕೆ ಮರಳಿದ್ದನು. ಆದರೆ, ಗ್ರಾಮಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಇವರ ಆರ್ಥಿಕ ಪರಿಸ್ಥಿತಿ ಅಚ್ಚರಿಯ ರೀತಿಯಲ್ಲಿ ಸಂಪೂರ್ಣ ಬದಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಯಾವುದೇ ದೊಡ್ಡ ಆದಾಯದ ಮೂಲವಿಲ್ಲದಿದ್ದರೂ ರಾಕೇಶ್ ಯಾದವ್ ಮತ್ತು ರಾಜೇಶ್ ಯಾದವ್ ದಿಢೀರನೇ ಶೋಕಿ ಜೀವನ ನಡೆಸಲು ಆರಂಭಿಸಿದ್ದರು. ರಾಕೇಶ್ ಕೇವಲ ಕೆಲವೇ ವರ್ಷಗಳಲ್ಲಿ 22 ಎಕರೆ ಜಮೀನು ಖರೀದಿಸಿದ್ದಲ್ಲದೆ, ಬರೋಬ್ಬರಿ 1 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಬಂಗಲೆಯನ್ನು ನಿರ್ಮಿಸಿ, ಟ್ರ್ಯಾಕ್ಟರ್‌ಗಳು ಸೇರಿದಂತೆ ಹಲವು ಆಸ್ತಿಪಾಸ್ತಿಗಳನ್ನು ಸಂಪಾದಿಸಿದ್ದನು. ಇತ್ತೀಚೆಗೆ ಕುಟುಂಬಸ್ಥರು ಹಾಗೂ ನೆರೆಹೊರೆಯವರೊಂದಿಗೆ ನಡೆದ ಜಗಳದ ಹಿನ್ನೆಲೆಯಲ್ಲಿ ಇವನ ಬಳಿ ಕಪ್ಪು ಹಣವಿರುವ ರಹಸ್ಯ ಸಾರ್ವಜನಿಕವಾಯಿತು. ಈ ಸುಳಿವು ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ಈ ಕಪ್ಪು ಹಣದ ಕರಾಳ ದಂಧೆ ಬಯಲಾಗಿದೆ.

ಪ್ರಸ್ತುತ ಜಪ್ತಿ ಮಾಡಲಾದ ಸಂಪೂರ್ಣ ನಗದನ್ನು ವಶಕ್ಕೆ ಪಡೆದಿರುವ ಪೊಲೀಸರು ಅದನ್ನು ಸುರಕ್ಷಿತವಾಗಿ ಪೊಲೀಸ್ ಮಾಲ್ಖಾನೆಗೆ ರವಾನಿಸಿದ್ದಾರೆ. ಹಣದ ನಿಖರ ಮೌಲ್ಯವನ್ನು ಎಣಿಕೆ ಮಾಡಲು ಆದಾಯ ತೆರಿಗೆ ಇಲಾಖೆ ಹಾಗೂ ಇತರೆ ಹಣಕಾಸು ತನಿಖಾ ಸಂಸ್ಥೆಗಳಿಗೆ ಅಧಿಕೃತ ಮಾಹಿತಿ ನೀಡಲಾಗಿದೆ. ಬ್ಯಾಂಕ್ ಯಂತ್ರಗಳ ಮೂಲಕ ಎಣಿಕೆ ಪೂರ್ಣಗೊಂಡ ನಂತರವಷ್ಟೇ ಒಟ್ಟು ಮೊತ್ತದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಡಿಸಿಪಿ ಸೋನಮ್ ಕುಮಾರ್ ತಿಳಿಸಿದ್ದಾರೆ. ಈ ಹಣದ ನಿಜವಾದ ಮಾಲೀಕರು ಯಾರು ಮತ್ತು ಇದು ಯಾವುದಾದರೂ ಅಕ್ರಮ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ್ದೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ, (ಏಜೆನ್ಸೀಸ್​).