Prateek Bordoloi | ಪ್ರತೀಕ್ ಬೋರ್ಡೊಲೊಯ್ 
ದೇಶ

ಅಪ್ಪನ ಹಾದಿ ಬಿಜೆಪಿ,.. ಕಾಂಗ್ರೆಸ್​ ಟಿಕೆಟ್​ ಧಿಕ್ಕರಿಸಿದ ಪ್ರತೀಕ್ ಬೋರ್ಡೊಲೊಯ್; ಕಾರಣವೇನು..? | Prateek Bordoloi

ದಿಸ್ಪೂರ್​: ಅಸ್ಸಾಂ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿರುವ ಬೆನ್ನಲ್ಲೇ ಕಾಂಗ್ರೆಸ್‌ಗೆ ಭಾರಿ ಆಘಾತ ಎದುರಾಗಿದ್ದು, ಹಿರಿಯ ಸಂಸದ ಪ್ರದ್ಯುತ್ ಬೋರ್ಡೊಲೊಯ್ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ ಬೆನ್ನಲ್ಲೇ, ಅವರ ಪುತ್ರ ಪ್ರತೀಕ್ ಬೋರ್ಡೊಲೊಯ್ (Pradyut Bordoloi) ಚುನಾವಣೆಯ ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ಅಸ್ಸಾಂ ಕಾಂಗ್ರೆಸ್​​ನ ಪ್ರಭಾವಿ ನಾಯಕರಾಗಿದ್ದ ಪ್ರದ್ಯುತ್ ಬೋರ್ಡೊಲೊಯ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಆದರೆ, ಅವರ ಪುತ್ರ ಪ್ರತೀಕ್ ಮಾರ್ಗರಿಟಾ ವಿಧಾನಸಭಾ ಕ್ಷೇತ್ರದ ಚುನಾವಭಾ ಕಣದಿಂದ ಹಿಂದೆ ಸರಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಖರ್ಗೆಗೆ ಪತ್ರ ಬರೆದ ಪ್ರತೀಕ್​

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಭಾವುಕ ಪತ್ರದಲ್ಲಿ ಪ್ರತೀಕ್ ಬೋರ್ಡೊಲೊಯ್ ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ನನ್ನ ತಂದೆ ಬೇರೆ ರಾಜಕೀಯ ಪಕ್ಷಕ್ಕೆ ಸೇರಿದ ಮೇಲೆ, ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ. ಮಾರ್ಗರಿಟಾದ ಜನರು ಮತ್ತು ಕಾರ್ಯಕರ್ತರು ಯಾವುದೇ ಗೊಂದಲವಿಲ್ಲದ ಅಭ್ಯರ್ಥಿಯನ್ನು ಬಯಸುತ್ತಾರೆ. ನನ್ನ ಬದ್ಧತೆಯ ಬಗ್ಗೆ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷನಿಷ್ಠೆಯ ಪ್ರತೀಕ

ತಮ್ಮ ತಂದೆ ಬಿಜೆಪಿ ಸೇರಿದರೂ, ತಾವು ಮಾತ್ರ ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧ ಎಂದು ಪ್ರತೀಕ್ ಸಾರಿದ್ದು, ಕಾಂಗ್ರೆಸ್‌ನ ಆದರ್ಶಗಳಲ್ಲಿನ ನನ್ನ ನಂಬಿಕೆ ಅಚಲವಾಗಿದೆ. ಕೇವಲ ಪಕ್ಷದ ಶಿಸ್ತು ಮತ್ತು ಮೌಲ್ಯಗಳನ್ನು ಎತ್ತಿಹಿಡಿಯಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸಿದ್ಧ ಎಂದು ಹೇಳುವ ಮೂಲಕ ಪ್ರತೀಕ್ ತಮ್ಮ ಪಕ್ಷನಿಷ್ಠೆ ಮೆರೆದಿದ್ದಾರೆ.

ಮಾರ್ಗರಿಟಾ ಕ್ಷೇತ್ರದ ಕಥೆ ಏನು..?

ಅಪ್ಪರ್ ಅಸ್ಸಾಂನ ಪ್ರಮುಖ ಕ್ಷೇತ್ರವಾದ ಮಾರ್ಗರಿಟಾದಲ್ಲಿ ಪ್ರತೀಕ್ ಬೋರ್ಡೊಲೊಯ್ ಸ್ಪರ್ಧಿಸದಿರುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚುನಾವಣೆ ಹತ್ತಿರವಿರುವಾಗ ಹೊಸ ಅಭ್ಯರ್ಥಿಯನ್ನು ಹುಡುಕುವುದು ಈಗ ಹೈಕಮಾಂಡ್‌ಗೆ ಸವಾಲಾಗಿದ್ದು, ಇತ್ತ ಪ್ರದ್ಯುತ್ ಬೋರ್ಡೊಲೊಯ್ ಬಿಜೆಪಿ ಸೇರ್ಪಡೆಯಿಂದ ಕಮಲ ಪಾಳಯಕ್ಕೆ ಆನೆ ಬಲ ಬಂದಂತಾಗಿದೆ.
ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಅಬ್ಬರದ ನಡುವೆ, ಬೋರ್ಡೊಲೊಯ್ ಕುಟುಂಬದ ಈ ಹೋರಾಟ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ(ಏಜೆನ್ಸೀಸ್​).