ಸುನೇತ್ರಾ ಪವಾರ್ ಮತ್ತು ಪ್ರಶಾಂತ್ ಕಿಶೋರ್ 
ದೇಶ

ಚುನಾವಣೆ ಗೆದ್ದ ಬೆನ್ನಲ್ಲೇ ಎನ್​ಡಿಎ ಮಿತ್ರ ಪಕ್ಷ ಎನ್​ಸಿಪಿಯ ಸುನೇತ್ರಾ ಪವಾರ್ ಭೇಟಿಯಾದ ಪ್ರಶಾಂತ್ ಕಿಶೋರ್: ಗರಂ ಆದ ಬಿಜೆಪಿ | Sunetra Pawar

ಮುಂಬೈ: ಬಿಹಾರದ ಬಂಕಿಪುರ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಶುಕ್ರವಾರ(ಆ. 07) ಮುಂಬೈನಲ್ಲಿ ಮಹಾರಾಷ್ಟ್ರ ಡಿಸಿಎಂ ಮತ್ತು ಎನ್‌ಸಿಪಿ ಮುಖ್ಯಸ್ಥೆ ಸುನೇತ್ರಾ ಪವಾರ್(Sunetra Pawar) ಅವರನ್ನು ಭೇಟಿಯಾಗಿದ್ದು, ಇದು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ.
ದಕ್ಷಿಣ ಮುಂಬೈನಲ್ಲಿರುವ ಡಿಸಿಎಂ ಸುನೇತ್ರಾ ಪವಾರ್ ಅವರ ಅಧಿಕೃತ ನಿವಾಸ 'ದೇವಗಿರಿ'ಯಲ್ಲಿ ಈ ಭೇಟಿ ನಡೆದಿದೆ. ಇದು ಎರಡನೇ ಭೇಟಿಯಾಗಿದ್ದು, ಸಭೆಯಲ್ಲಿ ಚರ್ಚೆಯ ಬಗ್ಗೆ ಯಾವುದೇ ಮಾಹಿತಿ ಹೊರ ಬಂದಿಲ್ಲ. ಆದರೆ ಎನ್​ಸಿಪಿಯ ಬೆಳವಣಿಗೆ ಮತ್ತು ಮುಂದಿನ ರಾಜಕೀಯ ತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಗರಂ

ಇಬ್ಬರು ನಾಯಕರ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ, ಇದು ಅವರ ಪಕ್ಷದ ಆಂತರಿಕ ವಿಷಯ. ಆದಾಗ್ಯೂ, ಮಹಾಯುತಿ ಮೈತ್ರಿಕೂಟದ ಭಾಗವಾಗಿ ಉಳಿದಿರುವಾಗ, ಮೈತ್ರಿ ಪಾಲುದಾರರಲ್ಲಿ ಅನುಮಾನವನ್ನು ಬಿತ್ತುವ ಅಥವಾ ಯಾವುದೇ ಪಕ್ಷಕ್ಕೆ ಹಾನಿ ಮಾಡುವ ಯಾವುದೇ ಹೆಜ್ಜೆ ಇಡಬಾರದು. ಎಲ್ಲರೂ ಮೈತ್ರಿ ಪಾಲನೆಯನ್ನು ಪಾಲಿಸಬೇಕು ಎಂದಿದ್ದಾರೆ.
ಡಿಸಿಎಂ ಸುನೇತ್ರಾ ಪವಾರ್ ಅವರು ಪ್ರಶಾಂತ್ ಕಿಶೋರ್ ಅವರನ್ನು ಏಕೆ ಭೇಟಿಯಾದರು ಎಂಬುದರ ಕುರಿತು ನಾನು ಬೇರೆ ಏನನ್ನೂ ಹೇಳಲಾರೆ, ಆದರೆ ಮೈತ್ರಿಕೂಟದೊಳಗೆ ಬಿರುಕು ಅಥವಾ ಅಪನಂಬಿಕೆಯನ್ನು ಸೃಷ್ಟಿಸುವ ಯಾವುದೇ ನಡವಳಿಕೆ ಇರಬಾರದು ಎಂದಿದ್ದಾರೆ (ಏಜೆನ್ಸೀಸ್).