Prashant Kishor | ಜನ್​​ ಸುರಾಜ್​ ಪಕ್ಷದ ಸಂಸ್ಥಾಪಕ ಪ್ರಶಾಂತ್​ ಕಿಶೋರ್​ 
ದೇಶ

Prashant Kishor | ಕೋಚ್​ಗಳೆಲ್ಲಾ ಗೆಲ್ಲುವುದಿಲ್ಲ... ಹೊಸ ಪಕ್ಷ ಕಟ್ಟಿ ಕೈ ಸುಟ್ಟುಕೊಂಡ ಪ್ರಶಾಂತ್​ ಕಿಶೋರ್​ ರಾಜಕೀಯ ಇತಿಹಾಸ ಇಲ್ಲಿದೆ

ಪಟನಾ: ಎಲ್ಲಾ ತರಬೇತುದಾರರು ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಮಾತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ವಿಷಯದಲ್ಲಿ ನಿಜವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರಿಗೆ ಚುನಾವಣಾ ತಂತ್ರ ಹೆಣೆದಿದ್ದ ವ್ಯಕ್ತಿ, ಹೊಸ ಪಕ್ಷ ಕಟ್ಟಿ, 243 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಿದ್ದ ಕಿಶೋರ್​, ಒಬ್ಬರನ್ನು ಗೆಲ್ಲಿಸಲು ಸಹ ಅವರ ತಂತ್ರ ಕೆಲಸ ಮಾಡಿಲ್ಲ ಎನ್ನುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.
ಪ್ರಶಾಂತ್​ ಕಿಶೋರ್​ ಕಳೆದ ವರ್ಷ ಜನ್​ ಸುರಾಜ್​​ ಪಕ್ಷವನ್ನು ಸ್ಥಾಪಿಸಿದಾಗ ಜನರಿಗೆ ಈ ಪಕ್ಷ ಬಿಹಾರದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಕಂಡಿತ್ತು. ನವೆಂಬರ್​ ತಿಂಗಳ ಪ್ರಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಿಶೋರ್, 10 ಕ್ಕಿಂತ ಕಡಿಮೆ ಸ್ಥಾನ, 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ಕತಪಡಿಸಿದ್ದರು. ಆದರೆ, ಆ ಹತ್ತು ಸ್ಥಾನವು ಶೂನ್ಯಕ್ಕಿಳಿಯಬಹುದು ಎನ್ನುವುದನ್ನು ಅವರು ಕನಸ್ಸಿನಲ್ಲೂ ಊಹಿಸಿರಲಿಲ್ಲ.
ಚುನಾವಣೆಯ ಚಾಣಾಕ್ಷನಾಗಿ ಪ್ರಶಾಂತ್ ಕಿಶೋರ್ ಇತಿಹಾಸ
2012 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಗೆಲುವಿಗೆ ತಂತ್ರ ಹೆಣೆಯುವಲ್ಲಿ ಕಿಶೋರ್​ ಪಾತ್ರ ಮಹತ್ತರವಾಗಿತ್ತು. ಆ ಚುನಾವಣೆಯಲ್ಲಿ ಕೇಸರಿ ಪಕ್ಷದ ಭರ್ಜರಿ ಗೆಲುವು ಪಿಕೆಯನ್ನು ರಾಷ್ಟ್ರಮಟ್ಟದಲ್ಲಿಬ ಸುದ್ದಿಯಾಗುವಂತೆ ಮಾಡಿತು. 2014 ರ ಲೋಕಸಭಾ ಚುನಾವಣೆಯಲ್ಲಿಯೂ ಕಿಶೋರ್​ ತಂಡ ನರೇಂದ್ರ ಮೋದಿಗಾಗಿ ಕೆಲಸ ಮಾಡಿತು. ಆನಂತರ 2015 ರಲ್ಲಿ ಕಿಶೋರ್ ಮಹಾಘಟಂಧನ್ ಪರವಾಗಿ ಕೆಲಸ ಮಾಡಿ ಸೈ ಎನಿಸಿಕೊಂಡರು.
2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್‌ ನಾಯಕ ಅಮರಿಂದರ್ ಸಿಂಗ್ ಪರ ಕಾರ್ಯ ನಿರ್ವಹಿಸಿದ ಕಿಶೋರ್​, ಅವರನ್ನು ಸಹ ಗೆಲುವಿನತ್ತ ಮುನ್ನಡೆಸಿದರು.ಇದಾದ ನಂತರ ಆಂಧ್ರದ ವೈಎಸ್‌ಆರ್‌ಸಿಪಿಯ ಜಗನ್ ಮೋಹನ್ ರೆಡ್ಡಿ ಪರ ಕೆಲಸ ಮಾಡಿ ಅವರಿಗೂ ಗೆಲುವಿನ ಹಾರ ತೊಡಿಸಿದರು. 2021 ರಲ್ಲಿ ಕಿಶೋರ್ ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಗೆಲುವಿಗೆ ಸಹಾಯ ಮಾಡಿದ್ದರು.

ರಾಜಕೀಯ ಪ್ರವೇಶ

2015 ರ ಮಹಾ ಮೈತ್ರಿಕೂಟದ ಗೆಲುವಿಗೆ ಕಾರಣವಾಗಿದ್ದ ಪ್ರಶಾಂತ್​, 2018 ರಲ್ಲಿ ಜೆಡಿಯು ಸೇರ್ಪಡೆಗೊಂಡು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡರು. ಚುನಾವಣಾ ರಾಜಕೀಯದ ಅನುಭವವಿಲ್ಲದ ಒಬ್ಬ ವ್ಯಕ್ತಿಗೆ ಇದು ದೊಡ್ಡ ಮಟ್ಟ ಹುದ್ದೆಯಾಗಿದೆ ಎಂದು ಅನೇಕರು ಅಸಮಧಾನ ವ್ಯಕ್ತಪಡಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಗೆ ನಿತೀಶ್ ಕುಮಾರ್ ಬೆಂಬಲ ನೀಡಿದ್ದನ್ನು ಬಹಿರಂಗವಾಗಿ ಟೀಕಿಸಿದ ಕಾರಣ ಜಡೆಯುನಿಮದ ಹೊರಬರಬೇಕಾಯಿತು.
ಜನ್ ಸೂರಾಜ್ ಪಾರ್ಟಿ ಸ್ಥಾಪನೆ..
ಕಳೆದ ವರ್ಷ ಜನ ಸುರಾಜ್ ಎಂಬ ಹೊಸ ಪಕ್ಷ ಸ್ಥಾಪಿಸಿದ ಪ್ರಶಾಂತ್​ ಕಿಶೋರ್​​, ಮುಂದಿನ ನಾಲ್ಕು ತಿಂಗಳುಗಳು ರಾಜ್ಯದ್ಯಂತ ಪಾದಯಾತ್ರೆ ನಡೆಸಿ ಜನರ ಸಂಕಷ್ಟ ಕೇಳಿದರು. ಜನ್ ಸುರಾಜ್ ಪಕ್ಷವನ್ನು ಸ್ಥಾಪಿಸಿ, ಚುನಾವಣೆ ಸ್ಪರ್ಧೆಯನ್ನು ಘೋಷಿಸಿದರು.
ಚುನಾವಣೆಗೆ ಪ್ರಚಾರದಲ್ಲಿ ಜನ ಸೇರಿದರು ಕೂಡ ಅವು ಮತಗಳಾಗಿ ಪರಿವರ್ತನೆಯಾಗದಿರುವುದು ಕಿಶೋರ್ ದೊಡ್ಡ ಪೆಟ್ಟು ಬಿದ್ದಿದೆ. ಅನೇಕರು ಜನ್​ ಸುರಾಜ್​ ಅತಂತ್ರ ವಿಧಾನಸಭೆಗೆ ಕಾರಣವಾಗಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಜನ್ ಸುರಾಜ್ ಅಭ್ಯರ್ಥಿಗಳಲ್ಲಿ ಭೋಜ್‌ಪುರಿ ಗಾಯಕರು, ಮಾಜಿ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ಇತರ ಪಕ್ಷಗಳೊಂದಿಗೆ ಹಿಂದಿನ ಅನುಭವಿ ರಾಜಕಾರಣಿಗಳಿದ್ದರು.
ಚುನಾವಣಾ ಪೂರ್ವ ಸಂದರ್ಶನಗಳಲ್ಲಿ ಮಾತನಾಡಿದ್ದ ಪಿಕೆ, ಜನ್ ಸುರಾಜ್ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ ನೀವು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಕಿಶೋರ್, ಬಿಹಾರಕ್ಕೆ 10 ವರ್ಷಗಳನ್ನು ಮೀಸಲಿಟ್ಟಿದ್ದು, ಮುಂದಿನ ಐದು ವರ್ಷಗಳ ಕಾಲ ರಾಜ್ಯಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಫಲಿತಾಂಶದ ನಂತರ ಪ್ರತಿಕ್ರಿಯೆ ನೀಡಿರುವ ಜನ್ ಸುರಾಜ್‌ನ ಬಿಹಾರ ಮುಖ್ಯಸ್ಥ ಮನೋಜ್ ಭಾರ್ತಿ, ನಮ್ಮ ಪಕ್ಷ ಜನರು ಅರ್ಥಮಾಡಿಕೊಳ್ಳಲು ವಿಫಲವಾಯಿತು, ನಾವು ಮತ್ತೆ ಇಲ್ಲಿಂದ ಪ್ರಾರಂಭಿಸುತ್ತೇವೆ ಎಂದು ಹೇಳಿದರು(ಏಜೆನ್ಸೀಸ್​).