ಚೆನ್ನೈ: ಕೆಲವೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತರೂಢ ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರ ಸೀಟು ಮತ್ತು ಅಧಿಕಾರ ಹಂಚಿಕೆಯ ವಾಗ್ವಾದಗಳಿಗೆ ಫುಲ್ ಸ್ಟಾಪ್ ಇಟ್ಟಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಅಧಿಕಾರ ಹಂಚಿಕೆ ಕಾಂಗ್ರೆಸ್ನ ಅಧಿಕೃತ ಬೇಡಿಕೆಯಲ್ಲ ಎಂದು ಹೇಳಿದ್ದಾರೆ.
ಮಂಗಳವಾರ(ಫೆ. 17) ಚೆನ್ನೈನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿರುವ ಅವರು, ಕಾಂಗ್ರೆಸ್ ಮತ್ತು ಡಿಎಂಕೆ ಕೋಮುವಾದಿ ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡುವ ಹಂಚಿಕೆಯ ಬದ್ಧತೆಯಿಂದ ಒಗ್ಗಟ್ಟಿನ ದೀರ್ಘಕಾಲದ ಮಿತ್ರ ಪಕ್ಷಗಳಾಗಿ ಉಳಿದಿವೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿ ಪಾಲು ಪಡೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ಎಲ್ಲಾ ಹೇಳಿಕೆಗಳು ಪಕ್ಷದ ನಿಲುವಲ್ಲ. ಅದು ವ್ಯಕ್ತಿಯ ಅಭಿಪ್ರಾಯವಾಗಿರಬಹುದು. ಆದರೆ ಮೈತ್ರಿ ವಿಷಯಗಳಲ್ಲಿ ಯಾವುದೇ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಮಾತ್ರ ತೆಗೆದುಕೊಳ್ಳುತ್ತದೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ, ಮೈತ್ರಿ ಪಾಲುದಾರರ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದೀರ್ಘ ಮೈತ್ರಿಯಿಂದಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟು ಜೊತೆ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ಮಾಣಿಕಂ ಟ್ಯಾಗೋರ್, ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ಹೇಳಿದ್ದರು. ಇದಕ್ಕೆ ಡಿಎಂಕೆ ನಾಯಕರು ಅಧಿಕಾರ ಹಂಚಿಕೆಯ ಮಾತೇ ಇಲ್ಲ ಎಂದು ತಿರುಗೇಟು ನೀಡಿದ್ದರು (ಏಜೆನ್ಸೀಸ್).