'ನಿತೀಶ್ ಸೇತು' ಉದ್ಘಾಟಿಸಿ ಎನ್‌ಡಿಎ ಸಾಧನೆ ಬಣ್ಣಿಸಿದ ಪ್ರಧಾನಿ ಮೋದಿ!  
ದೇಶ

ಹಿಂದಿನ ಸರ್ಕಾರಗಳಿಂದ ಬಡವರ ಲೂಟಿ! 'ನಿತೀಶ್ ಸೇತು' ಉದ್ಘಾಟಿಸಿ ಎನ್‌ಡಿಎ ಅಭಿವೃದ್ಧಿಯ ಪಯಣ ಸ್ಮರಿಸಿದ ಪ್ರಧಾನಿ ಮೋದಿ | Narendra Modi

ಪಟನಾ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ಬಿಹಾರದಲ್ಲಿ 34,470 ಕೋಟಿ ರೂ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಗಂಗಾ ನದಿಗೆ ಅಡ್ಡಲಾಗಿ ಮಾಜಿ ಸಿಎಂ ನಿತೀಶ್ ಕುಮಾರ್​ ಅವರ ಹೆಸರಿನಲ್ಲಿ (ನಿತೀಶ್ ಸೇತು) ನಿರ್ಮಿಸಲಾಗಿರುವ ಆರು ಪಥದ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ವೇಳೆ ಎನ್‌ಡಿಎ ಡಬಲ್​ ಇಂಜಿನ್​ ಸರ್ಕಾರದ ಆಡಳಿತದಲ್ಲಿ ಬಿಹಾರದ ಅಭಿವೃದ್ಧಿಯನ್ನು ಶ್ಲಾಘಿಸುತ್ತಾ, ಹಿಂದಿನ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವೈಶಾಲಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸುತ್ತಿರುವ ಸಂಭ್ರಮದಲ್ಲಿದೆ ಎಂದರು. ರಾಜ್ಯದ ಅಭಿವೃದ್ಧಿ, ಮೂಲಸೌಕರ್ಯ ವೃದ್ಧಿ ಮತ್ತು ಸಂಪರ್ಕ ಸುಧಾರಣೆಯಲ್ಲಿ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧಿಕಾರಾವಧಿಯು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿನ ಆಡಳಿತಗಳ ವಿರುದ್ಧ ಕಿಡಿಕಾರಿದ ಪ್ರಧಾನಿ, ಹಿಂದಿನ ಸರ್ಕಾರಗಳು ಬಡವರನ್ನು ಲೂಟಿ ಮಾಡಿದ್ದವು ಎಂದು ಟೀಕಿಸಿದರು. ರಾಜ್ಯದಲ್ಲಿ ರಸ್ತೆ ನಿರ್ಮಾಣದ ವೇಗವನ್ನು ಪ್ರಸ್ತಾಪಿಸಿದ ಅವರು, ಇಂದು ಬಿಹಾರದಲ್ಲಿ ರಸ್ತೆ ಜಾಲವನ್ನು ಅತ್ಯಂತ ವೇಗವಾಗಿ ನಿರ್ಮಿಸಲಾಗುತ್ತಿದೆ ಎಂದರು. ವಿದ್ಯುತ್ ಉತ್ಪಾದನೆಯಲ್ಲಿ ಬಿಹಾರ ಸಾಧಿಸಿರುವ ಪ್ರಗತಿಯನ್ನು ಸ್ಮರಿಸಿದ ಮೋದಿ, ಒಂದು ಕಾಲದಲ್ಲಿ ಬಿಹಾರದ ಹಳ್ಳಿಗಳಲ್ಲಿ ವಿದ್ಯುತ್ ಇರುತ್ತಿರಲಿಲ್ಲ. ಆದರೆ ಇಂದು ಬಿಹಾರವು ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

'ನಿತೀಶ್ ಸೇತು' ಸೇತುವೆಯ ವಿಶೇಷತೆಗಳೇನು?

ಸುಮಾರು 4,280 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಆರು ಪಥದ 'ನಿತೀಶ್ ಸೇತು' ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಒಟ್ಟು 19.7 ಕಿ.ಮೀ ಉದ್ದದ ಈ ಯೋಜನೆಯು 9.7 ಕಿ.ಮೀ ಮುಖ್ಯ ಸೇತುವೆ ಮತ್ತು 10 ಕಿ.ಮೀ ಸಂಪರ್ಕ ರಸ್ತೆಗಳನ್ನು ಒಳಗೊಂಡಿದ್ದು, ಪಟನಾ ಜಿಲ್ಲೆಯ ಕಚ್ಚಿ ದರ್ಗಾವನ್ನು (NH-22) ವೈಶಾಲಿ ಜಿಲ್ಲೆಯ ಬಿದುಪುರದೊಂದಿಗೆ (NH-322) ಸಂಪರ್ಕಿಸುತ್ತದೆ. ಈ ಸೇತುವೆಯು ಗಂಗಾ ನದಿಯ ಮೇಲಿನ ಮಹಾತ್ಮ ಗಾಂಧಿ ಸೇತು ಮತ್ತು ಜೆಪಿ ಸೇತುವೆಗಳ ಮೇಲಿನ ಸಂಚಾರ ದಟ್ಟಣೆಯನ್ನು ತಗ್ಗಿಸಲಿದ್ದು, ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ. ಈ ಯೋಜನೆಯ ಅಭಿವೃದ್ಧಿಯಲ್ಲಿ ನಿತೀಶ್ ಕುಮಾರ್ ವಹಿಸಿದ ಪಾತ್ರವನ್ನು ಗೌರವಿಸಿ ಸೇತುವೆಗೆ ಅವರ ಹೆಸರನ್ನು ಇಡಲಾಗಿದೆ.

ರಸ್ತೆ ಸಂಪರ್ಕ, ಇಂಧನ, ನಗರ ಮೂಲಸೌಕರ್ಯ, ಜಲಸಂಪನ್ಮೂಲ, ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳಿಗೆ ಸಂಬಂಧಿಸಿದ 15,600 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಇದರಲ್ಲಿ 660 ಮೆಗಾವ್ಯಾಟ್ ಸಾಮರ್ಥ್ಯದ ಬಕ್ಸಾರ್ ಉಷ್ಣ ವಿದ್ಯುತ್ ಯೋಜನೆಯ 2ನೇ ಘಟಕ, ವಿದ್ಯುತ್ ಪ್ರಸರಣ ಮತ್ತು ವಿತರಣಾ ಕಾಮಗಾರಿಗಳು, ಕಾಲುವೆಗಳ ಪುನಶ್ಚೇತನ, ನವಾಡಾದಲ್ಲಿ ತೇಲುವ ಸೌರ ವಿದ್ಯುತ್ ಯೋಜನೆ ಹಾಗೂ ಒಳಚರಂಡಿ ಸೌಲಭ್ಯಗಳು ಸೇರಿವೆ.

ಇದರೊಂದಿಗೆ ಹೆದ್ದಾರಿ ವಿಸ್ತರಣೆ, ವಿದ್ಯುತ್ ಮೂಲಸೌಕರ್ಯ, ನೀರು ಸರಬರಾಜು ಮತ್ತು ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಸೇರಿದಂತೆ ಸುಮಾರು 14,450 ಕೋಟಿ ರೂ ಮೌಲ್ಯದ ಹೊಸ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು 100 ಎಲೆಕ್ಟ್ರಿಕ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ 26,900ಕ್ಕೂ ಹೆಚ್ಚು ಫಲಾನುಭವಿಗಳ ಗೃಹಪ್ರವೇಶ ಕಾರ್ಯಕ್ರಮದಲ್ಲೂ ಪಾಲ್ಗೊಂಡರು(ಏಜೆನ್ಸೀಸ್​).