ಶಾಸಕ ವಿ.ಎಸ್. ಬಾಬು ನಿಧನ: ಕೊಳತ್ತೂರು ಉಪಚುನಾವಣೆಯಲ್ಲಿ ಸ್ಟಾಲಿನ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಾರಾ? | M K Stalin

ಕೊಳತ್ತೂರು ಉಪಚುನಾವಣೆಯಲ್ಲಿ ಸ್ಟಾಲಿನ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಾರಾ?
ಕೊಳತ್ತೂರು ಉಪಚುನಾವಣೆಯಲ್ಲಿ ಸ್ಟಾಲಿನ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಾರಾ?
Published on: 

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮುಖ್ಯಸ್ಥ, ಮಾಜಿ ಸಿಎಂ ಎಂ ಕೆ ಸ್ಟಾಲಿನ್ (M K Stalin) ಅವರನ್ನು ಸೋಲಿಸಿ ಜೈಂಟ್ ಕಿಲ್ಲರ್ ಆಗಿ ಹೊರಹೊಮ್ಮಿದ್ದ ತಮಿಳಗ ವೆಟ್ರಿ ಕಳಗಂ ಪಕ್ಷದ ಶಾಸಕ ವಿ ಎಸ್ ಬಾಬು (75) ಅವರ ನಿಧನರಾಗಿದ್ದು, ಈ ಹಿನ್ನಲೆಯಲ್ಲಿ ಸ್ಟಾಲಿನ್ ಅವರು ವಿಧಾನಸಭೆ ಪ್ರವೇಶಿಸಲು ಎರಡನೇ ಪ್ರಯತ್ನ ನಡೆಸಲಿದ್ದಾರೆಯೇ ಎಂಬ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ಜೋರಾಗಿವೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಿ ಎಸ್ ಬಾಬು ಅವರು ಗುರುವಾರ (ನವೆಂಬರ್ 19) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಅಕಾಲಿಕ ಮರಣದಿಂದಾಗಿ ಕೊಳತ್ತೂರು ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ನಿಯಮದ ಪ್ರಕಾರ 6 ತಿಂಗಳೊಳಗೆ ಇಲ್ಲಿ ಉಪಚುನಾವಣೆ ನಡೆಯುವುದು ಅನಿವಾರ್ಯವಾಗಿದೆ. 2011ರಿಂದ ಸತತವಾಗಿ ಸ್ಟಾಲಿನ್ ಪ್ರತಿನಿಧಿಸುತ್ತಿದ್ದ ಭದ್ರಕೋಟೆ ಕೊಳತ್ತೂರಿನಲ್ಲಿ, ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಅತ್ಯಂತ ಅಚ್ಚರಿಯ ಫಲಿತಾಂಶ ದಾಖಲಾಗಿತ್ತು. ಸದ್ಯ ಸಿಎಂ ಆಗಿರುವ ವಿಜಯ್ ಸ್ಥಾಪಿಸಿದ್ದ ಟಿವಿಕೆ ಎದುರು ಡಿಎಂಕೆ ಅಧಿಕಾರ ಕಳೆದುಕೊಂಡಿದ್ದಷ್ಟೇ ಅಲ್ಲದೆ, ಸ್ವತಃ ಸ್ಟಾಲಿನ್ ಕೂಡ ತಮ್ಮದೇ ಕ್ಷೇತ್ರದಲ್ಲಿ ಸೋಲುಂಡು ತೀವ್ರ ಮುಖಭಂಗ ಅನುಭವಿಸಿದ್ದರು.

ಸ್ಟಾಲಿನ್ ಸ್ಪರ್ಧೆಗೆ ಡಿಎಂಕೆ ಒತ್ತಾಯ

ಕೊಳತ್ತೂರು ಉಪಚುನಾವಣೆಯಲ್ಲಿ ಸ್ಟಾಲಿನ್ ಅವರು ಮತ್ತೊಮ್ಮೆ ಕಣಕ್ಕಿಳಿಯಬೇಕು ಎಂಬ ಕೂಗು ಈಗಾಗಲೇ ಡಿಎಂಕೆ ಪಕ್ಷದ ಒಳಗಿನಿಂದ ಕೇಳಿಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಸಂಸದ ಸಿ. ರವೀಂದ್ರನ್, ಅದು ನಮ್ಮ ನಾಯಕರ ಕ್ಷೇತ್ರ, ಅಂತಿಮ ನಿರ್ಧಾರ ಅವರಿಗೇ ಬಿಟ್ಟಿದ್ದು. ಒಬ್ಬ ಡಿಎಂಕೆ ಕಾರ್ಯಕರ್ತನಾಗಿ ಅವರು ಮತ್ತೆ ಸ್ಪರ್ಧಿಸಿದರೆ ನಮಗೆ ತುಂಬಾ ಸಂತೋಷವಾಗುತ್ತದೆ. ಆದರೆ ಈ ಬಗ್ಗೆ ನಮ್ಮ ನಾಯಕರು ಮಾತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಅಭ್ಯರ್ಥಿಯಾಗಿದ್ದ ವಿ.ಎಸ್. ಬಾಬು ಅವರು 82,997 ಮತಗಳನ್ನು ಪಡೆದು, 74,202 ಮತಗಳನ್ನು ಪಡೆದಿದ್ದ ಸ್ಟಾಲಿನ್ ಅವರನ್ನು 8,795 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಈ ಮೂಲಕ ಕೊಳತ್ತೂರಿನಲ್ಲಿ ಸ್ಟಾಲಿನ್ ಅವರ ಸತತ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದರು.

Also Read
MK ಸ್ಟಾಲಿನ್ ಸೋಲಿಗೆ ಕಾರಣರಾಗಿದ್ದ ಟಿವಿಕೆ ಶಾಸಕ ವಿಎಸ್​​ ಬಾಬು ನಿಧನ; ಸಿಎಂ ಸೇರಿದಂತೆ ಗಣ್ಯರಿಂದ ಸಂತಾಪ
ಕೊಳತ್ತೂರು ಉಪಚುನಾವಣೆಯಲ್ಲಿ ಸ್ಟಾಲಿನ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಾರಾ?

ರಾಜಕೀಯ ವಲಯದಲ್ಲಿ ಪುರಸೈ ಬಾಬು ಎಂದೇ ಮನೆ ಮಾತಾಗಿದ್ದ ವಿ ಎಸ್ ಬಾಬು ಅವರು ತಮ್ಮ ರಾಜಕೀಯ ಜೀವನವನ್ನು ಡಿಎಂಕೆಯಿಂದಲೇ ಆರಂಭಿಸಿದ್ದರು. ಪಕ್ಷದಲ್ಲಿ ಹಂತ ಹಂತವಾಗಿ ಬೆಳೆದು ಚೆನ್ನೈ (ಉತ್ತರ) ಜಿಲ್ಲಾ ಕಾರ್ಯದರ್ಶಿಯಾಗಿದ್ದರು ಮತ್ತು 2006ರಲ್ಲಿ ಪುರಸವಾಕ್ಕಂ ಕ್ಷೇತ್ರದಿಂದ ಡಿಎಂಕೆ ಶಾಸಕರಾಗಿ ಆಯ್ಕೆಯಾಗಿದ್ದರು. 2011ರಲ್ಲಿ ಸ್ಟಾಲಿನ್ ಕೊಳತ್ತೂರಿನಿಂದ ಮೊದಲ ಬಾರಿಗೆ ಸ್ಪರ್ಧಿಸಿದಾಗ ಅವರ ಗೆಲುವಿಗೆ ಬಾಬು ಶ್ರಮಿಸಿದ್ದರು. ನಂತರದ ದಿನಗಳಲ್ಲಿ ಭಿನ್ನಾಭಿಪ್ರಾಯದಿಂದ ಡಿಎಂಕೆ ತೊರೆದು 2016ರಲ್ಲಿ ಎಐಎಡಿಎಂಕೆ ಸೇರಿದ್ದ ಅವರು, 2026ರ ವಿಧಾನಸಭಾ ಚುನಾವಣೆಗೂ ಮುನ್ನ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಟಾಲಿನ್ ವಿರುದ್ಧವೇ ತೊಡೆತಟ್ಟಿ ಗೆಲುವು ಸಾಧಿಸಿದ್ದರು.

ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣ!

ಡಿಎಂಕೆ ಪಾಲಿಗೆ ಈ ಉಪಚುನಾವಣೆಯು ವಿಧಾನಸಭಾ ಚುನಾವಣೆಯ ಸೋಲಿನ ನಂತರ ಕಳೆದುಕೊಂಡಿರುವ ರಾಜಕೀಯ ವರ್ಚಸ್ಸನ್ನು ಮರಳಿ ಪಡೆಯಲು ಒಂದು ಉತ್ತಮ ಅವಕಾಶವಾಗಿದೆ. ಆದರೆ, ಕೊಳತ್ತೂರಿನಲ್ಲಿ ಎರಡನೇ ಬಾರಿ ಸ್ಪರ್ಧಿಸುವುದು ಸ್ಟಾಲಿನ್ ಅವರಿಗೆ ದೊಡ್ಡ ಸವಾಲೂ ಹೌದು. ಒಂದು ವೇಳೆ ಅನುಕಂಪದ ಅಲೆಯಲ್ಲಿ ಸೋಲು ಅನುಭವಿಸಿದರೆ ಅದು ಮತ್ತೊಂದು ಮುಖಭಂಗಬಹುದು.

ಮತ್ತೊಂದೆಡೆ, ಆಡಳಿತಾರೂಢ ಟಿವಿಕೆ ಪಕ್ಷಕ್ಕೆ ಕೊಳತ್ತೂರು ಕ್ಷೇತ್ರವನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯ ಭದ್ರಕೋಟೆಯನ್ನು ಭೇದಿಸಿ ಗಳಿಸಿದ್ದ ಜನಬೆಂಬಲವನ್ನು ಮುಖ್ಯಮಂತ್ರಿ ವಿಜಯ್ ಅವರ ಪಕ್ಷವು ಈಗಲೂ ಉಳಿಸಿಕೊಂಡಿದೆಯೇ ಎಂಬುದಕ್ಕೆ ಈ ಉಪಚುನಾವಣೆ ಅಗ್ನಿಪರೀಕ್ಷೆಯಾಗಲಿದೆ(ಏಜೆನ್ಸೀಸ್​).