ಮುಂಬೈ: ಮಹಾರಾಷ್ಟ್ರದ ಎರಡೂ ಎನ್‌ಸಿಪಿ ಬಣಗಳು ವಿಲೀನವಾಗುತ್ತವೇ ಎಂಬ ಚರ್ಚೆಯನ್ನು ತಳ್ಳಿ ಹಾಕಿರುವ ಶರದ್ ಪವಾರ್ ಅವರ ಮೊಮ್ಮಗ ಮತ್ತು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಇದು ಪೊಲಿಟಿಕಲ್ ನೇರೆಟಿವ್ ಸೃಷ್ಟಿಸುವ ಊಹಾಪೋಹಗಳು ಎಂದು ಹೇಳಿದ್ದಾರೆ.
ತಮ್ಮ ಅಜ್ಜ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ನಿವಾಸದಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, ಶರದ್ ಪವಾರ್ ಅಥವಾ ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಬಿಜೆಪಿಯೊಂದಿಗೆ ವಿಲೀನ ಅಥವಾ ಯಾವುದೇ ಸಂಭಾವ್ಯ ಹೊಂದಾಣಿಕೆಯ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ.
ವಿಲೀನ ಮಾತುಕತೆ ನಡೆಯುತ್ತಿದ್ದರೆ, ಸುಪ್ರಿಯಾ ತಾಯಿ ಅಥವಾ ಪವಾರ್ ಸಾಹೇಬ್ ನನ್ನೊಂದಿಗೆ ಮಾತನಾಡುತ್ತಿದ್ದರು. ನಮ್ಮ ಪಕ್ಷದಲ್ಲಿ ವಿಲೀನದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಚರ್ಚೆ ಅಜಿತ್ ದಾದಾ ಅವರ ಪಕ್ಷ ಮತ್ತು ಮಾಧ್ಯಮಗಳಲ್ಲಿ ಮಾತ್ರ. ಈ ವರದಿಗಳು ನಿರ್ದಿಷ್ಟ ರಾಜಕೀಯ ನಿರೂಪಣೆಯನ್ನು ಸೃಷ್ಟಿಸುವ ಪ್ರಯತ್ನದ ಭಾಗವಾಗಿವೆ ಎಂದು ತಿಳಿಸಿದ್ದಾರೆ.
ಪ್ರಫುಲ್ ಪಟೇಲ್ ಮತ್ತು ಪಾರ್ಥ್ ಪವಾರ್ ಸೇರಿದಂತೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಹಲವಾರು ನಾಯಕರು ಇತ್ತೀಚೆಗೆ ಎದೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಶರದ್ ಪವಾರ್ ಅವರನ್ನು ಭೇಟಿಯಾದ ನಂತರ ಕಳೆದ ವಾರ ಸಂಭಾವ್ಯ ವಿಲೀನದ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ.
ಊಹಾಪೋಹಗಳ ನಡುವೆಯೇ, ಅಜಿತ್ ಪವಾರ್ ಜೀವಂತವಾಗಿದ್ದರೆ ಈ ವರ್ಷದ ಫೆಬ್ರವರಿಯಲ್ಲಿ ಎರಡೂ ಬಣಗಳ ವಿಲೀನ ನಡೆಯುತ್ತಿತ್ತು ಎಂದು ಎನ್‌ಸಿಪಿ ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ ಹೇಳಿದ್ದರು (ಏಜೆನ್ಸೀಸ್).