ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮ ಮುಂದುವರೆದಿದ್ದು, ಗಂಟೆ-ಗಂಟೆಗೂ ತಿರುವು ಪಡೆಯುತ್ತಿದ್ದು, ಇಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದತೆ ನಡೆಸಿದ್ದ ದಳಪತಿ ವಿಜಯ್ಗೆ ಶುಕ್ರವಾರ(ಮೇ 08) ರಾತ್ರಿ ವಿಸಿಕೆ ಮತ್ತು ಮುಸ್ಲಿಂ ಲೀಗ್ ಶಾಕ್ ನೀಡಿದ್ದು, ಬೆಂಬಲ ನೀಡಿದ್ದನ್ನು ವಾಪಸ್ ಪಡೆದಿವೆ.
ಶುಕ್ರವಾರ ಸಂಜೆ ಮೂರನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾಗಿದ್ದ ದಳಪತಿ ವಿಜಯ್ ಎಡಪಕ್ಷಗಳು ಸೇರಿ 116 ಶಾಸಕರ ಬೆಂಬಲ ಪತ್ರವನ್ನು ನೀಡಿ, ವಿಸಿಕೆ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಬೆಂಬಲಿಸುತ್ತವೆ ಎಂದು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ, ವಿಜಯ್ ಹಕ್ಕು ಮಂಡಿಸಿದ ಎರಡು ಗಂಟೆಗಳಲ್ಲಿ ವಿದುತಲೈ ಚಿರುತೈಗಲ್ ಕಚ್ಚಿ(ವಿಸಿಕೆ) ಮತ್ತು ಮುಸ್ಲಿಂ ಲೀಗ್ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಮಾಡಿವೆ.
ಈ ಹಿನ್ನೆಲೆ 118 ಸಂಖ್ಯೆಯ ಬಹುಮತಕ್ಕೆ ಎರಡು ಶಾಸಕರ ಬೆಂಬಲದ ಕೊರತೆ ಹಿನ್ನೆಲೆ ನಟ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರದ ಬಗ್ಗೆ ರಾಜ್ಯಪಾಲ ರಾಜೇಂದ್ರ ರೇಲೇಕರ್ ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ. ಲೋಕ ಭವನದ ಮೂಲಗಳ ಪ್ರಕಾರ ರಾಜ್ಯಪಾಲರು ವಿಸಿಕೆ ಪತ್ರಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ವಿಸಿಕೆ, ಉನ್ನತ ಮಟ್ಟದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಆಧಾರದ ಮೇಲೆ, ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಏತನ್ಮಧ್ಯೆ, ಮಾಧ್ಯಮಗಳಲ್ಲಿ ಎರಡು ವಿಭಿನ್ನ ಮತ್ತು ಸಂಘರ್ಷದ ಅಭಿಪ್ರಾಯಗಳು ಪ್ರಸಾರವಾಗುತ್ತಿದ್ದು, ಇದು ತಮಿಳುನಾಡಿನ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆ. ನಮ್ಮ ಪಕ್ಷದ ಸಕಾರಾತ್ಮಕ ಇಮೇಜ್ ಮೇಲೆ ಪರಿಣಾಮ ಬೀರುತ್ತದೆ. ಬೆಂಬಲ ನೀಡಬೇಕೇ?, ಬೇಡವೋ ಎಂಬ ಬಗ್ಗೆ ಶನಿವಾರ(ಮೇ 09) ನಮ್ಮ ನಾಯಕರು ಅಧಿಕೃತವಾಗಿ ಘೋಷಣೆ ಮಾಡ್ತಾರೆ ಎಂದು ತಿಳಿಸಿದೆ.
ಇನ್ನೂ ವಿಸಿಕೆ ಬಾಹ್ಯ ಬೆಂಬಲವಷ್ಟೇ ಅಲ್ಲದೇ, ಸರ್ಕಾರದ ಭಾಗವಾಗಲು ಇಚ್ಚೇ ವ್ಯಕ್ತಪಡಿಸಿದೆ ಎನ್ನಲಾಗಿದೆ. ಪಕ್ಷದ ಮುಖ್ಯಸ್ಥ ತೋಲ್ ತಿರುಮಾವಲವನ್ಗೆ ಡಿಸಿಎಂ ಹುದ್ದೆ ನೀಡುವಂತೆ ಬೇಡಿಕೆಯಿಟ್ಟಿದೆ. ಮುಸ್ಲಿಂ ಲೀಗ್ ಅಭಿಪ್ರಾಯವೂ ಅದೇ ಆಗಿದೆ ಎನ್ನಲಾಗಿದೆ (ಏಜೆನ್ಸೀಸ್).