ಪೊಲೀಸರ ಮೇಲೆ ಹಲ್ಲೆ ನಡೆಸಿ ಸ್ಟೇಷನ್ ಧ್ವಂಸಗೊಳಿಸಿದ 40 ಸೈನಿಕರ ವಿರುದ್ಧ ಎಫ್‌ಐಆರ್ ದಾಖಲು
- ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಹೈಡ್ರಾಮಾ!
- ಪೊಲೀಸರ ಮೇಲೆ ಹಲ್ಲೆ ನಡೆಸಿ ಸ್ಟೇಷನ್ ಧ್ವಂಸಗೊಳಿಸಿದ 40 ಸೈನಿಕರ ವಿರುದ್ಧ ಎಫ್‌ಐಆರ್
- ರಾಷ್ಟ್ರೀಯ ರೈಫಲ್ಸ್ ನ ಕರ್ನಲ್, ಮೇಜರ್ ಸೇರಿದಂತೆ 40 ಸೇನಾ ಸಿಬ್ಬಂದಿ ವಿರುದ್ಧ ಕೊಲೆ ಯತ್ನ ಕೇಸ್
ಕಾಶ್ಮೀರ: ಪೊಲೀಸ್ ಠಾಣೆಗೆ ನುಗ್ಗಿ, ಅಧಿಕಾರಿಗಳನ್ನು ಥಳಿಸಿ, ಸ್ಟೇಷನ್ನನ್ನು ಧ್ವಂಸಗೊಳಿಸಿದ (Soldiers Attrack on Police Station) ಆರೋಪದಲ್ಲಿ ಸುಮಾರು 40 ಜನ ಸೈನಿಕರ ಮೇಲೆ ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಎಫ್‌ಐಆರ್ ದಾಖಲಾದ ಘಟನೆ ವರದಿಯಾಗಿದೆ.
ಎಫ್‌ಐಆರ್ ಪ್ರಕಾರ, 17 ನೇ ರಾಷ್ಟ್ರೀಯ ರೈಫಲ್ಸ್ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಎನ್ ಅರುಣ್ ಗಾಂಧಿ, ಮೇಜರ್ ವಿಕಾಸ್ ಶರ್ಮಾ, ನಾಯಬ್ ಸುಬೇದಾರ್ ಶಂಕರ್ ಗುರ್ಖೆ ಸೇರಿದಂತೆ 30 ರಿಂದ 40 ಸೇನಾ ಸಿಬ್ಬಂದಿಗಳು, ಅಥೋಲಿ ಪೊಲೀಸ್ ಠಾಣೆಗೆ ಬಲವಂತವಾಗಿ ನುಗ್ಗಿದ್ದಾರೆ.
ಸೇನಾ ಸಿಬ್ಬಂದಿ ಮೇಲೆ ಎಫ್‌ಐಆರ್ ದಾಖಲು
ಠಾಣೆಗೆ ಅಕ್ರಮ ಪ್ರವೇಶಿದ ಸೇನಾ ಸಿಬ್ಬಂದಿಗಳು, ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದಷ್ಟೇ ಅಲ್ಲದೇ ಸಾರ್ವಜನಿಕ ಆಸ್ತಿಯಾದ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾಗಿ ಎಫ್ಐಆರ್ನಲ್ಲಿ ನಮೂದಿಸಲಾಗಿದೆ. ಸೇನಾ ಸಿಬ್ಬಂದಿಗಳ ಮೇಲೆ ಕೊಲೆ ಆರೋಪದ ಜೊತೆಗೆ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡ ಪಡಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ನಾವು ತನಿಖೆಗೆ ಸಿದ್ಧ: ಸೇನಾ ವಕ್ತಾರ
ಈ ಘಟನೆಗೆ ಪ್ರತಿಕ್ರಿಸಿರುವ ಸೇನಾ ವಕ್ತಾರರು, ನಾವು ಈ ಘಟನೆಗೆ ಸಂಬಂಧಿಸಿ ನಡೆಯಲಿರುವ ತನಿಖೆಗೆ ಸಂಪೂರ್ಣ ಬೆಂಬಲ ನೀಡುತ್ತೆವೆ. ಅದರೆ ಇಲ್ಲಿ ಕೇವಲ ಪೊಲೀಸರು ಮಾತ್ರವಲ್ಲ, ಸೇನೆ ಕೂಡ ತನಿಖೆ ನಡೆಸಲಿದೆ. ಎರಡು ತಂಡಗಳು ತನಿಖೆ ನಡೆಸಿ ಸಾಕ್ಷ್ಯಾಧಾರ ಆಧಾರದಲ್ಲಿ ಶಿಕ್ಷೆ ಪ್ರಕಟಿಸೋಣ ಎಂದು ಹೇಳಿದ್ದಾರೆ.
ಮಿಲಿಟರಿ ವಾಹನ ಜಫ್ತಿಯೇ ಕಾರಣ?
ಕೆಲ ದಿನಗಳ ಹಿಂದೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಒಬ್ಬರು ಮಿಲಿಟರಿ ವಾಹನವನ್ನು ತಡೆದು ನಿಲ್ಲಿಸಿ, ವಾಹನವನ್ನು ಜಫ್ತಿ ಮಾಡಿದ್ದರಂತೆ. ಪೊಲೀಸ್ ಠಾಣೆಯಲ್ಲಿ ಈ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಇರುವುದನ್ನು ಖಾತರಿ ಪಡೆಸಿಕೊಂಡ ಸೇನಾ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಆರೋಪದ ಪ್ರಕಾರ, ಠಾಣೆಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಕಬ್ಬಿಣದ ರಾಡ್ಗಳಿಂದ ದಾಳಿ ಮಾಡಿದ್ದು, ಸಮವಸ್ತ್ರವನ್ನು ಕೂಡ ಹರಿದು ಹಾಕಿದ್ದಾರೆಂದು ಆರೋಪಿಸಲಾಗಿದೆ. ಅಂತೆಯೇ, ಪೊಲೀಸ್ ಠಾಣೆಯ ಮುಖ್ಯ ದ್ವಾರವನ್ನು ಒಡೆದುಹಾಕಲಾಗಿದ್ದು, ಪೊಲೀಸ್ ಜೀಪ್ಗಳಿಗೆ ಕೂಡ ಹಾನಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).