ಐಜಿಪಿ ಕಾರನ್ನು ಹಲ್ಲಿನಿಂದ ಕಚ್ಚಿ ಎಳೆದು ವಿದಾಯ ಹೇಳಿದ 'ಬಾಹುಬಲಿ' ಕಾನ್‌ಸ್ಟೆಬಲ್ ಸುನಿಲ್
- ಐಜಿಪಿಗೆ ವಿಶಿಷ್ಟ ವಿದಾಯ
- ಗ್ವಾಲಿಯರ್‌ನಲ್ಲಿ ನಿವೃತ್ತರಾದ ಐಜಿ ಅರವಿಂದ್ ಸಕ್ಸೇನಾ
- ಐಜಿಪಿ ಕಾರನ್ನು ಹಲ್ಲಿನಿಂದ ಕಚ್ಚಿ ಎಳೆದು ವಿದಾಯ ಹೇಳಿದ 'ಬಾಹುಬಲಿ' ಕಾನ್‌ಸ್ಟೆಬಲ್ ಸುನಿಲ್
ಗ್ವಾಲಿಯರ್: ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಅಥವಾ ನಿವೃತ್ತಿ (Police Retirement Farewell) ಸಂದರ್ಭದಲ್ಲಿ ಸನ್ಮಾನ, ಹೂಗುಚ್ಛ ನೀಡುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ನಿವೃತ್ತಿ ಸಮಾರಂಭವೊಂದು ಈಗ ಸೋಷಿಯಲ್ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿದೆ.
ನಿವೃತ್ತರಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಾನ್‌ಸ್ಟೆಬಲ್ ಒಬ್ಬರು ನೀಡಿದ ವಿನೂತನ ಹಾಗೂ ಅಚ್ಚರಿಯ ವಿದಾಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಗ್ವಾಲಿಯರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (IGP) ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಅರವಿಂದ್ ಸಕ್ಸೇನಾ ಅವರಿಗೆ ಪೊಲೀಸ್ ಇಲಾಖೆಯಿಂದ ಅದ್ಧೂರಿ ಹಾಗೂ ವಿಶಿಷ್ಟ ವಿದಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ಎಲ್ಲರೂ ನಿರೀಕ್ಷಿಸದ ಒಂದು ಅಸಾಮಾನ್ಯ ಘಟನೆ ನಡೆಯಿತು.
ಹಲ್ಲುಗಳಿಂದ ಕಾರು ಎಳೆದ 'ಬಾಹುಬಲಿ' ಸುನಿಲ್!
ವಿದಾಯ ಸಮಾರಂಭ ಮುಗಿದ ಬಳಿಕ ನಿವೃತ್ತ ಐಜಿ ಅರವಿಂದ್ ಸಕ್ಸೇನಾ ಅವರು ತಮ್ಮ ಕಾರಿನಲ್ಲಿ ಕಚೇರಿಯಿಂದ ಹೊರಡಲು ಸಿದ್ಧರಾದರು. ಈ ವೇಳೆ ಪೊಲೀಸ್ ಕಾನ್‌ಸ್ಟೆಬಲ್ ಸುನಿಲ್, ಎಲ್ಲರ ಎದುರು ಅಸಾಧಾರಣ ಸಾಹಸ ಪ್ರದರ್ಶಿಸಲು ಮುಂದಾಗಿದ್ದಾರೆ.
ತಮ್ಮಲ್ಲಿರುವ ಅಸಮಾನ್ಯ ಶಕ್ತಿಯಿಂದ ಇಲಾಖೆಯಲ್ಲಿ 'ಬಾಹುಬಲಿ' ಎಂದೇ ಖ್ಯಾತಿ ಪಡೆದಿರುವ ಕಾನ್‌ಸ್ಟೆಬಲ್ ಸುನಿಲ್, ಐಜಿಯವರ ಕಾರಿಗೆ ಗಟ್ಟಿಯಾದ ಹಗ್ಗವನ್ನು ಕಟ್ಟಿ, ಕೇವಲ ತನ್ನ ಹಲ್ಲುಗಳಿಂದ ಕಾರಿಗೆ ಕಟ್ಟಿದ್ದ ಹಗ್ಗವನ್ನು ಗಟ್ಟಿಯಾಗಿ ಕಚ್ಚಿ ಸುಮಾರು 50 ಮೀಟರ್ ದೂರದವರೆಗೆ ಕಾರನ್ನು ಎಳೆದುಕೊಂಡು ಹೋಗಿ ಎಲ್ಲರಿಗೂ ದಂಗಾಗುವಂತೆ ಮಾಡಿದ್ದಾರೆ.
ಕಾನ್‌ಸ್ಟೆಬಲ್ ಸುನಿಲ್ ಅವರ ಈ ಅದ್ಭುತ ಸಾಹಸವನ್ನು ಕಣ್ಣಾರೆ ಕಂಡ ಅಲ್ಲಿನ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಬ್ಬೆರಗಾದರು. ಅಲ್ಲದೆ, ಮೆಚ್ಚುಗೆಯಿಂದ ಜೋರಾಗಿ ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದರು. ಈ ಅಪರೂಪದ ವಿದಾಯ ಸಮಾರಂಭದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಯಾರು ಈ ಕಾನ್‌ಸ್ಟೆಬಲ್ ಸುನಿಲ್?
ಪೊಲೀಸ್ ಇಲಾಖೆಯಲ್ಲಿ ತಮ್ಮ ಅಸಾಧಾರಣ ದೈಹಿಕ ಸಾಮರ್ಥ್ಯ ಹಾಗೂ ಸಾಹಸಗಳಿಂದಲೇ ಸುನಿಲ್ ಭಾರಿ ಹೆಸರು ಮಾಡಿದ್ದಾರೆ. ಈ ಸುನಿಲ್ ಕೇವಲ ತಮ್ಮ ಹಲ್ಲುಗಳನ್ನು ಬಳಸಿ ಏಕಕಾಲದಲ್ಲಿ ಬರೋಬ್ಬರಿ ಏಳು ಕಾರುಗಳನ್ನು ಎಳೆದ ವಿಶ್ವ ದಾಖಲೆ ಮಾಡಿರುವ ಕಾರಣ ಇವರನ್ನು ಎಲ್ಲರೂ 'ಬಾಹುಬಲಿ' ಸುನಿಲ್ ಎಂದು ಕರೆಯುತ್ತಾರೆ.
ಭಾವುಕರಾದ ನಿವೃತ್ತ ಐಜಿ ಅರವಿಂದ್ ಸಕ್ಸೇನಾ!
ತಮ್ಮ ನಿವೃತ್ತಿಯ ದಿನದಂದು ಸಿಬ್ಬಂದಿ ನೀಡಿದ ಈ ಮರೆಯಲಾಗದ ಉಡುಗೊರೆ ಹಾಗೂ ವಿಶಿಷ್ಟ ವಿದಾಯದ ಬಗ್ಗೆ ನಿವೃತ್ತ ಐಜಿ ಅರವಿಂದ್ ಸಕ್ಸೇನಾ ಅವರು ಧನ್ಯವಾದ ತಿಳಿಸಿದರು. ಗ್ವಾಲಿಯರ್‌ನಲ್ಲಿ ತಮ್ಮ ಸೇವಾ ಅವಧಿಯಲ್ಲಿ ತಮಗೆ ಸಿಕ್ಕ ಜನಪ್ರಿಯತೆ, ಸಿಬ್ಬಂದಿಯ ಬೆಂಬಲ, ಪ್ರೀತಿ ಮತ್ತು ನೆನಪುಗಳು ಎಂದಿಗೂ ತಮ್ಮ ಹೃದಯಕ್ಕೆ ಹತ್ತಿರವಾಗಿರುತ್ತವೆ ಎಂದು ಭಾವುಕರಾಗಿ ನುಡಿದಿದ್ದಾರೆ, (ಏಜನ್ಸೀಸ್).