- 33 ಮಕ್ಕಳ ಮೇಲೆ ಘೋರ ಅಪರಾಧ ಎಸಗಿದ ಆರೋಪ
- ಸತತ ಹತ್ತು ವರ್ಷಗಳಿಂದ ಮಕ್ಕಳ ಮೇಲೆ ಅತ್ಯಾಚಾರ
- ಪಾಪ ಎಸಗಿದ ದಂಪತಿಗಳಿಗೆ ಮರಣದಂಡನೆ ವಿಧಿಸಿದ ಪೋಕ್ಸೋ ನ್ಯಾಯಾಲಯ
ಉತ್ತರ ಪ್ರದೇಶ: ಲೈಂಗಿಕ ಅಪರಾಧ ಸೇರಿದಂತೆ 33 ಮಕ್ಕಳ ಮೇಲೆ ವಿವಿಧ ಘೋರ ಬಗೆಯ ಅಪರಾಧಗಳನ್ನು ಎಸಗಿದ ಆರೋಪಿ ದಂಪತಿಗೆ ಉತ್ತರ ಪ್ರದೇಶದ ಪೋಕ್ಸೋ ವಿಚಾರಣಾ ನ್ಯಾಯಾಲಯ ಶುಕ್ರವಾರ (ಫೆ.20) ಮರಣದಂಡನೆ (Death Sentence) ವಿಧಿಸಿದೆ.
ನೀರಾವರಿ ಇಲಾಖೆಯ ಮಾಜಿ ಜೂನಿಯರ್ ಎಂಜಿನಿಯರ್ ರಾಮ್‌ಭವನ್ ಮತ್ತು ಆತನ ಪತ್ನಿ ದುರ್ಗಾವತಿಗೆ ಉತ್ತರ ಪ್ರದೇಶದ ಬಾಂದಾದಲ್ಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯ ವಿಶೇಷ ನ್ಯಾಯಾಧೀಶರು ಮರಣ ದಂಡನೆ ವಿಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪೋಕ್ಸೊ ಕಾಯ್ದೆಯಡಿ ವಿವಿಧ ಅಪರಾಧಗಳಿಗಾಗಿ ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹತ್ತು ವರ್ಷ ನಿರಂತರ ಬಲಾತ್ಕಾರ
ಮಕ್ಕಳ ಮೇಲೆ ಅಸ್ವಾಭಾವಿಕ ಅಪರಾಧಗಳನ್ನು ಎಸಗಗಿರುವುದು, ಗಂಭೀರವಾದ ಲೈಂಗಿಕ ಅಪರಾಧಗಳು, ಮಕ್ಕಳನ್ನು ಅಶ್ಲೀಲ ಉದ್ದೇಶಗಳಿಗಾಗಿ ಬಳಸಿರುವುದು, ಮಕ್ಕಳನ್ನು ಬಳಸಿರುವ ಅಶ್ಲೀಲ ವಿಡಿಯೋ ಚಿತ್ರಗಳ ಸಂಗ್ರಹಣೆ, ಪ್ರಚೋದನೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಈ ದಂಪತಿಯ ಮೇಲೆ ಹೊರಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ.
ಅಲ್ಲದೆ, ಸರ್ಕಾರದಿಂದ ಪ್ರತಿ ಸಂತ್ರಸ್ತರಿಗೆ 10 ಲಕ್ಷ ರೂ. ಪರಿಹಾರವನ್ನು ನೀಡುವಂತೆಯೂ ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳ ಮನೆಯಿಂದ ವಶಪಡಿಸಿಕೊಂಡ ನಗದು ಮೊತ್ತವನ್ನು ಸಂತ್ರಸ್ತರಿಗೆ ಸಮಾನ ಪ್ರಮಾಣದಲ್ಲಿ ವಿತರಿಸಲು ಸೂಚಿಸಿದೆ ಎಂದು ಸಿಬಿಐ ತಿಳಿಸಿದೆ.
ಸಿಬಿಐ 2020 ರಲ್ಲಿ ದಾಖಲಿಸಿರುವ ಪ್ರಕರಣದ ಅನ್ವಯ, ಆರೋಪಿಗಳು ಮೂರು ವರ್ಷದ ವಯೋಮಾನದವರೂ ಸೇರಿದಂತೆ ಸುಮಾರು 33 ಬಾಲಕರ ಮೇಲೆ ತೀವ್ರ ತೆರನಾದ ಲೈಂಗಿಕ ದೌರ್ಜನ್ಯವೂ ಸೇರಿದಂತೆ ವಿವಿಧ ಅಪರಾಧಗಳನ್ನು ಎಸಗಿದ್ದಾರೆ ಎಂದು ಹೇಳಲಾಗಿದೆ.
ಮಕ್ಕಳನ್ನು ಪುಸಲಾಯಿಸಿ, ದುಷ್ಕೃತ್ಯ
ಲೈಂಗಿಕ ದೌರ್ಜನ್ಯದ ವೇಳೆ ಅನೇಕ ಸಂತ್ರಸ್ತರ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರಲ್ಲಿ ಕೆಲವರು ಆಸ್ಪತ್ರೆಯಲ್ಲಿಯೇ ಇದ್ದಾರೆ. ಕೆಲವು ಸಂತ್ರಸ್ತರಲ್ಲಿ ಆರೋಗ್ಯದ ಸಮಸ್ಯೆ ಉದ್ಭವಿಸಿದೆ. ಅನೇಕ ಸಂತ್ರಸ್ತರು ಘಟನೆಯಿಂದ ಉಂಟಾದ ಮಾನಸಿಕ ಆಘಾತದಿಂದ ಇನ್ನೂ ಹೊರಬಂದಿಲ್ಲ ಎಂದು ಸಿಬಿಐ ತಿಳಿಸಿದೆ.
ಆರೋಪಿಗಳ ಹೀನ ದೃಷ್ಕೃತ್ಯಗಳ ಬಗ್ಗೆ ವಿವರಿಸಿರುವ ಸಿಬಿಐ, ಆರೋಪಿ ದಂಪತಿಯು 2010 ರಿಂದ 2020ರವರೆಗೆ ಉತ್ತರ ಪ್ರದೇಶದ ಬಾಂದಾ ಮತ್ತು ಚಿತ್ರಕೂಟ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಅವರು ಮಕ್ಕಳ ಮೇಲೆ ದೌರ್ಜನ್ಯ ಎಸಗಲು ವಿವಿಧ ರೀತಿಯಲ್ಲಿ ಓಲೈಕೆ ಮತ್ತು ಆಮಿಷಗಳನ್ನು ಒಡ್ಡುತ್ತಿದ್ದರು. ಆನ್‌ಲೈನ್ ವಿಡಿಯೋ ಗೇಮ್‌ಗಳ ಆಕರ್ಷಣೆ ಒಡ್ಡುವುದು, ಹಣ ಅಥವಾ ಉಡುಗೊರೆಗಳನ್ನು ನೀಡುವ ಮೂಲಕ ಮಕ್ಕಳನ್ನು ಒಯ್ಯುತ್ತಿದ್ದರು ಎಂದು ತಿಳಿಸಿದೆ.
ರಾಮ್‌ಭವನ್ ಮತ್ತು ದುರ್ಗಾವತಿ ವಿರುದ್ಧ ಫೆಬ್ರವರಿ 2021ರಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತು. ಮೇ 2023 ರಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಯಿತು. ಮರಣದಂಡನೆ ವಿಧಿಸುವ ವೇಳೆ ವಿಚಾರಣಾ ನ್ಯಾಯಾಲಯವು ಆರೋಪಿಗಳ ಅಪರಾಧ ಕೃತ್ಯಗಳನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದೆ.
ಅಪರಾಧಿಗಳು ವಿವಿಧ ಜಿಲ್ಲೆಗಳಲ್ಲಿ ಎಸಗಿರುವ ಅಪರಾಧಗಳು ತೀವ್ರ ನೈತಿಕ ಅಧಃಪತನದಿಂದ ಕೂಡಿದ್ದು, ಘೋರ ಸ್ವರೂಪದ್ದಾಗಿವೆ. ಹಾಗಾಗಿ, ಇಲ್ಲಿ ಯಾವುದೇ ಸುಧಾರಣೆಗೆ ಆಸ್ಪದವಿಲ್ಲವಾಗಿದ್ದು, ನ್ಯಾಯದ ಉದ್ದೇಶವನ್ನು ಪೂರೈಸಲು ಅಂತಿಮ ನ್ಯಾಯಿಕ ಪ್ರತಿಬಂಧದ ಅಗತ್ಯ ಅನಿವಾರ್ಯವಾಗಿದೆ ಎಂದು ಮರಣದಂಡನೆ ವಿಧಿಸಿದೆ,(ಏಜನ್ಸೀಸ್).