Ruchika Singh | ಆಧಾರ್ ಕೇಳಿದ್ದಕ್ಕೆ ತರಬೇತಿಯನ್ನೇ ಬಿಟ್ಟು ಓಡಿಹೋಗಿದ್ಲಂತೆ ಪ್ರಧಾನಿಗೆ ನಿಂದಿಸಿದ ಈ ಹುಡುಗಿ!
ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಬಾಲಕಿಯ ಕುರಿತು ಆಘಾತಕಾರಿ ವಿವರಗಳು ಹೊರಬಿದ್ದಿವೆ. ನೋಯ್ಡಾದ ಸೆಕ್ಟರ್ 135 ರಲ್ಲಿರುವ ಮೇಕ್-ಓವರ್ ಬ್ಯೂಟಿ ಸಲೂನ್‌ನಲ್ಲಿ ಆಕೆ ನೇಲ್ ಆರ್ಟ್ (ಉಗುರು ಕಲೆ) ಕಲಿಯಲು ಮೇ 25 ರಂದು ಸಲೂನ್‌ಗೆ ಸೇರಿದ್ದು, ಜೂನ್ 9 ರವರೆಗೆ ಹಾಜರಾಗಿದ್ದಳು ಎಂದು ಮಾಲೀಕ ಟಿ ಪಿ ತ್ರಿಪಾಠಿ ಮಾಹಿತಿ ನೀಡಿದ್ದಾರೆ.
ತರಬೇತಿಯ ಸಮಯದಲ್ಲಿ ಗುರುತಿನ ಚೀಟಿಗಾಗಿ ಸಲೂನ್ ಆಡಳಿತ ಮಂಡಳಿಯು ಆಕೆಯ ಬಳಿ ಆಧಾರ್ ಕಾರ್ಡ್ ನೀಡುವಂತೆ ಹಲವು ಬಾರಿ ಕೇಳಿತ್ತು. ಆದರೆ ಪ್ರತಿ ಬಾರಿಯೂ ವಿಭಿನ್ನ ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಪದೇ ಪದೇ ಕೇಳಿದರೂ ಆಧಾರ್ ನೀಡದ ಕಾರಣ ಜೂನ್ 9 ರಿಂದ ಆಕೆಗೆ ತರಬೇತಿ ನೀಡಿಲ್ಲ ಎಂದು ತ್ರಿಪಾಠಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಆಕೆ ಸಲೂನ್‌ನಲ್ಲಿ ತನ್ನ ನಿಜವಾದ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ತನ್ನ ಹೆಸರು ಮನ್ಸಿಲ್ ಎಂದು ಪರಿಚಯಿಸಿಕೊಂಡಿದ್ದಳು. ಇಲ್ಲಿ ಇದ್ದಷ್ಟು ದಿನ ಆಕೆಯ ನಡವಳಿಕೆ ಸಾಮಾನ್ಯವಾಗಿಯೇ ಇತ್ತು ಎಂದು ಮಾಲೀಕರು ಹೇಳಿದ್ದಾರೆ. ದೇಶದ ಪ್ರಧಾನ ಮಂತ್ರಿಯ ವಿರುದ್ಧ ಇಂತಹ ನಿಂದನಾತ್ಮಕ ಪದಗಳನ್ನು ಬಳಸಿರುವುದು ತಪ್ಪು ಮತ್ತು ಖಂಡನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜುಲೈ 29 ರಂದು ಝೀರೋ ಎಫ್‌ಐಆರ್ ದಾಖಲು
ಜುಲೈ 23 ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಕಳೆದ ಜುಲೈ 29 ರಂದು ನೋಯ್ಡಾದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಝೀರೋ ಎಫ್‌ಐಆರ್ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 352, 353(1) ಮತ್ತು 356(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಈ ಘಟನೆ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಬಳಸಿದ ನಿಂದನಾತ್ಮಕ ಮಾತುಗಳು ನೋವುಂಟುಮಾಡಿವೆ. ಆದಾಗ್ಯೂ ಯುವಜನರು ತಮ್ಮ ತಪ್ಪುಗಳಿಂದ ಕಲಿಯಲು ಅವಕಾಶ ನೀಡಬೇಕು. ಶಿಕ್ಷಿಸುವ ಬದಲು ಸಮಾಜ ಅವರಿಗೆ ಸರಿಯಾದ ಹಾದಿ ತೋರಿಸಬೇಕು ಎಂದು ಹೇಳಿ ಆ ವಿದ್ಯಾರ್ಥಿಗಳನ್ನು ಕ್ಷಮಿಸಿರುವುದಾಗಿ ತಿಳಿಸಿದ್ದರು.
ನನ್ನದು ತಪ್ಪಾಗಿದೆ ಎಂದ ಬಾಲಕಿ!..
ಪ್ರಕರಣ ದಾಖಲಾದ ಮರುದಿನವೇ ಆ ಬಾಲಕಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮಾಪಣೆ ಕೇಳುವ ವೀಡಿಯೊ ಪೋಸ್ಟ್ ಮಾಡಿದ್ದಾಳೆ. ತನಗೆ 15 ವರ್ಷ ವಯಸ್ಸಾಗಿದ್ದು, ಪ್ರತಿಭಟನೆಯಲ್ಲಿ ಇತರರ ಪ್ರಚೋದನೆಗೆ ಒಳಗಾಗಿ ಈ ತಪ್ಪು ಮಾಡಿದ್ದೇನೆ ಎಂದು ಹೇಳಿದ್ದಾಳೆ. ನಾವು ಕನ್ನಾಟ್ ಪ್ಲೇಸ್‌ಗೆ ಭೇಟಿ ನೀಡಿದ ನಂತರ ಸ್ನೇಹಿತರೊಂದಿಗೆ ಪ್ರತಿಭಟನೆಗೆ ಹೋಗಿದ್ದೆವು. ಅಲ್ಲಿ ಮೋದಿ ವಿರುದ್ಧ ನಿಂದನಾತ್ಮಕ ಘೋಷಣೆಗಳನ್ನು ಕೂಗುತ್ತಿದ್ದವರ ಪ್ರಭಾವಕ್ಕೆ ಒಳಗಾದೆ. ನನಗೆ ಕೇವಲ 15 ವರ್ಷ ವಯಸ್ಸು. ನಾನು ಮಾಡಿದ್ದು ಕ್ಷಮಿಸಲಾರದ ತಪ್ಪು. ಇಡೀ ದೇಶದ ಬಳಿ ಕ್ಷಮೆ ಕೇಳುತ್ತೇನೆ, ನನಗೆ ತೀವ್ರ ಮುಜುಗರವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾಳೆ.
ಈ ಅಪ್ರಾಪ್ತ ಬಾಲಕಿ ನೋಯ್ಡಾದ ಸೊಸೈಟಿಯೊಂದರಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಆದರೆ ಪ್ರಸ್ತುತ ಆ ಫ್ಲ್ಯಾಟ್ ಬಾಗಿಲು ಮುಚ್ಚಲ್ಪಟ್ಟಿದ್ದು, ಜಂತರ್ ಮಂತರ್ ಪ್ರತಿಭಟನೆಯ ನಂತರ ಆಕೆ ಮನೆಗೆ ಮರಳಿಲ್ಲ ಎಂದು ಸೊಸೈಟಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ(ಏಜೆನ್ಸೀಸ್).