Narendra Modi | ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 
ದೇಶ

ಕಿಸಾನ್​ ಸಮ್ಮಾನ್​ ಯೋಜನೆಯ 21 ನೇ ಕಂತು ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ | Narendra Modi

ಪ್ರಮುಖ ಮುಖ್ಯಾಂಶಗಳು

  • ಪಿಎಂ-ಕಿಸಾನ್ ಸಮ್ಮಾನ್​ ಯೋಜನೆಯ 21 ನೇ ಕಂತನ್ನು ಬಿಡುಗಡೆ
  • ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ ಉದ್ಘಾಟಿಸಿ 18,000 ಕೋಟಿ ರೂ.ಗಳ ಕಂತನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಿದ ಪ್ರಧಾನಿ ನರೇಂದ್ರ ಮೋದಿ
  • ಕಾರ್ಯಕ್ರಮದಲ್ಲಿ ತಡವಾಗಿ ಪಾಲ್ಗೊಂಡಿದ್ದಕ್ಕೆ ಕ್ಷಮೆಯಾಚಿಸಿದ ಪ್ರಧಾನಿ
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಬುಧವಾರ (ನವೆಂಬರ್ 19) ಪಿಎಂ-ಕಿಸಾನ್ ಸಮ್ಮಾನ್​ ಯೋಜನೆಯ 21 ನೇ ಕಂತನ್ನು ಬಿಡುಗಡೆ ಮಾಡಿದರು. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ ಉದ್ಘಾಟಿಸಿ 18,000 ಕೋಟಿ ರೂ.ಗಳ ಕಂತನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೊಯಮತ್ತೂರಿನಲ್ಲಿ ರೈತರು ತಮ್ಮ ಟವಲ್ ಬೀಸುತ್ತಿರುವ ದೃಶ್ಯವು ನನಗಿಂತ ಮೊದಲು ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು, ಅನ್ನದಾತರು ತಮ್ಮ ಟವೆಲ್‌ಗಳನ್ನು ತಿರುಗಿಸಿ ಸ್ವಾಗತಿಸುತ್ತಿರುವುದು ಬಿಹಾರದ ವಿಧಾನಸಭೆ ಚುನಾವಣೆಯ ಆಚರಣೆಗಳನ್ನು ನೆನಪಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಡವಾಗಿ ಪಾಲ್ಗೊಂಡಿದ್ದಕ್ಕೆ ಕ್ಷಮೆಯಾಚಿಸಿದ ಪ್ರಧಾನಿ, ಕೊಯಮತ್ತೂರಿಗೆ ಬರುವ ಮೊದಲು ಪುಟ್ಟಪರ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು. ತಮಿಳು ಗೊತ್ತಿದ್ದರೆ, ಶೃಂಗಸಭೆಯಲ್ಲಿನ ಹಿಂದಿನ ಭಾಷಣಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಗೌರವ ಸಿಗುತ್ತಿತ್ತು ಎಂದರು. ಕೊಯಮತ್ತೂರಿನ ಜವಳಿ ವಲಯವು ದೇಶದ ಆರ್ಥಿಕತೆಗೆ ಬಹಳ ಹಿಂದಿನಿಂದಲೂ ಪ್ರಮುಖ ಕೊಡುಗೆ ನೀಡಿದೆ, ಈ ಪ್ರದೇಶದವರಾದ ಸಿ ಪಿ​ ರಾಧಾಕೃಷ್ಣನ್ ಅವರು ಭಾರತದ ಉಪ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸುತ್ತಿರುವುದರಿಂದ, ರಾಷ್ಟ್ರಕ್ಕೆ ಈ ಭಾಗದ ಕೊಡುಗೆ ಹೆಚ್ಚಿದೆ ಎಂದು ಹೇಳಿದರು.
ಸಾವಯವ ಕೃಷಿ ತಮ್ಮ ಹೃದಯಕ್ಕೆ ಹತ್ತಿರವಾದದ್ದು ಎಂದ ಪ್ರಧಾನಿ, ಭಾರತ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ, ಇತ್ತೀಚಿನ ದಿನಗಳಲ್ಲಿನ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಬಳಕೆಯು ಮಣ್ಣಿನ ಫಲವತ್ತತೆ ಕುಸಿಯಲು ಕಾರಣವಾಗಿದ್ದು, ಸುಸ್ಥಿರ ಕೃಷಿ ಪದ್ಧತಿಗಳ ಅಗತ್ಯವನ್ನು ಒತ್ತಿ ಹೇಳಿದರು.
ಪಂಚಕಾವ್ಯ ಮತ್ತು ಜೀವಾಮೃತದಂತಹ ನೈಸರ್ಗಿಕ ಕೃಷಿ ಪದ್ಧತಿಗಳನ್ನು ದೇಶಾದ್ಯಂತ ರೈತರು ಈಗಾಗಲೇ ಅಳವಡಿಸಿಕೊಂಡಿದ್ದಾರೆ, ನೈಸರ್ಗಿಕ ಕೃಷಿಯನ್ನು ಸ್ವದೇಶಿ, ಸ್ಥಳೀಯ ಮತ್ತು ಸಾಂಪ್ರದಾಯಿಕ ಕಲ್ಪನೆಯಾಗಿದೆ, ಇದು ಭಾರತದ ಕೃಷಿ ಪರಂಪರೆಯಲ್ಲಿ ಆಳವಾಗಿ ಬೇರೂರಿದೆ ಎಂದರು(ಏಜೆನ್ಸೀಸ್​).