ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕು ಎಂದು ಸಂಸದೀಯ ಸಮಿತಿ ಆಗ್ರಹ 
ದೇಶ

ಪ್ರಧಾನಿ ಮೋದಿ ವಿಡಿಯೋ ಮಾಯ! ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಕೇಳಲಿ, ಇಲ್ಲದಿದ್ದರೆ 'ಸೇಫ್​ ಹಾರ್ಬರ್​' ರದ್ದಾಗುತ್ತದೆ; ನಿಶಿಕಾಂತ್ ದುಬೆ ಎಚ್ಚರಿಕೆ! Nishikant Dubey warns Mark Zuckerberg

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ಮಾಡಿದ ವಿಚಾರ
  • ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕು ಎಂದು ಸಂಸದೀಯ ಸಮಿತಿ ಆಗ್ರಹ
  • ಕ್ಷಮೆ ಕೇಳದಿದ್ದರೆ 'ಸೇಫ್ ಹಾರ್ಬರ್' ರಕ್ಷಣೆ ರದ್ದುಪಡಿಸುವುದಾಗಿ ನಿಶಿಕಾಂತ್​ ದುಬೆ ಎಚ್ಚರಿಕೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವನ್ನು ಪ್ಲಾಟ್‌ಫಾರ್ಮ್‌ನಿಂದ ಐದು ಗಂಟೆಗಳ ಕಾಲ ತಾತ್ಕಾಲಿಕವಾಗಿ ತೆಗೆದುಹಾಕಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ದೇಶಕ್ಕೆ ಕ್ಷಮೆ ಯಾಚಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಒಂದು ವೇಳೆ ಜುಕರ್‌ಬರ್ಗ್ ಕ್ಷಮೆ ಕೇಳದಿದ್ದರೆ, ಕಂಪನಿಯ ಸೇಫ್ ಹಾರ್ಬರ್ (Safe Harbour) ರಕ್ಷಣೆಯನ್ನು ರದ್ದುಪಡಿಸಬೇಕೆಂದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದ ಡಾ. ನಿಶಿಕಾಂತ್ ದುಬೆ (Nishikant Dubey warns Mark Zuckerberg) ಎಚ್ಚರಿಕೆ ನೀಡಿದ್ದಾರೆ.
ಸಂಸದೀಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಶಿಕಾಂತ್ ದುಬೆ, ಮೆಟಾ, ಎಕ್ಸ್ (ಟ್ವಿಟರ್) ಮತ್ತು ಯೂಟ್ಯೂಬ್‌ಗಳ ಅಲ್ಗಾರಿದಮ್‌ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ದೇಶದ ಡಿಜಿಟಲ್ ವ್ಯವಸ್ಥೆಯ ಮೇಲೆ ಇವುಗಳ ಪ್ರಭಾವ ಅಪಾಯಕಾರಿ ಮಟ್ಟ ತಲುಪಿದೆ ಎಂದು ಅವರು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ವಿಡಿಯೋ ಮಾಯ!

ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದ ಪ್ರಮುಖ ವಿಷಯವನ್ನು ಮೆಟಾ ಇಂಡಿಯಾ ಉದ್ದೇಶಪೂರ್ವಕವಾಗಿ ಅಥವಾ ಬೇಜವಾಬ್ದಾರಿಯಿಂದ ತೆಗೆದುಹಾಕಿದೆ ಎಂದು ದುಬೆ ಗಂಭೀರ ಆರೋಪ ಮಾಡಿದ್ದಾರೆ. ರಾತ್ರಿ 12.30ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಅಂದರೆ ಸುಮಾರು ಐದು ಗಂಟೆಗಳ ಕಾಲ ಪ್ರಧಾನಿಯವರ ವಿಡಿಯೋ ಲಭ್ಯವಿಲ್ಲ ಎಂಬುದನ್ನು ಕಂಪನಿಯೇ ಒಪ್ಪಿಕೊಂಡಿದೆ. ಇದು ದೇಶವನ್ನು ಅಸ್ಥಿರಗೊಳಿಸುವ ಹುನ್ನಾರವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಅಲ್ಗಾರಿದಮ್‌ ಮೇಲೆ ಸಂಸತ್ ಸಮಿತಿ ಕಣ್ಣು!


ಪ್ರಮುಖ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಜಕೀಯ ವಿಷಯಗಳ ಹಂಚಿಕೆ ದೊಡ್ಡ ಮಟ್ಟದಲ್ಲಿ ತಿರುಚಲ್ಪಡುತ್ತಿದೆ ಎಂದು ದುಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಎಸ್‌ಪಿ ಹಾಗೂ ಆಮ್ ಆದ್ಮಿ ಪಕ್ಷದ ಪೋಸ್ಟ್‌ಗಳ ವೀಕ್ಷಣೆಗಿಂತಲೂ, ಹೊಸದಾಗಿ ಹುಟ್ಟಿಕೊಂಡ ನೋಂದಾಯಿಸದ ಗುಂಪುಗಳು ಮತ್ತು ಮೀಸಲಾತಿ ವಿರೋಧಿ ವೇದಿಕೆಗಳ ಪೋಸ್ಟ್​ಗಳು ಹೆಚ್ಚು ಗೋಚರಿಸುತ್ತಿರುವುದನ್ನು ಅವರು ಅಂಕಿಅಂಶಗಳ ಸಮೇತ ಬಿಚ್ಚಿಟ್ಟಿದ್ದಾರೆ. ಹೊಸಬರಿಗೆ ಆದ್ಯತೆ ನೀಡುವ ನೆಪದಲ್ಲಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವಿಷಯಗಳಿಗೆ ವಿಪರೀತ ಒತ್ತು ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಸೇಫ್ ಹಾರ್ಬರ್ ರಕ್ಷಣೆ ರದ್ದುಗೊಳಿಸಲು ಶಿಫಾರಸು!


ಮೆಟಾ ಕಂಪನಿಯು ಕ್ಷಮೆಯಾಚಿಸಲು ವಿಫಲವಾದರೆ, ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಸಿಗುವ 'ಸೇಫ್ ಹಾರ್ಬರ್' (ಕಾನೂನು ರಕ್ಷಣೆ) ರಕ್ಷಣೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಮಿತಿ ಎರಡು ಪ್ರಮುಖ ನಿರ್ಣಾಯಕ ಶಿಫಾರಸುಗಳನ್ನು ಮಾಡಿದೆ. ಕಠಿಣ ಭಾರತೀಯ ಕಾನೂನುಗಳಿದ್ದರೂ ಸಹ ಮೆಟಾ ಮತ್ತು ಯೂಟ್ಯೂಬ್ ಸಂಸ್ಥೆಗಳು ಮಕ್ಕಳ ಲೈಂಗಿಕ ದೌರ್ಜನ್ಯ ಸಾಮಗ್ರಿ (CSAM) ಹಾಗೂ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದುಬೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಗೃಹ ಸಚಿವಾಲಯ ಹಾಗೂ ಐಟಿ ಸಚಿವಾಲಯದ ಸೂಚನೆಗಳನ್ನೂ ಇವರು ಲೆಕ್ಕಿಸುತ್ತಿಲ್ಲ, ಈಗಾಗಲೇ ತೆಲಂಗಾಣ ಮುಖ್ಯಮಂತ್ರಿಗಳು ಮೆಟಾ ಇಂಡಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ನೆನಪಿಸಿಕೊಂಡ ಅವರು ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ, (ಏಜನ್ಸೀಸ್​).