50 ಕೋಟಿ ಜನರು ಬಡತನದಿಂದ ಮುಕ್ತಿ; ದೇಶದ ಜನತೆಗೆ ಹಣ ಉಳಿತಾಯಕ್ಕೆ ಪ್ರಧಾನಿ ಮೋದಿ ಕರೆ | PM Modi  
ದೇಶ

50 ಕೋಟಿ ಜನರು ಬಡತನದಿಂದ ಮುಕ್ತಿ; ದೇಶದ ಜನತೆಗೆ ಹಣ ಉಳಿತಾಯಕ್ಕೆ ಪ್ರಧಾನಿ ಮೋದಿ ಕರೆ | PM Modi

ನವದೆಹಲಿ: ಕಳೆದ 12ರಿಂದ 13 ವರ್ಷಗಳಲ್ಲಿ ದೇಶದ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (FICCI) ವಾರ್ಷಿಕ ಸಭೆ ಹಾಗೂ ಸಮಾವೇಶದಲ್ಲಿ ಮಾತನಾಡಿದ ಮೋದಿ, ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿ ಭಾರತದ ಬಡತನ ನಿವಾರಣೆಯ ಸಾಧನೆಯನ್ನು ಪ್ರಸ್ತಾಪಿಸಿದ ಮೋದಿ, ದೇಶದ ಆರ್ಥಿಕ ಬೆಳವಣಿಗೆಯ ಲಾಭ ಜನರಿಗೆ ತಲುಪಬೇಕು. ಅದಕ್ಕಾಗಿ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂದು ಒತ್ತಿ ಹೇಳಿದರು.

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ದೇಶದ ಆರ್ಥಿಕ ಬೆಳವಣಿಗೆ ಸುಮಾರು ಶೇ.7ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಭಾರತದ ಸರಕು ರಫ್ತು ಸುಮಾರು 50 ಬಿಲಿಯನ್ ಡಾಲರ್ ತಲುಪಿದ್ದು, ಇದು ಈವರೆಗಿನ ಅತ್ಯಧಿಕ ಮಾಸಿಕ ರಫ್ತು ಪ್ರಮಾಣವಾಗಿದೆ. ಮೂಡೀಸ್, ಎಸ್‌ ಆ್ಯಂಡ್‌ ಪಿ ಗ್ಲೋಬಲ್ ರೇಟಿಂಗ್ಸ್, ಫಿಚ್, ವಿಶ್ವಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೇರಿ ಹಲವು ಸಂಸ್ಥೆಗಳು ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಹೆಚ್ಚಿಸುತ್ತಿವೆ ಎಂದರು.

50 ಕೋಟಿ ಜನರು ಬಡತನದಿಂದ ಮುಕ್ತಿ

ದೇಶದ ಬಡತನ ನಿವಾರಣೆಯ ಕುರಿತು ಮಾತನಾಡಿದ ಮೋದಿ, ಕಳೆದ 12ರಿಂದ 13 ವರ್ಷಗಳಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. 1970ರ ದಶಕದಲ್ಲಿ 'ಗರೀಬಿ ಹಟಾವೋ' ಘೋಷಣೆ ನೀಡಿದ್ದ ಸಂದರ್ಭದಲ್ಲಿ, ಭಾರತದ ಜನಸಂಖ್ಯೆಯೇ ಸುಮಾರು 50 ಕೋಟಿಯಷ್ಟಿತ್ತು. ಆಗಲೇ ಬಡತನ ನಿರ್ಮೂಲನೆ ಸಾಧ್ಯವಿದ್ದರೂ, ನೀತಿಗಳಲ್ಲಿನ ದೋಷ ಮತ್ತು ಸೂಕ್ತ ಉದ್ದೇಶದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ಹಿಂದಿನ ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.

ಸರಿಯಾದ ನೀತಿ ಮತ್ತು ಉದ್ದೇಶದೊಂದಿಗೆ ಕೆಲಸ ಮಾಡಿದಾಗ 12ರಿಂದ 13 ವರ್ಷಗಳಲ್ಲಿ 50 ಕೋಟಿ ಜನರನ್ನು ಬಡತನದಿಂದ ಹೊರತರಲು ಸಾಧ್ಯವಾಗಿದೆ ಎಂದರು. ಇದೇ ವಿಚಾರವಾಗಿ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿಯೂ ಮಾತನಾಡಿದ ಪ್ರಧಾನಿ, 2011ರಿಂದ 2023ರ ಅವಧಿಯಲ್ಲಿ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬಡತನ ಕಡಿತಗೊಳಿಸಿದ ದೇಶಗಳಲ್ಲೊಂದಾಗಿದೆ. ಇದು ರಾಷ್ಟ್ರೀಯ ಸಂಭ್ರಮಕ್ಕೆ ಕಾರಣವಾಗಬೇಕಾದ ಸಾಧನೆ. ಇದಕ್ಕೆ ಸರ್ಕಾರಗಳು, ಅಧಿಕಾರಿಗಳು, ಕೈಗಾರಿಕೆಗಳು ಮತ್ತು ಜನರ ಸಾಮೂಹಿಕ ಕೊಡುಗೆಯೇ ಕಾರಣ ಎಂದು ತಿಳಿಸಿದರು.

ಉಳಿತಾಯಕ್ಕೆ ಆದ್ಯತೆ ಕೊಡಿ

ಬಡತನದಿಂದ ಹೊರಬಂದ ಜನರು ಅಸಮರ್ಪಕ ಖರ್ಚು ಮತ್ತು ಉಳಿತಾಯದ ಕೊರತೆಯಿಂದ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬ ಕಳವಳವನ್ನು ಮೋದಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಸಚಿವರು ಮತ್ತು ಕಾರ್ಯದರ್ಶಿಗಳು ಜನರಲ್ಲಿ ಉಳಿತಾಯದ ಅಭ್ಯಾಸವನ್ನು ಉತ್ತೇಜಿಸಬೇಕು. ಭಾರತೀಯ ಸಂಸ್ಕೃತಿ 'ತಿನ್ನಿ, ಕುಡಿಯಿರಿ, ಮೋಜು ಮಾಡಿ' ಎಂಬ ಮನೋಭಾವವನ್ನು ಬೆಂಬಲಿಸುವುದಿಲ್ಲ. ಉಳಿತಾಯ ಮತ್ತು ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.

ಇದೇ ವೇಳೆ, ದೇಶದಲ್ಲಿ ಮಾವೋವಾದಿ ಹಾಗೂ ಎಡಪಂಥೀಯ ಉಗ್ರವಾದದ (LWE) ಸವಾಲನ್ನು ಎದುರಿಸುವಲ್ಲಿ ಸಾಧನೆ ಮಾಡಿರುವುದನ್ನು ಉಲ್ಲೇಖಿಸಿದ ಮೋದಿ, ಮಾದಕವಸ್ತು ವ್ಯಸನ ನಿರ್ಮೂಲನೆಯನ್ನೂ ಮುಂದಿನ ಪ್ರಮುಖ ಗುರಿಯನ್ನಾಗಿ ಮಾಡಿಕೊಳ್ಳಬೇಕು. ಯುವಜನತೆಯನ್ನು ಮಾದಕವಸ್ತುಗಳ ದುಷ್ಪರಿಣಾಮದಿಂದ ರಕ್ಷಿಸುವುದು ಅತ್ಯಗತ್ಯ. ಇದನ್ನು ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿಯನ್ನಾಗಿ ಪರಿಗಣಿಸಬೇಕು. ಸರ್ಕಾರ, ಅಧಿಕಾರಿಗಳು ಮತ್ತು ಸಮಾಜದ ಎಲ್ಲ ವರ್ಗಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾದಕವಸ್ತು ವ್ಯಸನದ ಸಮಸ್ಯೆಯನ್ನೂ ನಿಯಂತ್ರಿಸಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉದ್ಯಮಿಗಳಿಗೆ ಗುಣಮಟ್ಟದ ಉತ್ಪನ್ನಗಳ ತಯಾರಿಕೆ

ದೇಶೀಯ ಉದ್ಯಮಿಗಳಿಗೂ ಪ್ರಧಾನಿ ಮೋದಿ ಹಲವು ಸಲಹೆಗಳನ್ನು ನೀಡಿದ್ದಾರೆ. 140 ಕೋಟಿ ಭಾರತೀಯರನ್ನು ಏನು ಮಾರಾಟ ಮಾಡಿದರೂ ಖರೀದಿಸುವ ಖಚಿತ ಮಾರುಕಟ್ಟೆ ಎಂದು ಭಾವಿಸಬಾರದು. ಭಾರತೀಯ ಗ್ರಾಹಕರಿಗೂ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು ದೊರೆಯಬೇಕು. 'ಇದು ರಫ್ತು ಗುಣಮಟ್ಟದ ವಸ್ತು' ಎಂದು ಹೇಳಿದಾಗ ಮಾತ್ರ ಉತ್ಪನ್ನದ ಗುಣಮಟ್ಟವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬದಲಾಗಬೇಕು ಎಂದು ಹೇಳಿದರು.

ಭಾರತ ಹಲವು ಪ್ರಮುಖ ಆರ್ಥಿಕತೆಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದರಿಂದ ಉದ್ಯಮಿಗಳಿಗೆ ಹೊಸ ಮಾರುಕಟ್ಟೆಗಳ ಬಾಗಿಲು ತೆರೆದಿವೆ. ಈ ಅವಕಾಶಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದರು. ಕಂಪನಿಗಳ ಮೂಲ ಕಾರ್ಪೊರೇಟ್ ತೆರಿಗೆ ದರವನ್ನು ಶೇ.30ರಿಂದ ಶೇ.22ಕ್ಕೆ ಇಳಿಸಿರುವುದು ಮತ್ತು 12 ಲಕ್ಷ ರೂ.ವರೆಗಿನ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಿರುವಂತಹ ಸುಧಾರಣೆಗಳನ್ನು ಪ್ರಸ್ತಾಪಿಸಿದ ಮೋದಿ, ಉದ್ಯೋಗಿಗಳ ವೇತನ ಹೆಚ್ಚಿಸಿದ್ದೀರಾ ಅಥವಾ ಹೊಸ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದೀರಾ ಎಂದು ಉದ್ಯಮಿಗಳನ್ನು ಪ್ರಶ್ನಿಸಿದರು.

ಔಷಧ ತಯಾರಿಕೆಯಲ್ಲಿ ಆಮದು ಅವಲಂಬನೆ ಇಳಿಸಿ

ಭಾರತವನ್ನು 'ವಿಶ್ವದ ಔಷಧಾಲಯ' ಎಂದು ಕರೆಯಲಾಗುತ್ತಿದ್ದರೂ, ಸಕ್ರಿಯ ಔಷಧೀಯ ಪದಾರ್ಥಗಳು (API), ಬೃಹತ್ ಔಷಧಗಳು ಮತ್ತು ಔಷಧ ಮಧ್ಯಂತರ ಉತ್ಪನ್ನಗಳಿಗಾಗಿ ಭಾರತ ಇನ್ನೂ ದೊಡ್ಡ ಪ್ರಮಾಣದಲ್ಲಿ ಆಮದಿನ ಮೇಲೆ ಅವಲಂಬಿತವಾಗಿದೆ. ದೇಶದಲ್ಲೇ ತಯಾರಿಸಬಹುದಾದ ಔಷಧೀಯ ಕಚ್ಚಾ ವಸ್ತುಗಳನ್ನು ಗುರುತಿಸಿ, ಹೊಸ ತಂತ್ರಜ್ಞಾನ ಮತ್ತು ಬೃಹತ್ ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಮಾಡುವ ಮೂಲಕ ಆಮದು ಅವಲಂಬನೆ ಇಳಿಸಬೇಕು ಎಂದು ಮೋದಿ ಕಳವಳ ವ್ಯಕ್ತಪಡಿಸಿದರು.

ಇನ್ನು, ಸಭೆಯಲ್ಲಿ ಹಣಕಾಸು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ವಸತಿ ಮತ್ತು ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ 11 ಕಾರ್ಯದರ್ಶಿಗಳು ಬಡತನ ನಿವಾರಣೆಯಲ್ಲಿ ಸರ್ಕಾರದ ಸಾಮೂಹಿಕ ಪ್ರಯತ್ನಗಳ ಕುರಿತು ಪ್ರಸ್ತುತಿಗಳನ್ನು ನೀಡಿದ್ದಾರೆ. ನಕ್ಸಲ್ ಮುಕ್ತ ಭಾರತದ ಕುರಿತು ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮಾಹಿತಿ ನೀಡಿದ್ದು, ಸೈಬರ್ ಅಪರಾಧ ಮತ್ತು ಆನ್‌ಲೈನ್ ವಂಚನೆ ತಡೆಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ವಿವರಿಸಿದ್ದಾರೆ.

ಒಟ್ಟಿನಲ್ಲಿ, ಆರ್ಥಿಕ ಬೆಳವಣಿಗೆಯ ಜತೆಗೆ ಬಡತನ ನಿರ್ಮೂಲನೆ, ಜನರಲ್ಲಿ ಉಳಿತಾಯದ ಮನೋಭಾವ, ಯುವಜನತೆಯನ್ನು ಮಾದಕವಸ್ತುಗಳಿಂದ ರಕ್ಷಿಸುವುದು ಮತ್ತು ದೇಶೀಯ ಕೈಗಾರಿಕೆಗಳನ್ನು ಬಲಪಡಿಸುವುದಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಪ್ರಧಾನಿ ಮೋದಿ ನೀಡಿರುವುದು ಇದೀಗ ಅನೇಕರ ಗಮನ ಸೆಳೆದಿದೆ,(ಏಜೆನ್ಸೀಸ್).