Narendra Modi | ದೇಶದ ಏಳ್ಗೆಗಾಗಿ ತ್ರಿಶೂಲ ಹಿಡಿದು ಪ್ರಾರ್ಥಿಸಿದ ಪ್ರಧಾನಿ ಮೋದಿ
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ (ಏ.29) ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ತಮ್ಮ ದಿನವನ್ನು ಆಧ್ಯಾತ್ಮಿಕವಾಗಿ ಆರಂಭಿಸಿದ್ದು, ದೇವಾಲಯದಲ್ಲಿ ದರ್ಶನ ಮತ್ತು ವಿಶೇಷ ಪೂಜೆ ಸಲ್ಲಿಸಿದ ಅವರು, ದೇಶದ ನಾಗರಿಕರ ಸುಖ, ಸಮೃದ್ಧಿ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ, ಪ್ರಧಾನಿ ಮೋದಿ, ಧಾರ್ಮಿಕ ಸಂಕೇತಗಳಾದ ತ್ರಿಶೂಲ ಮತ್ತು ಡಮರುವನ್ನು ಹಿಡಿದು ಭಕ್ತರ ಗಮನಸೆಳೆದರು. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ, ಅನ್ನಪೂರ್ಣ ಮತ್ತು ಗಂಗಾ ಮಾತೆಯ ದರ್ಶನವು ತಮಗೆ ಅಪಾರ ಶಾಂತಿ ನೀಡಿದೆ ಎಂದು ತಿಳಿಸಿದ್ದಾರೆ.
ರೋಡ್ ಶೋ...
ದೇವಸ್ಥಾನದ ಭೇಟಿಯ ಬಳಿಕ ವಾರಣಾಸಿಯಾದ್ಯಂತ 14 ಕಿಲೋಮೀಟರ್ ಬೃಹತ್ ರೋಡ್ ಶೋ ನಡೆಸಲಾಯಿತು. ಬನಾರಸ್ ಲೋಕೋಮೋಟಿವ್ ವರ್ಕ್ಸ್‌ನಿಂದ ಆರಂಭವಾದ ಈ ಮೆರವಣಿಗೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ ಕಾಶಿ ವಿಶ್ವನಾಥ ಧಾಮದಲ್ಲಿ ಮುಕ್ತಾಯವಾಯಿತು. ದಾರಿಯುದ್ದಕ್ಕೂ ಜನಸಾಗರವೇ ಹರಿದು ಬಂದಿದ್ದು, ಜನರು ಪ್ರಧಾನಿಯನ್ನು ನೋಡಲು ಕಾತರದಿಂದ ಸಾಲುಗಟ್ಟಿ ನಿಂತಿದ್ದರು. ಸ್ಥಳೀಯ ಬಿಜೆಪಿ ಶಾಸಕ ರವೀಂದ್ರ ಜೈಸ್ವಾಲ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪ್ರಧಾನಿಯವರು ಕಾಶಿಗೆ ಬಂದಾಗಲೆಲ್ಲಾ ಹೊಸ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುತ್ತಾರೆ ಎಂದರು.
ವಾರಣಾಸಿಯ ಕಾರ್ಯಕ್ರಮಗಳ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಹಾರ್ದೋಯ್‌ಗೆ ಪ್ರಯಾಣಿಸಿ, ಸುಮಾರು 36,230 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮಹತ್ವಾಕಾಂಕ್ಷೆಯ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲಿದ್ದಾರೆ. 594 ಕಿಲೋಮೀಟರ್ ಉದ್ದದ ಈ ಆರು ಪಥಗಳ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ 12 ಜಿಲ್ಲೆಗಳನ್ನು ಸಂಪರ್ಕಿಸಲಿದೆ. ಮೀರತ್‌ನಿಂದ ಪ್ರಯಾಗ್‌ರಾಜ್‌ವರೆಗಿನ ಪ್ರಯಾಣದ ಸಮಯವನ್ನು ಈ ಯೋಜನೆಯು ಅರ್ಧದಷ್ಟು ಅಂದರೆ 10-12 ಗಂಟೆಗಳಿಂದ ಕೇವಲ 6 ಗಂಟೆಗಳಿಗೆ ಕಡಿತಗೊಳಿಸಲಿದೆ. ಈ ಬೃಹತ್ ಕಾರಿಡಾರ್ ಸರಕು ಸಾಗಣೆಯನ್ನು ಸುಗಮಗೊಳಿಸುವುದಲ್ಲದೆ, ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಮಟ್ಟದ ವೇಗವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ(ಏಜೆನ್ಸೀಸ್).