Modi-Kharge | ಪರಸ್ಪರ ಕೈಕುಲುಕಿ ನಗು ಹಂಚಿಕೊಂಡ ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ!
ದೆಹಲಿ: ಸಂಸತ್ತಿನ ಸಂಕೀರ್ಣದಲ್ಲಿರುವ ಪ್ರೇರಣಾ ಸ್ಥಳವು ಇಂದು ರಾಜಕೀಯ ಸೌಹಾರ್ದತೆಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪುಷ್ಪ ನಮನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Modi-Kharge) ಪರಸ್ಪರ ಹಸ್ತಲಾಘವ ಮಾಡಿ, ನಗುನಗುತ್ತಾ ಲಘು ಕ್ಷಣಗಳನ್ನು ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಈ ಕಾರ್ಯಕ್ರಮದ ದೃಶ್ಯಗಳಲ್ಲಿ ಪ್ರಧಾನಿ ಮೋದಿ ಇತರ ಗಣ್ಯರನ್ನು ಸ್ವಾಗತಿಸುತ್ತಾ ಮುಂದೆ ಸಾಗಿ, ಇದಾದ ಬಳಿಕ ಖರ್ಗೆ ಅವರ ಬಳಿ ಬಂದು ಕೈಕುಲುಕಿ ಕೆಲ ಕಾಲ ಆತ್ಮೀಯವಾಗಿ ಮಾತನಾಡಿದ್ದು ಕಂಡುಬಂದಿತು.
ಇತ್ತೀಚೆಗೆ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಇಂತಹ ಸೌಜನ್ಯದ ನಡವಳಿಕೆಗಳು ಮರುಕಳಿಸುತ್ತಿದ್ದು, ಈ ಹಿಂದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಬಾಬಾಸಾಹೇಬರ ಪ್ರತಿಮೆಗೆ ಗೌರವ ಸಲ್ಲಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿರುವ ಪ್ರಧಾನಿ ಮೋದಿ, ರಾಷ್ಟ್ರ ನಿರ್ಮಾಣಕ್ಕೆ ಅಂಬೇಡ್ಕರ್ ನೀಡಿರುವ ಕೊಡುಗೆಗಳು ಇಂದಿಗೂ ಪ್ರೇರಣಾದಾಯಕವಾಗಿದ್ದು, ನ್ಯಾಯಯುತ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸಲು ಅವರ ಜೀವನವೇ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಅಂಬೇಡ್ಕರ್ ಅವರನ್ನು ಭಾರತದ ನೈತಿಕ ಮತ್ತು ಸಾಂವಿಧಾನಿಕ ಆತ್ಮ ಎಂದು ಬಣ್ಣಿಸಿದರೆ, ರಾಹುಲ್ ಗಾಂಧಿ ಅಂಬೇಡ್ಕರ್ ಅವರ ಆದರ್ಶಗಳನ್ನು ಹಾಗೂ ಸಂವಿಧಾನದ ಮೂಲ ಮೌಲ್ಯಗಳನ್ನು ರಕ್ಷಿಸುವ ಅಗತ್ಯವನ್ನು ಪ್ರತಿಪಾದಿಸಿದರು(ಏಜೆನ್ಸೀಸ್).