ಪ್ರಧಾನಿ ನರೇಂದ್ರ ಮೋದಿ 
ದೇಶ

ಬ್ರಹ್ಮಪುತ್ರ ನದಿಯಲ್ಲಿ ಕ್ರೂಸ್ ಹಡಗಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಪ್ರಧಾನಿ ಮೋದಿ | PM Modi

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ದಿನ ಅಸ್ಸಾಂ ಪ್ರವಾಸದಲ್ಲಿದ್ದು, ಇಂದು (ಡಿ. 21) ಬ್ರಹ್ಮಪುತ್ರ ನದಿಯಲ್ಲಿ ಕ್ರೂಸ್ ಹಡಗಿನಲ್ಲಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವರದಿಯಾಗಿದೆ. 
ಅಸ್ಸಾಂನ ವಿವಿಧ ಶಾಲೆಗಳಿಂದ ಒಟ್ಟು 25 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮೂರು ಡೆಕ್‌ಗಳ 'ಎಂವಿ ಚಾರೈಡ್ಯೂ 2' ಹಡಗಿನಲ್ಲಿ ಮೋದಿ ವಿದ್ಯಾರ್ಥಿಗಳೊಂದಿಗೆ ಸುಮಾರು 45 ನಿಮಿಷಗಳ ಕಾಲ ಸಂವಾದ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟಿಸಿದ ಗುವಾಹಟಿ ಒಳನಾಡಿನ ಜಲ ಸಾರಿಗೆ (ಐಡಬ್ಲ್ಯೂಟಿ) ಗೇಟ್‌ವೇ ಟರ್ಮಿನಲ್‌ನಲ್ಲಿ ನದಿ ವಿಹಾರ ನಡೆಸಲಿದ್ದಾರೆ. ಸ್ಥಳದಲ್ಲಿ ನದಿ ಪೊಲೀಸರು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಬೆಳಗಿನ ಜಾವದಿಂದಲೇ ನದಿಯಲ್ಲಿ ಗಸ್ತು ತಿರುಗುತ್ತಿದ್ದು, ಇಡೀ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 
ಮೋದಿ ಭೇಟಿಯ ಹಿನ್ನೆಲೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಬ್ರಹ್ಮಪುತ್ರ ನದಿಯಲ್ಲಿ ದೋಣಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಕಾಮ್ರೂಪ್ ಮೆಟ್ರೋಪಾಲಿಟನ್, ಮೊರಿಗಾಂವ್, ದಿಬ್ರುಗರ್, ಕ್ಯಾಚಾರ್, ಶ್ರೀಭೂಮಿ, ಬಕ್ಸಾ, ದಿಮಾ ಹಸಾವೊ, ಕೊಕ್ರಜಾರ್, ಗೋಲಾಘಾಟ್, ಕರ್ಬಿ ಆಂಗ್ಲಾಂಗ್ ಮತ್ತು ನಲ್ಬರಿ ಜಿಲ್ಲೆಗಳ ಶಾಲೆಗಳಿಂದ ಆಯ್ಕೆ ಮಾಡಲಾಗಿದೆ (ಏಜೆನ್ಸೀಸ್).