ಮೆಟ್ರೋ ಜಾಲದ ಶರವೇಗದ ವಿಸ್ತರಣೆಗೆ ಪ್ರಧಾನಿ ಮೋದಿ ಸಂತಸ! 
ದೇಶ

2014ರ ನಂತರ ಭಾರತದ ಚಿತ್ರಣವೇ ಬದಲು: ಮೆಟ್ರೋ ಜಾಲದ ಶರವೇಗದ ವಿಸ್ತರಣೆಗೆ ಪ್ರಧಾನಿ ಮೋದಿ ಸಂತಸ! PM Modi

2014ರಲ್ಲಿ ದೇಶದ ಕೇವಲ 5 ನಗರಗಳಲ್ಲಿ ಮಾತ್ರವೇ 248 ಕಿ.ಮೀ ನಷ್ಟು ಸಣ್ಣ ಮೆಟ್ರೋ ಜಾಲವಿತ್ತು. ಆದರೆ, ಇಂದು 26 ನಗರಗಳಲ್ಲಿ ಬೃಹತ್ ಜಾಲ ಹರಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿ: ಭಾರತದ ನಗರ ಸಾರಿಗೆ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಕಾರಿ ಬದಲಾವಣೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ( PM Modi ) ಅವರು ಬೃಹತ್ ಅಂಕಿ-ಅಂಶಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಪ್ರಸ್ತುತ ದೇಶದ 26 ನಗರಗಳಲ್ಲಿ ಮೆಟ್ರೋ ಜಾಲವು ಸುಮಾರು 1,200 ಕಿಲೋಮೀಟರ್ ವ್ಯಾಪ್ತಿಗೆ ವಿಸ್ತರಿಸಿದ್ದು, ಪ್ರತಿದಿನ 1 ಕೋಟಿಗೂ ಹೆಚ್ಚು ಜನರು ಈ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ (X)ನಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿಯವರು, 2014ಕ್ಕೂ ಮುಂಚಿನ ಅಭಿವೃದ್ಧಿಯ ವೇಗ ಮತ್ತು ಪ್ರಸ್ತುತ ಎನ್‌ಡಿಎ (NDA) ಸರ್ಕಾರದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ವೇಗದ ನಡುವಿನ ವ್ಯತ್ಯಾಸವನ್ನು ಎತ್ತಿಹಿಡಿದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕಾಂಗ್ರೆಸ್​ ಸರ್ಕಾರವನ್ನು ಅಣಕಿಸಿದ್ದಾರೆ.

2014ಕ್ಕಿಂತ ಮೊದಲು ಭಾರತದಲ್ಲಿ ಮೆಟ್ರೋ ನಿರ್ಮಾಣ ನಡೆಯುತ್ತಿದ್ದ ವೇಗವನ್ನೇ ಮುಂದುವರಿಸಿದ್ದರೆ, ಪುಣೆಯಂತಹ ಪ್ರಮುಖ ನಗರಗಳು ಮೆಟ್ರೋ ಸೌಲಭ್ಯ ಪಡೆಯಲು ದಶಕಗಳ ಕಾಲ ಕಾಯಬೇಕಾಗುತ್ತಿತ್ತು ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ಹೇಳಿದ್ದಾರೆ. 2014ರಲ್ಲಿ ದೇಶದ ಕೇವಲ 5 ನಗರಗಳಲ್ಲಿ ಮಾತ್ರವೇ 248 ಕಿ.ಮೀ ನಷ್ಟು ಸಣ್ಣ ಮೆಟ್ರೋ ಜಾಲವಿತ್ತು. ಆದರೆ, ಇಂದು 26 ನಗರಗಳಲ್ಲಿ ಬೃಹತ್ ಜಾಲ ಹರಡಿದೆ. ಈ ಅಭಿವೃದ್ಧಿ ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗಿಲ್ಲ; ಇದರಿಂದ ಲಕ್ಷಾಂತರ ಜನರ ಸಂಚಾರ ಸಮಯ ಉಳಿತಾಯವಾಗುತ್ತಿದೆ, ಕುಟುಂಬದೊಂದಿಗೆ ಕಳೆಯುವ ಸಮಯ ಹೆಚ್ಚುತ್ತಿದೆ ಹಾಗೂ ಉದ್ಯೋಗಿಗಳಲ್ಲಿ ಉತ್ಪಾದಕತೆ ವೃದ್ಧಿಸುತ್ತಿದೆ. ಇದು ಆಧುನಿಕ ನಗರ ಭಾರತವನ್ನು ನಾವು ಮರುರೂಪಿಸುತ್ತಿರುವ ಪರಿ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

ಇದಕ್ಕೆ ಪೂರಕವಾಗಿ ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದ ಪುಣೆ ನಗರಕ್ಕೆ ಸುಮಾರು 21,800 ಕೋಟಿ ರೂಪಾಯಿ ಮೌಲ್ಯದ ಬೃಹತ್ ಮೆಟ್ರೋ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಪ್ರಮುಖ ಕಾರ್ಯಕ್ರಮದಲ್ಲಿ, ಪುಣೆಯ ಸುಗಮ ಸಂಚಾರಕ್ಕೆ ಪೂರಕವಾಗುವ 'ಪಿಂಕ್ ಲೈನ್' ಎಂದೇ ಕರೆಯಲ್ಪಡುವ ಮೆಟ್ರೋ ಲೈನ್-3 ಯೋಜನೆ ಲೋಕಾರ್ಪಣೆಗೊಂಡಿದೆ. ಸುಮಾರು 8,300 ಕೋಟಿ ರೂಪಾಯಿಗಿಂತಲೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ 23 ಕಿಲೋಮೀಟರ್ ಉದ್ದದ ಕಾರಿಡಾರ್, ಮಾನ್‌ನಿಂದ ಆರಂಭಗೊಂಡು ಪ್ರಮುಖ ಐಟಿ ಹಬ್ ಆದ ಹಿಂಜೆವಾಡಿಯ ಮೂಲಕ ಶಿವಾಜಿನಗರದ ಡಿಸ್ಟ್ರಿಕ್ಟ್ ಕೋರ್ಟ್ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುತ್ತದೆ.

ಈ ಪ್ರಮುಖ ಪಿಂಕ್ ಲೈನ್ ಉದ್ಘಾಟನೆಯಿಂದಾಗಿ ಪುಣೆಯ ಆಟೋಮೊಬೈಲ್ ಮತ್ತು ಮಾಹಿತಿ ತಂತ್ರಜ್ಞಾನ (IT) ವಲಯದ ಸಾವಿರಾರು ಉದ್ಯೋಗಿಗಳಿಗೆ ದೈನಂದಿನ ಸಂಚಾರ ಸುಗಮವಾಗಲಿದ್ದು, ಅಲ್ಲಿನ ಸುದೀರ್ಘ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ಸಿಕ್ಕಂತಾಗಿದೆ. ಇದರೊಂದಿಗೆ ನಗರದ ಪ್ರಗತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು 13,500 ಕೋಟಿ ರೂಪಾಯಿ ಅಂದಾಜು ವೆಚ್ಚದ ಪುಣೆ ಮೆಟ್ರೋ ಹಂತ-2 ಕಾಮಗಾರಿಗೂ ಪ್ರಧಾನಿ ಅಡಿಪಾಯ ಹಾಕಿದ್ದಾರೆ. ಈ ಎರಡನೇ ಹಂತದ ವಿಸ್ತರಣೆಯು ಪ್ರಮುಖ ವಸತಿ, ವಾಣಿಜ್ಯ ಮತ್ತು ತಾಂತ್ರಿಕ ಪ್ರದೇಶಗಳನ್ನು ಪರಸ್ಪರ ಜೋಡಿಸುವ ಗುರಿಯನ್ನು ಹೊಂದಿದೆ.

ಹಂತ-2ರ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಮೆಟ್ರೋ ಮಾರ್ಗ 2ಎ (ವನಜ್‌ನಿಂದ ಚಾಂದನಿ ಚೌಕ್) ಮತ್ತು 2ಬಿ (ರಾಮ್‌ವಾಡಿಯಿಂದ ವಿಠ್ಠಲವಾಡಿ) ಒಟ್ಟು 12.75 ಕಿಲೋಮೀಟರ್ ಜಾಲವನ್ನು ಹೊಂದಿರಲಿವೆ. ಅದೇ ರೀತಿ ಖರಾಡಿಯಿಂದ ಕಡಕ್ವಾಸ್ಲಾವನ್ನು ಸಂಪರ್ಕಿಸುವ 25.52 ಕಿಲೋಮೀಟರ್ ಉದ್ದದ 'ಲೈನ್ 4' ಮತ್ತು ನಲ್ ಸ್ಟಾಪ್‌ನಿಂದ ಮಾಣಿಕ್ ಬಾಗ್‌ವರೆಗೆ ಸಾಗುವ 6.12 ಕಿಲೋಮೀಟರ್‌ಗಳ 'ಲೈನ್ 4ಎ' ಮಾರ್ಗಗಳು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿವೆ. ಈ ಎಲ್ಲಾ ಬೃಹತ್ ವಿಸ್ತರಣೆಗಳು ಪುಣೆಯ ರಸ್ತೆಗಳ ಮೇಲಿನ ಸಂಚಾರ ಒತ್ತಡವನ್ನು ತಗ್ಗಿಸುವುದಲ್ಲದೆ, ಒಟ್ಟಾರೆ ದೇಶದ ಸಾರಿಗೆ ಕ್ಷೇತ್ರಕ್ಕೆ ಹೊಸ ಕಳೆ ತಂದಿವೆ, (ಏಜೆನ್ಸೀಸ್​).