ನವದೆಹಲಿ: ಮಳೆಗಾಲದ ಸಂಸತ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ(PM Modi) ಬುಧವಾರ(ಜು. 15) ರಾತ್ರಿ ತಮ್ಮ ನಿವಾಸದಲ್ಲಿ ಬಿಜೆಪಿ ಉನ್ನತಮಟ್ಟದ ನಾಯಕರ ಜೊತೆ ಕೋರ್ ಕಮಿಟಿ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ವಾರ ಆರಂಭವಾಗಲಿರುವ ಸಂಸತ್ತಿನ ಅಧಿವೇಶನಕ್ಕೂ ಮುನ್ನ ನಡೆದ ಈ ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಸೇರಿದಂತೆ ಕೆಲವು ಹಿರಿಯರು ಭಾಗವಹಿಸಿದ್ದಾರೆ.
ಸಭೆಯಲ್ಲಿ ಏನಾಯಿತು ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ತಂಡ ಮತ್ತು ಕೇಂದ್ರ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಈ ಸಭೆ ನಡೆದಿದ್ದು ಮಹತ್ವ ಪಡೆದುಕೊಂಡಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 20ರಂದು ಪ್ರಾರಂಭವಾಗಿ ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ. ಜು. 21ರಂದು ಎನ್ಡಿಎ ಮೈತ್ರಿಕೂಟದ ಸಭೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ (ಏಜೆನ್ಸೀಸ್).