ನವದೆಹಲಿ: ಭಾರತೀಯ ಜನಸಂಘದ ಪ್ರಮುಖ ನಾಯಕರಾಗಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜಯಂತಿಯ ಅಂಗವಾಗಿ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲಿ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಭಾಗವಹಿಸಿದ್ದರು.
ಅದಕ್ಕೂ ಮುನ್ನ, ದೀನ್‌ದಯಾಳ್ ಉಪಾಧ್ಯಾಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, ಅವರು ಪ್ರತಿಪಾದಿಸಿದ ಅಂತ್ಯೋದಯ ತತ್ತ್ವಚಿಂತನೆಯು ಸಾರ್ವಜನಿಕ ಕಲ್ಯಾಣ ಹಾಗೂ ರಾಷ್ಟ್ರದ ಅಭಿವೃದ್ಧಿಯ ಪ್ರಮುಖ ಮೈಲಿಗಲ್ಲಾಗಿದೆ ಎಂದು ಶ್ಲಾಘಿಸಿದರು.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಮಂತ್ರಿಗಳು, ದೀನ್‌ದಯಾಳ್ ಅವರ ದೃಷ್ಟಿಕೋನವು ಪ್ರಸ್ತುತ ಸರ್ಕಾರದ ನೀತಿಗಳು ಮತ್ತು ತೃಣಮೂಲ ಮಟ್ಟದ ಸಬಲೀಕರಣಕ್ಕೆ ಹೇಗೆ ಸ್ಫೂರ್ತಿಯಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ರಾಷ್ಟ್ರ ಸೇವೆಯ ಸತ್ಯಸಾಧಕ, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಅವರಿಗೆ ನನ್ನ ನಮ್ರ ನಮನಗಳು. ಸಮಾಜದ ಕೊನೆಯ ಸಾಲಿನಲ್ಲಿ ನಿಂತಿರುವ ವ್ಯಕ್ತಿಯ ಅಭ್ಯುದಯವೇ ರಾಷ್ಟ್ರ ನಿರ್ಮಾಣದ ತಳಹದಿ ಎಂದು ಅವರು ಪರಿಗಣಿಸಿದ್ದರು. ಅವರು ನಮಗೆ ನೀಡಿದ ಅಂತ್ಯೋದಯ ಚಿಂತನೆಯು ಇಂದಿಗೂ ಸಾರ್ವಜನಿಕ ಕಲ್ಯಾಣಕ್ಕೆ ಬಲವಾದ ಸ್ಫೂರ್ತಿ ನೀಡುತ್ತಿದೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.
ದೇಶದ ನಾಗರಿಕರು ದೀನ್‌ದಯಾಳ್ ಅವರ ಪರಂಪರೆಯನ್ನು ಅನುಸರಿಸಬೇಕೆಂದು ಮನವಿ ಮಾಡಿದ ಪ್ರಧಾನಿ ಮೋದಿ, ಈ ವಿಶೇಷ ಸಂದರ್ಭದಲ್ಲಿ, ಅವರ ಆಲೋಚನೆಗಳು ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ನಮ್ಮ ಸಾಮಾಜಿಕ ಹಾಗೂ ರಾಷ್ಟ್ರೀಯ ಜವಾಬ್ದಾರಿಗಳನ್ನು ಪೂರೈಸಲು ಸಂಕಲ್ಪ ಮಾಡೋಣ. ನಾವು ಎಷ್ಟು ಶ್ರಮಿಸುತ್ತೇವೆಯೋ ಅಷ್ಟೇ ಬೇಗ ಪ್ರತಿಫಲ ಸಿಗುತ್ತದೆ. ಆದ್ದರಿಂದ ಮಾನವ ಪ್ರಯತ್ನವೊಂದೇ ಸತ್ಯ, ಅದನ್ನೇ ನಮ್ಮ ವಿಧಿ ಅಥವಾ ಹಣೆಬರಹ ಎಂದು ಭಾವಿಸೋಣ ಎಂದು ಹೇಳಿದರು.
1916 ಸೆಪ್ಟೆಂಬರ್ 25 ರಂದು ಜನಿಸಿದ ದೀನ್‌ದಯಾಳ್ ಉಪಾಧ್ಯಾಯ ಅವರು ಪ್ರಸಿದ್ಧ ರಾಜಕೀಯ ಚಿಂತಕರು, ಅರ್ಥಶಾಸ್ತ್ರಜ್ಞರು ಮತ್ತು ಭಾರತೀಯ ಜನಸಂಘದ ಪ್ರಮುಖ ನಾಯಕರಾಗಿದ್ದರು. ಅವರು ಏಕಾತ್ಮ ಮಾನವತಾವಾದ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಉಪಾಧ್ಯಾಯ ಅವರು ರಾಷ್ಟ್ರ ಧರ್ಮ, ಪಾಂಚಜನ್ಯ ಮತ್ತು ಸ್ವದೇಶಿ ದಿನಪತ್ರಿಕೆಗಳನ್ನೊಳಗೊಂಡಂತೆ ಹಲವು ಪ್ರಕಟಣೆಗಳ ರೂವಾರಿಯಾಗಿದ್ದರು. ಹಿಂದುತ್ವದ ಮರುಉಜ್ಜೀವನದ ಆದರ್ಶಗಳನ್ನು ಪ್ರಚಾರ ಮಾಡಲು ಅವರು 1940 ರ ದಶಕದಲ್ಲಿ ರಾಷ್ಟ್ರ ಧರ್ಮ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು.
ಕಾನ್ಪುರದ ಸನಾತನ ಧರ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆರ್‌ಎಸ್‌ಎಸ್ ಸೇರಿದ ಅವರು, ನಂತರ ಭಾರತೀಯ ಜನಸಂಘದ ನಾಯಕರಾಗಿ ಬೆಳೆದರು. ಡಿಸೆಂಬರ್ 1967 ರಲ್ಲಿ ಅವರು ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. 1968 ಫೆಬ್ರವರಿ 11 ರಂದು ಅವರು ರಹಸ್ಯಮಯ ರೀತಿಯಲ್ಲಿ ಸಾವಿಗೀಡಾದರು. ಅವರ ಮೃತದೇಹವು ಮೊಘಲ್ ಸರಾಯ್ ಜಂಕ್ಷನ್ ಬಳಿ ಪತ್ತೆಯಾಗಿತ್ತು (ಈ ರೈಲ್ವೆ ನಿಲ್ದಾಣವನ್ನು ನಂತರ ದೀನ್‌ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ).
ಪಕ್ಷಕ್ಕೆ ಶಿಸ್ತುಬದ್ಧ ಕಾರ್ಯಕರ್ತರ ಪಡೆಯನ್ನು ಕಟ್ಟಿ ಬೆಳೆಸಿದ ಹಾಗೂ ಜನಸಂಘಕ್ಕೆ ಸೈದ್ಧಾಂತಿಕ ಚೌಕಟ್ಟು ಒದಗಿಸಿದ ಕೀರ್ತಿ ಉಪಾಧ್ಯಾಯ ಅವರಿಗೆ ಸಲ್ಲುತ್ತದೆ. 1967 ರ ಪಕ್ಷದ ಮಹಾವೇಶನವು ಅವರ ರಾಜಕೀಯ ಜೀವನದ ಪ್ರಮುಖ ಮೈಲಿಗಲ್ಲೆಂದು ಗುರುತಿಸಲ್ಪಡುತ್ತದೆ. ಅವರ ಏಕಾತ್ಮ ಮಾನವತಾವಾದ, ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆಯ ಆಲೋಚನೆಗಳು ಇಂದಿಗೂ ಬಿಜೆಪಿಯ ಸೈದ್ಧಾಂತಿಕ ಚೌಕಟ್ಟಿನ ಭಾಗವಾಗಿ ಮುಂದುವರಿದಿವೆ(ಏಜೆನ್ಸೀಸ್).