ಯುವಜನರ ಭವಿಷ್ಯ ಹಾಳು ಮಾಡಿದ್ದೇ ನೀವು: ಫಾಸ್ಟ್ ಟ್ರ್ಯಾಕ್ ಕೋರ್ಟ್ ಘೋಷಣೆ ಬೆನ್ನಲ್ಲೇ ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ! Rahul Gandhi
- ಮೋದಿ ಟ್ವೀಟ್ ಬೆನ್ನಲ್ಲೇ ಯುವಕರ ಭವಿಷ್ಯ ಹಾಳುಮಾಡಿದ್ದೇ ನೀವು ಎಂದು ರಾಹುಲ್ ಗಾಂಧಿ ನೇರ ವಾಗ್ದಾಳಿ
- ಪ್ರಧಾನಿ ಮೋದಿ ಘೋಷಣೆ ಬೆನ್ನಲ್ಲೇ ಶಿಕ್ಷಣ ಸಚಿವರ ವಜಾಕ್ಕೆ ಪಟ್ಟು ಹಿಡಿದ ರಾಹುಲ್ ಗಾಂಧಿ
- ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಮೋದಿ ಅಭಯಕ್ಕೆ ಎಕ್ಸ್ ಪೋಸ್ಟ್ ಮೂಲಕ ರಾಹುಲ್ ಗಾಂಧಿ ಕೌಂಟರ್
- ವಿದ್ಯಾರ್ಥಿಗಳ ಕ್ಷಮೆ ಕೇಳಿ ಶಿಕ್ಷಣ ಸಚಿವರನ್ನು ವಜಾಗೊಳಿಸಿ ಎಂದು ಪ್ರಧಾನಿಗೆ ರಾಹುಲ್ ಗಾಂಧಿ ಆಗ್ರಹ
ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತ್ವರಿತ ವಿಚಾರಣೆಗೆ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ( PM Modi ) ಅವರು ಘೋಷಣೆ ಮಾಡಿದ ಬೆನ್ನಲ್ಲೇ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ( Rahul Gandhi ) ಅವರು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಯುವಜನತೆಯ ಭವಿಷ್ಯವನ್ನು ಹೆಚ್ಚು ಹಾಳು ಮಾಡಿದ್ದೇ ನೀವು ಎಂದು ಮೋದಿ ವಿರುದ್ಧ ತಮ್ಮ ಎಕ್ಸ್ ಖಾತೆಯ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಮಾಡಲು ಮತ್ತು ಅದನ್ನು ಕೆಲವರ ಹಿತಾಸಕ್ತಿಗಳಿಗೆ ಬಲಿ ಕೊಡಲು ನೀವು ಅವಕಾಶ ಮಾಡಿಕೊಟ್ಟಿದ್ದೀರಿ ಹಾಗೂ ಅದಕ್ಕೆ ಪ್ರೋತ್ಸಾಹ ಕೂಡ ನೀಡಿದ್ದೀರಿ. ಇದಿಷ್ಟೇ ಅಲ್ಲದೆ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಕೃತ್ಯಕ್ಕೆ ಮತ್ತು ಅಕ್ರಮಗಳಿಗೆ ಕಾರಣರಾದ ಪ್ರತಿಯೊಬ್ಬ ವ್ಯಕ್ತಿಯನ್ನೂ ಸರ್ಕಾರವೇ ರಕ್ಷಿಸುತ್ತಾ ಬಂದಿದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ದೇಶಾದ್ಯಂತ ಹೋರಾಟ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಬೇಡಿಕೆಗಳು ಅತ್ಯಂತ ಸ್ಪಷ್ಟವಾಗಿವೆ ಮತ್ತು ನ್ಯಾಯಯುತವಾಗಿವೆ ಎಂದು ಪ್ರತಿಪಾದಿಸಿರುವ ರಾಹುಲ್ ಗಾಂಧಿ, ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಪ್ರಧಾನಿ ಮೋದಿ ಮುಂದೆ ಇಟ್ಟಿದ್ದಾರೆ. ಮೊದಲನೆಯದಾಗಿ ಸಾಲು ಸಾಲು ಪರೀಕ್ಷಾ ಲೋಪಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು, ಎರಡನೆಯದಾಗಿ ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳಲ್ಲಿ ಪ್ರಧಾನಿಯವರು ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಮೂರನೆಯದಾಗಿ ನ್ಯಾಯಯುತವಾಗಿ ಹಕ್ಕು ಕೇಳಲು ರಸ್ತೆಗಿಳಿದು ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ಶೀಘ್ರ ಹಾಗೂ ಕಠಿಣ ಶಿಕ್ಷೆಯನ್ನು ಖಚಿತಪಡಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಹಿತರಕ್ಷಣೆಗೆ ಸರ್ಕಾರ ಕೈಗೊಳ್ಳುತ್ತಿರುವ ಸಾಲು ಸಾಲು ಕ್ರಮಗಳ ಭಾಗವಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ನಮ್ಮ ಯುವಜನತೆಯ ಭವಿಷ್ಯದ ಜೊತೆ ಆಟವಾಡುವ ಹಾಗೂ ಅವರಿಗೆ ಹಾನಿ ಮಾಡಲು ಯತ್ನಿಸುವ ಯಾರನ್ನೇ ಆಗಲಿ ಯಾವುದೇ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿರುವಾಗಲೇ, ಸಂಸತ್ತಿನ ಒಳಗೂ ಸಹ ಈ ವಿಷಯ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರು ಸೋರಿಕೆಗೆ ಕಡಿವಾಣ ಹಾಕಲು ಫಾಸ್ಟ್-ಟ್ರ್ಯಾಕ್ ಕೋರ್ಟ್‌ಗಳ ಅಸ್ತ್ರ ಮುನ್ನೆಲೆಗೆ ತಂದಿದ್ದರೆ, ಇತ್ತ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶಿಕ್ಷಣ ಸಚಿವರ ರಾಜೀನಾಮೆ ಮತ್ತು ಸರ್ಕಾರದ ಜವಾಬ್ದಾರಿಯನ್ನು ಪ್ರಶ್ನಿಸಿ ದಾಳಿ ಚುರುಕುಗೊಳಿಸಿರುವುದರಿಂದ ಈ ರಾಜಕೀಯ ಮತ್ತು ಸಾಮಾಜಿಕ ಸಮರ ಮತ್ತಷ್ಟು ತೀವ್ರಗೊಂಡಿದೆ, (ಏಜೆನ್ಸೀಸ್).