ರಾಜಸ್ಥಾನದ ಪುಷ್ಕರ ಮೇಳದ ಪ್ರಮುಖ ಆಕರ್ಷಣೆಯಾಗಿರುವ ಕೇವಲ 2 ಅಡಿ ಎತ್ತರದ 'ಪಿಂಕಿ' ಎಮ್ಮೆ. 
ದೇಶ

ಪುಷ್ಕರ ಮೇಳದಲ್ಲಿ ದೈತ್ಯ ಪ್ರಾಣಿಗಳನ್ನೇ ಮೀರಿಸಿದ 2 ಅಡಿಯ 'ಪಿಂಕಿ': ಈ ಪುಟಾಣಿ ಎಮ್ಮೆಯ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ! Pinky Buffalo

ಪುಷ್ಕರ: ಜಗತ್ತಿನ ಅತಿದೊಡ್ಡ ಜಾನುವಾರು ಮೇಳಗಳಲ್ಲಿ ಒಂದಾದ ರಾಜಸ್ಥಾನದ ಪುಷ್ಕರ ಮೇಳ ಎಂದರೆ ತಕ್ಷಣ ನೆನಪಾಗುವುದು ಆಜಾನುಬಾಹು ಕುದುರೆಗಳು, ವರ್ಣರಂಜಿತ ಬಟ್ಟೆಗಳಿಂದ ಅಲಂಕರಿಸಿದ ಒಂಟೆಗಳು ಮತ್ತು ಬೃಹತ್ ಗಾತ್ರದ ಎಮ್ಮೆಗಳು. ಆದರೆ, ಈ ಬಾರಿಯ ಪುಷ್ಕರ ಮೇಳದ ಚಿತ್ರಣವೇ ಬದಲಾಗಿದೆ. ಇಲ್ಲಿನ ದೈತ್ಯ ಪ್ರಾಣಿಗಳನ್ನೆಲ್ಲಾ ಹಿಂದಿಕ್ಕಿ, 'ಪಿಂಕಿ' ಎಂಬ ಪುಟ್ಟ ಪ್ರಾಣಿಯೊಂದು ಇಡೀ ಮೇಳದ ಸೆಲೆಬ್ರಿಟಿಯಾಗಿ ಮಿಂಚುತ್ತಿದೆ.

ಅಂದಹಾಗೆ 'ಪಿಂಕಿ' ಎಂದರೆ ಯಾವುದೋ ನಾಯಿಮರಿಯೋ ಅಥವಾ ಮೊಲದ ಮರಿಯೋ ಅಲ್ಲ. ಇದು ಕೇವಲ 2 ಅಡಿ ಎತ್ತರವಿರುವ ಒಂದು ಪುಟಾಣಿ ಎಮ್ಮೆಯಾಗಿದೆ. ಹೌದು, ಕೇಳಲು ಅಚ್ಚರಿಯಾದರೂ, ಕೇವಲ ಎರಡೇ ಅಡಿ ಎತ್ತರವಿರುವ ಈ ಪುಟ್ಟ ಎಮ್ಮೆ ಈಗ ಪುಷ್ಕರ ಮೇಳಕ್ಕೆ ಬರುವ ಪ್ರತಿಯೊಬ್ಬರ ಕಣ್ಣು ಕುಕ್ಕುತ್ತಿದೆ.

ಪಿಂಕಿ ಸುತ್ತ ಸೆಲ್ಫಿ ಪ್ರಿಯರ ಜಾತ್ರೆ!

ಮೇಳಕ್ಕೆ ಬರುವ ದೇಶ-ವಿದೇಶದ ಪ್ರವಾಸಿಗರು ದೊಡ್ಡ ದೊಡ್ಡ ಪ್ರಾಣಿಗಳನ್ನು ನೋಡುವ ಬದಲು, ಪಿಂಕಿ ಇರುವ ಜಾಗದಲ್ಲೇ ಜಮಾಯಿಸುತ್ತಿದ್ದಾರೆ. ಪ್ರತಿದಿನ ಪಿಂಕಿಯ ಸುತ್ತಲೂ ಜನಜಂಗುಳಿಯೇ ಸೇರುತ್ತಿದೆ. "ನಮ್ಮ ಜೀವನದಲ್ಲೇ ಇಷ್ಟು ಚಿಕ್ಕ ಎಮ್ಮೆಯನ್ನು ನೋಡಿರಲಿಲ್ಲ" ಎಂದು ಸಂದರ್ಶಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಜನರು ಪಿಂಕಿಯ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ರೀಲ್ಸ್ ಹಾಗೂ ವಿಡಿಯೋಗಳನ್ನು ಮಾಡಲು ಮುಗಿಬೀಳುತ್ತಿದ್ದಾರೆ.

ಪುಟಾಣಿ ಎಮ್ಮೆಗೆ 1 ಕೋಟಿ ಬೆಲೆ!

ಪಿಂಕಿ ನೋಡಲು ಎಷ್ಟು ಚಿಕ್ಕದಾಗಿದೆಯೋ, ಅದರ ಬೆಲೆ ಅಷ್ಟೇ ದೊಡ್ಡದಾಗಿದೆ. ಈ ಪುಟಾಣಿ ಎಮ್ಮೆಯ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿ ಎಂದು ಅದರ ಮಾಲೀಕರು ಹೇಳಿಕೊಂಡಿದ್ದಾರೆ. ಇದು ಅತ್ಯಂತ ಅಪರೂಪದ ಎಮ್ಮೆಯಾಗಿದ್ದು, ಇದರ ಕುಬ್ಜ ಗಾತ್ರ, ವಿಶಿಷ್ಟ ನೋಟ ಮತ್ತು ಸೌಮ್ಯ ಸ್ವಭಾವವೇ ಇದಕ್ಕೆ ಇಷ್ಟೊಂದು ಭಾರಿ ಬೆಲೆ ಬರಲು ಕಾರಣ ಎನ್ನುತ್ತಿದ್ದಾರೆ. ವಿಶೇಷವೆಂದರೆ, ಈ ಪುಟಾಣಿ ಎಮ್ಮೆಯನ್ನು ಖರೀದಿಸಲು ಈಗಾಗಲೇ ಕೆಲವರು ಮುಂದೆ ಬಂದಿದ್ದಾರೆಂದು ಎಮ್ಮೆ ಮಾಲೀಕ ತಿಳಿಸಿದ್ದಾರೆ.

ಮಕ್ಕಳ ನೆಚ್ಚಿನ ಗೆಳತಿ ಈ ಪಿಂಕಿ

ಸಾಮಾನ್ಯವಾಗಿ ಎಮ್ಮೆ ಎಂದರೆ ಸ್ವಲ್ಪ ಒರಟು ಅಥವಾ ಹತ್ತಿರ ಹೋಗಲು ಭಯವಾಗುವ ಪ್ರಾಣಿ ಎನ್ನಲಾಗುತ್ತದೆ. ಆದರೆ ಪಿಂಕಿ ಹಾಗಲ್ಲ. ಇದು ತುಂಬಾ ಶಾಂತ ಮತ್ತು ಸ್ನೇಹಪರ ಸ್ವಭಾವದ್ದು. ಯಾರೇ ಹತ್ತಿರ ಬಂದು ಮೈದಡವಿದರೂ ಸ್ವಲ್ಪವೂ ಗಾಬರಿಯಾಗದೆ ಸುಮ್ಮನೆ ನಿಂತಿರುತ್ತದೆ. ಸಣ್ಣ ಮಕ್ಕಳ ಎತ್ತರಕ್ಕೆ ಸಮನಾಗಿರುವುದರಿಂದ ಮಕ್ಕಳಂತೂ ಪಿಂಕಿಯನ್ನು ಕಂಡು ಫುಲ್ ಖುಷ್ ಆಗಿದ್ದಾರೆ. ಮೇಳದ ಅತ್ಯಂತ ಮುದ್ದಾದ ಪ್ರಾಣಿ ಎಂಬ ಪಟ್ಟವೂ ಇದಕ್ಕೆ ಸಿಕ್ಕಿದೆ.

ವಿಐಪಿ ರೀತಿಯಲ್ಲಿ ಪಿಂಕಿಯ ಆರೈಕೆ

ಕೋಟಿ ಬೆಲೆಬಾಳುವ ಈ ಪುಟ್ಟ ಸೆಲೆಬ್ರಿಟಿಗೆ ಮಾಲೀಕರು ರಾಜಾತಿಥ್ಯವನ್ನೇ ನೀಡುತ್ತಿದ್ದಾರೆ. ಪಿಂಕಿಗೆ ಸರಳ ಮತ್ತು ಪೌಷ್ಟಿಕ ಆಹಾರ, ಕುಡಿಯಲು ಶುದ್ಧ ನೀರು ಹಾಗೂ ಸಾಕಷ್ಟು ವಿಶ್ರಾಂತಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಪಿಂಕಿಗೆ ಜೋರಾದ ಶಬ್ದ ಎಂದರೆ ಆಗುವುದಿಲ್ಲವಂತೆ. ಹೀಗಾಗಿ ಅದು ದಣಿದಾಗ ಅಥವಾ ವಿಶ್ರಾಂತಿ ಪಡೆಯುವಾಗ ಮೇಳದ ಡ್ರಮ್ ಶಬ್ದ ಮತ್ತು ಗದ್ದಲದಿಂದ ದೂರವಿರುವ ಶಾಂತ ಜಾಗದಲ್ಲಿ ಇದನ್ನು ಇರಿಸಲಾಗುತ್ತದೆ.

ದೈತ್ಯ ಪ್ರಾಣಿಗಳ ನಡುವೆ ಪುಟಾಣಿ ಕಮಾಲ್

ಈ ಬಾರಿಯ ಪುಷ್ಕರ ಮೇಳದಲ್ಲಿ ಸುಮಾರು ನೂರಾರು ಕೆಜಿ ತೂಕವಿರುವ ದೈತ್ಯ 'ಮುರ್ರಾ' ಎಮ್ಮೆಗಳು, ಕೋಟ್ಯಂತರ ರೂಪಾಯಿ ಬೆಲೆಯ ರಾಜಗಾಂಭೀರ್ಯದ ಕುದುರೆಗಳೂ ಬಂದಿವೆ. ಇವೆಲ್ಲವುಗಳ ನಡುವೆಯೂ 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬಂತೆ ಕೇವಲ 2 ಅಡಿ ಎತ್ತರದ ಪಿಂಕಿ ಇಡೀ ಮೇಳದ ಕೇಂದ್ರಬಿಂದುವಾಗಿ ಎಲ್ಲರ ಮನಗೆದ್ದಿದೆ, (ಏಜೆನ್ಸೀಸ್​).