ಕಾಜು ಕತ್ಲಿ ತುಕ್ಕು ಹಿಡಿದ ಪಿನ್ ಪತ್ತೆ!
- ಕಾಜು ಕತ್ಲಿ ತುಕ್ಕು ಹಿಡಿದ ಪಿನ್ ಪತ್ತೆ!
- ಮುಂಬೈನ ಖ್ಯಾತ ತಿವಾರಿ ಬ್ರದರ್ಸ್ ಸ್ವೀಟ್ಸ್‌ನಲ್ಲಿ ಖರೀದಿಸಿದ್ದ ಸಿಹಿ ತಿಂಡಿ
- ಗ್ರಾಹಕನಿಂದ ದೂರಿ ಎಫ್‌ಡಿಎ ತನಿಖೆ ಸಾಧ್ಯತೆ
ಮುಂಬೈ: ಜನರು ಬಹಳ ಇಷ್ಟಪಟ್ಟು ಸಿಹಿ ತಿಂಡಿಯನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಈ ಸಿಹಿ ತಿಂಡಿಯಲ್ಲಿ ಏನಾದರೂ ಕಸ-ಕಡ್ಡಿ ಸಿಕ್ಕಿದರೆ ಅಸಹ್ಯ ಎನಿಸುವುದು ಸಹಜ. ಹಾಗೂ ಭಾರತದಲ್ಲಿ ಆಹಾರ ಕಲಬೆರಿಕೆ ಸುದ್ದಿ ಇದೇ ಮೊದಲಂತೂ ಅಲ್ಲ, ಆದರೆ ಇದೇ ಕೊನೆ ಸುದ್ದಿಯಾಗಿರಲಿ ಎನ್ನುವುದು ನಮ್ಮ ಆಶಯವಾಗಿದೆ.
ಇಂತಹದ್ದೆ ಘಟನೆಯೊಂದು ಮಾಯಾನಗರಿ ಮುಂಬೈನಲ್ಲಿ ನಡೆದಿದ್ದು, ಬಾಯಲಿಟ್ಟರೆ ಕರಗುವ ಕಾಜು ಕತ್ಲಿಯಲ್ಲಿ ಲೋಹದ ಪಿನ್ (Pin in Kaju Katli) ಸಿಕ್ಕಿರುವ ಸುದ್ದಿ ಈಗ ಎಲ್ಲಡೆ ಹರಿದಾಡುತ್ತಿದೆ. ಹಾಗೂ ಈ ಸಿಹಿ ತಿಂಡಿಯನ್ನು ತಯಾರಿಸಿದ್ದ ಅಂಗಡಿಯ ವಿರುದ್ಧ ಈಗ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಮುಂಬೈನ ಚಾರ್ನಿ ರಸ್ತೆಯ ಒಪೇರಾ ಹೌಸ್ ಪ್ರದೇಶದಲ್ಲಿರುವ ಜನಪ್ರಿಯ ‘ತಿವಾರಿ ಬ್ರದರ್ಸ್ ಸ್ವೀಟ್ಸ್’ (Tiwari Brothers Sweets) ಅಂಗಡಿಯಿಂದ ಖರೀದಿಸಿದ ಕಾಜು ಕತ್ಲಿಯಲ್ಲಿ ತುಕ್ಕು ಹಿಡಿದ ಪಿನ್ ಪತ್ತೆಯಾಗಿದೆ ಎಂದು ಮುಂಬೈನ ನಿವಾಸಿಯೊಬ್ಬರು ಬಹಿರಂಗಪಡಿಸಿದ ನಂತರ ಬೆಳವಣಿಗೆ ನಡೆದಿದೆ.
ಏನಿದು ಘಟನೆ?
ಗ್ರಾಹಕರಾದ ಪ್ರಣಯ್ ಪಲಾವ್ ಎಂಬುವವರು ಜುಲೈ 29 ರಂದು ಈ ಅಂಗಡಿಯಿಂದ ಮೋತಿಚೂರ್ ಲಡ್ಡೂ ಹಾಗೂ ಕಾಜು ಕತ್ಲಿ ಸೇರಿದಂತೆ ಇತರೆ ಸಿಹಿತಿಂಡಿಗಳನ್ನು ಖರೀದಿಸಿ ಮನೆಗೆ ತಂದಿದ್ದರು. ಮನೆಯಲ್ಲಿ ಕುಳಿತು ಎಲ್ಲರೂ ಸೇರಿ ಕಾಜು ಕತ್ಲಿ ಸವಿಯುತ್ತಿರುವಾಗ, ಪ್ರಣಯ್ ಅವರ ಬಾಯಿಗೆ ತುಕ್ಕು ಹಿಡಿದ ಪಿನ್ವೊಂದು ಸಿಕ್ಕಿದೆ.
ಸಿಹಿ ತಿಂಡಿಯಲ್ಲಿ ಪಿನ್ ಸಿಕ್ಕ ಕೋಪಕ್ಕೆ ಆಕ್ರೋಶಗೊಂಡ ಗ್ರಾಹಕರು ನೇರವಾಗಿ ಆ ಅಂಗಡಿಯ ಅಡುಗೆಮನೆಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದ ಪ್ರಕಾರ, ಸಿಹಿತಿಂಡಿಗಳನ್ನು ತಯಾರಿಸುವ ಅಡುಗೆಮನೆಯ ಅತ್ಯಂತ ಕಳಪೆ ಮತ್ತು ಅನೈರ್ಮಲ್ಯದ ಸ್ಥಿತಿಯಿದೆ ಎಂದು ಆರೋಪಿಸಲಾಗಿದೆ. ಅಡುಗೆಮನೆಯ ಒಳಗೆಯೇ ಶೌಚಾಲಯವಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಗ್ಯಾಸ್ ಸ್ಟೌವ್ ಮೇಲೆ ಇರಿಸಿದ್ದ ಕಡಾಯಿಯಲ್ಲಿ ನೆಲ ಒರೆಸುವ ಬಟ್ಟೆಯನ್ನು ಹಾಕಿ ಕುದಿಸುತ್ತಿರುವಂತಹ ಆಘಾತಕಾರಿ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ ಎಂದು ಗ್ರಾಹಕರು ದೂರಿದ್ದಾರೆ.
ಗ್ರಾಹಕರ ಆಕ್ರೋಶ; ಎಫ್‌ಡಿಎ ತನಿಖೆ ಸಾಧ್ಯತೆ!
ನಾವು ದುಡ್ಡು ಕೊಟ್ಟು ತಿಂಡಿ ಕೊಳ್ಳುವುದು ಆರೋಗ್ಯ ಕೆಡಿಸಿಕೊಳ್ಳಲಿಕ್ಕಲ್ಲ. ಇಷ್ಟು ದೊಡ್ಡ ಬ್ರ್ಯಾಂಡ್‌ನವರು ಜನರ ಪ್ರಾಣದೊಂದಿಗೆ ಹೀಗೆ ಚೆಲ್ಲಾಟವಾಡುತ್ತಿದ್ದಾರೆ. ತಯಾರಿಕೆ ಮತ್ತು ಪ್ಯಾಕಿಂಗ್ ಮಾಡುವಾಗ ಸ್ವಲ್ಪವೂ ಜವಾಬ್ದಾರಿ ಇಲ್ವಾ? ಎಂದು ಗ್ರಾಹಕರು ಹಿಡಿಶಾಪ ಹಾಕಿದ್ದಾರೆ. ಆಹಾರ ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿರುವ ಈ ಅಂಗಡಿಯವರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಎಚ್ಚೆತ್ತಿರುವ ಗ್ರಾಹಕ ಪ್ರಣಯ್ ಪಲಾವ್, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತಕ್ಕೆ (FDA) ಅಧಿಕೃತವಾಗಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯದಲ್ಲೇ ಎಫ್‌ಡಿಎ ಅಧಿಕಾರಿಗಳು ಈ ತಿಂಡಿ ಅಂಗಡಿಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುವ ಸಾಧ್ಯತೆಯಿದೆ.
ಆರೋಪಗಳು ನಿಜವೆಂದು ಸಾಬೀತಾದರೆ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡವೂ ಹೆಚ್ಚಾಗಿದೆ. ಆದರೆ, ಈ ಎಲ್ಲ ಗಂಭೀರ ಆರೋಪಗಳ ಕುರಿತು ‘ತಿವಾರಿ ಬ್ರದರ್ಸ್ ಸ್ವೀಟ್ಸ್’ ಕಡೆಯಿಂದ ಇದುವರೆಗೆ ಯಾವುದೇ ಸ್ಪಷ್ಟನೆ ಅಥವಾ ಅಧಿಕೃತ ಹೇಳಿಕೆ ಹೊರಬಂದಿಲ್ಲ, (ಏಜನ್ಸೀಸ್).