ಡಿಸೆಂಬರ್​ ಕೊನೆಯಲ್ಲಿ ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿ?​ ಯುಪಿಐನಿಂದ ಹಣ ವಿತ್‌ಡ್ರಾಗೆ ಅವಕಾಶ? ಹೀಗಿದೆ ಹೊಸ ರೂಲ್ಸ್ | PF Withdrawal 
ದೇಶ

ಡಿಸೆಂಬರ್​ ಕೊನೆಯಲ್ಲಿ ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿ?​ ಯುಪಿಐನಿಂದ ಹಣ ವಿತ್‌ಡ್ರಾಗೆ ಅವಕಾಶ? ಹೀಗಿದೆ ಹೊಸ ರೂಲ್ಸ್ | PF Withdrawal

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (PF) ಹಣ ವಿತ್​ಡ್ರಾ ಪ್ರಕ್ರಿಯೆಯನ್ನು ಈಗ ಮತ್ತಷ್ಟು ಸುಲಭಗೊಳಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹೊಸ ಸೌಲಭ್ಯ ಪರಿಚಯಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಮೂಲಕ ಸದಸ್ಯರು ತಮ್ಮ ಪಿಎಫ್​ ಖಾತೆಯಲ್ಲಿರುವ ಅರ್ಹ ಮೊತ್ತವನ್ನು ಆನ್​ಲೈನ್ ಅಂದರೆ ಯುಪಿಐ​ ಮೂಲಕವೇ ಹಿಂಪಡೆಯಬಹುದಾಗಿದೆ.

ಈ ಹೊಸ ವ್ಯವಸ್ಥೆಯನ್ನು ಇದೇ ಡಿಸೆಂಬರ್ ಕೊನೆಯ ವೇಳೆಗೆ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ಯುಪಿಐ ಮೂಲಕ ಹಣ ಹಿಂಪಡೆಯಲು ಕನಿಷ್ಠ 1,000 ರೂ. ವಹಿವಾಟಿನ ಮಿತಿಯನ್ನು ನಿಗದಿಪಡಿಸುವ ಬಗ್ಗೆಯೂ ಇಪಿಎಫ್​ಒ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಇಪಿಎಫ್​ಒ 3.0 ಯೋಜನೆಯಡಿ ಹೊಸ ವ್ಯವಸ್ಥೆ

EPFO ಕೈಗೊಂಡಿರುವ ಡಿಜಿಟಲ್ ಪರಿವರ್ತನಾ ಯೋಜನೆಯ ಭಾಗವಾಗಿ ಈ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ. ಇಪಿಎಫ್​ಒ 3.0 ಯೋಜನೆಯ ಉದ್ದೇಶ ಲಕ್ಷಾಂತರ ಸದಸ್ಯರಿಗೆ ಪಿಎಫ್​ ಸೇವೆಗಳನ್ನು ವೇಗವಾಗಿ ಮತ್ತು ಸುಲಭವಾಗಿ ಒದಗಿಸುವುದಾಗಿದೆ. ಈ ಯೋಜನೆಯಡಿ ಯುಪಿಐ ಮುಖೇನ ಪಿಎಫ್​ ಹಣ ಹಿಂಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಕನಿಷ್ಠ 1,000 ವಿತ್‌ಡ್ರಾ ಮಿತಿ?

ವರದಿಗಳ ಪ್ರಕಾರ, ಯುಪಿಐ ಮೂಲಕ ಪಿಎಫ್​ ಹಣ ಹಿಂಪಡೆಯಲು ಕನಿಷ್ಠ 1,000 ವಹಿವಾಟಿನ ಮಿತಿಯನ್ನು ನಿಗದಿಪಡಿಸುವ ಬಗ್ಗೆ ಇಪಿಎಫ್​ಒ ಚಿಂತನೆ ನಡೆಸಿದೆ ಎನ್ನಲಾಗಿದೆ. ಸಣ್ಣ ಮೊತ್ತದ ಹಣಕ್ಕಾಗಿ ಪದೇ ಪದೇ ಕ್ಲೈಮ್‌ಗಳು ಸಲ್ಲಿಕೆ ಆಗುವುದರಿಂದ ವಹಿವಾಟು ಪ್ರಕ್ರಿಯೆಯ ಮೇಲಿನ ಕೆಲಸದ ಒತ್ತಡ ಹೆಚ್ಚಾಗಬಹುದು. ಹೀಗಾಗಿ, ಇದನ್ನು ತಡೆಯುವ ನಿಟ್ಟಿನಲ್ಲಿ ಕನಿಷ್ಠ ಮೊತ್ತದ ಮಿತಿಯನ್ನು ಪರಿಗಣಿಸಲಾಗುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಯಾವಾಗ ಜಾರಿಗೆ ?

ಈ ಸೌಲಭ್ಯವನ್ನು 2025-26ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಪರಿಚಯಿಸಲು ಈ ಹಿಂದೆ ಯೋಜಿಸಲಾಗಿತ್ತು. ಆದರೆ, ತಾಂತ್ರಿಕ ವ್ಯವಸ್ಥೆಗಳ ಸಂಯೋಜನೆ ಮತ್ತು ಪರೀಕ್ಷೆಯಲ್ಲಿ ವಿಳಂಬವಾದ ಕಾರಣ ಜಾರಿ ಮುಂದೂಡಿಕೆಯಾಗಿದೆ. ಇದೀಗ 2026ರ ಡಿಸೆಂಬರ್ ಅಂತ್ಯದೊಳಗೆ ಈ ವ್ಯವಸ್ಥೆಯನ್ನು ಆರಂಭಗೊಳಿಸುವ ನಿರೀಕ್ಷೆಯಿದೆ.

ಎಷ್ಟು ಪಿಎಫ್​ ಹಣ ಡ್ರಾ ಮಾಡ್ಬಹುದು?

ಯುಪಿಐ ಮೂಲಕ ಹಣ ಹಿಂಪಡೆಯುವ ಸೌಲಭ್ಯ ಜಾರಿಯಾದರೂ, ಸದಸ್ಯರು ಎಷ್ಟು ಮೊತ್ತವನ್ನು ಹಿಂಪಡೆಯಬಹುದು ಎಂಬುದು ಅವರ ಅರ್ಹತೆ ಮತ್ತು ಈಗಿರುವ ಇಪಿಎಫ್​ಒ ನಿಯಮಗಳ ಮೇಲೆ ನಿರ್ಧಾರವಾಗಲಿದೆ. ಅಂದರೆ, ಯುಪಿಐ ಸೌಲಭ್ಯವು ಹಣ ಪಾವತಿಸುವ ವಿಧಾನವನ್ನು ಸುಲಭಗೊಳಿಸಲಿದೆಯೇ ಹೊರತು, ಹಿಂಪಡೆಯಬಹುದಾದ ಮೊತ್ತದ ಮಿತಿಯನ್ನು ಸ್ವಯಂಚಾಲಿತವಾಗಿ ಹೆಚ್ಚಿಸುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಅನ್ವಯವಾಗುವ ನಿಯಮಗಳ ಅಡಿಯಲ್ಲಿ ಸದಸ್ಯರು ತಮ್ಮ ಅರ್ಹ ಪಿಎಫ್​ ಬ್ಯಾಲೆನ್ಸ್‌ನ ಶೇ.75ರವರೆಗೆ ಹಣ ಪಡೆಯಬಹುದು ಎಂದು ಕೆಲವು ವರದಿಗಳು ತಿಳಿಸಿವೆ. ಉಳಿದ ಮೊತ್ತ ಖಾತೆಯಲ್ಲಿ ಉಳಿಯಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಇಪಿಎಫ್​ಒ 3.0 ಅಡಿಯಲ್ಲಿ ಜಾರಿಗೆ ಬರಲಿರುವ ಯುಪಿಐ ವಿತ್‌ಡ್ರಾ ಸೌಲಭ್ಯದಿಂದ ಪಿಎಫ್​ ಹಣ ಹಿಂಪಡೆಯುವ ಪ್ರಕ್ರಿಯೆ ಸರಳವಾಗುವ ನಿರೀಕ್ಷೆಯಿದೆ. ಆದರೆ, ಕನಿಷ್ಠ ವಹಿವಾಟಿನ ಮಿತಿ ಮತ್ತು ಜಾರಿ ದಿನಾಂಕದ ಕುರಿತು ಇಪಿಎಫ್​ಒ ಅಧಿಕೃತ ಘೋಷಣೆ ಹೊರಡಿಸಿದ ಬಳಿಕವೇ ಏನೆಲ್ಲ, ಎಷ್ಟೆಲ್ಲ ಬದಲಾವಣೆಗಳು ಆಗಿವೆ ಎಂಬುದು ಸ್ಪಷ್ಟವಾಗಲಿದೆ,(ಏಜೆನ್ಸೀಸ್).