ದುಷ್ಕರ್ಮಿಗಳು ಪೆಟ್ರೋಲ್ ಬಾಂಬಾ ಎಸೆಯುತ್ತಿರುವ ಸಿಸಿಟಿವಿ ದೃಶ್ಯ
ರಾಂಚಿ: ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS office) ಕಚೇರಿ ಮೇಲೆ ಬುಧವಾರ(ಜೂ. 17) ಬೆಳಗಿನ ಜಾವ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅಪಾಯ ಜರುಗಿಲ್ಲ ಎಂದು ವರದಿಯಾಗಿದೆ.
ಪೆಟ್ರೋಲ್ ಬಾಂಬ್ ಎಸೆಯುವ ದೃಶ್ಯ ಹತ್ತಿರದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಇಬ್ಬರು ದುಷ್ಕರ್ಮಿಗಳು ಮೋಟಾರ್ ಸೈಕಲ್ನಲ್ಲಿ ಆಗಮಿಸಿ ಎಸೆಯುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಬಿಜೆಪಿ ನಾಯಕರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಜಾರ್ಖಂಡ್ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ, ಮಧ್ಯರಾತ್ರಿ 12.36ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಆರ್‌ಎಸ್‌ಎಸ್ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ. ಅವರು ಕಾರು ಮತ್ತು ಮೋಟಾರ್‌ಸೈಕಲ್‌ಗಳಲ್ಲಿ ಬಂದು ಕೃತ್ಯವೆಸಗಿದ್ದಾರೆ. ಇದು ಗಂಭೀರ ವಿಷಯ, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಕೇಂದ್ರ ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್ ಸಹ ಮಾತನಾಡಿದ್ದು, ಹಳದಿ ನಂಬರ್ ಪ್ಲೇಟ್ ಹೊಂದಿರುವ ಟ್ಯಾಕ್ಸಿ ಮತ್ತು ಎರಡು ಮೋಟಾರ್ ಸೈಕಲ್‌ಗಳು ಘಟನೆಯಲ್ಲಿ ಭಾಗಿಯಾಗಿವೆ. ಆರೋಪಿಗಳುಎರಡು ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದು, ಒಂದು ಗಾಳಿಯಲ್ಲಿ ಸ್ಫೋಟಗೊಂಡರೆ, ಎರಡನೆಯದು ನೆಲಕ್ಕೆ ಬಿದ್ದು ಸ್ಫೋಟಗೊಳ್ಳದೆ ಬೇರ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಇನ್ನೂ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).