ದೇಶ

ಚುನಾವಣಾ ಆಯುಕ್ತರ ಕಾನೂನು ವಿನಾಯಿತಿ ಪ್ರಶ್ನಿಸಿ ಅರ್ಜಿ: ಕೇಂದ್ರ ಮತ್ತು ಇಸಿಗೆ ಸುಪ್ರೀಂ ಕೋರ್ಟ್ ನೋಟಿಸ್ | Supreme Court

ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ತಮ್ಮ ಕರ್ತವ್ಯ ಪಾಲನ ಸಮಯದಲ್ಲಿ ಮಾಡಿದ ಕೃತ್ಯಗಳಿಗೆ ಕ್ರಿಮಿನಲ್ ಮೊಕದ್ದಮೆಗಳಿಂದ ವಿನಾಯಿತಿ ನೀಡುವ 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯ ಕಾನೂನಿನ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಮಂಗಳವಾರ(ಅ. 13) ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ನವದೆಹಲಿ: ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ತಮ್ಮ ಕರ್ತವ್ಯ ಪಾಲನ ಸಮಯದಲ್ಲಿ ಮಾಡಿದ ಕೃತ್ಯಗಳಿಗೆ ಕ್ರಿಮಿನಲ್ ಮೊಕದ್ದಮೆಗಳಿಂದ ವಿನಾಯಿತಿ ನೀಡುವ 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯ ಕಾನೂನಿನ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಮಂಗಳವಾರ(ಅ. 13) ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ಎನ್‌ಜಿಒ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್), ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ-2023ರ ಕಾನೂನಿನ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರಿದ್ದ ಪೀಠವು ಅರ್ಜಿ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023ರ ಸೆಕ್ಷನ್ 16 ಅನ್ನು ಅಸಾಂವಿಧಾನಿಕ ಎಂದು ಘೋಷಿಸಲು ಅರ್ಜಿಯಲ್ಲಿ ಕೋರಲಾಗಿದೆ.

ಕಾಯ್ದೆಯ ಸೆಕ್ಷನ್ 16ರ ನಿಬಂಧನೆಯು, ಅಧಿಕೃತ ಕರ್ತವ್ಯಗಳ ನಿರ್ವಹಣೆಯ ಸಮಯದಲ್ಲಿ ಯಾವುದೇ ಕಾನೂನು ಬಾಹಿರ ಕೃತ್ಯ, ಕಾರ್ಯ ಅಥವಾ ಮಾತುಗಳಿಗಾಗಿ, ಹಾಲಿ ಅಥವಾ ಮಾಜಿ ಮುಖ್ಯ ಚುನಾವಣಾ ಆಯುಕ್ತರು ಅಥವಾ ಚುನಾವಣಾ ಆಯುಕ್ತರ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಗಳನ್ನು ಪರಿಗಣಿಸದಂತೆ ನ್ಯಾಯಾಲಯವನ್ನು ನಿರ್ಬಂಧಿಸುತ್ತದೆ.

ಲೋಕ ಪ್ರಹರಿ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ್ದು, ಅದನ್ನು ಈ ಅರ್ಜಿಯೊಂದಿಗೆ ಸುಪ್ರೀಂಕೋರ್ಟ್ ವಿಚಾರಣೆಗೆ ಪರಿಗಣಿಸಿದೆ. ಸೆಕ್ಷನ್ 16 ಸಿಇಸಿ ಮತ್ತು ಇಸಿಗಳಿಗೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಂದ ಜೀವಮಾನದ ವಿನಾಯಿತಿ ನೀಡುತ್ತದೆ, ಇದರಿಂದಾಗಿ ಅವರು ಮಾಡಿದ ತಪ್ಪು ಮತ್ತು ಅಧಿಕಾರದ ದುರುಪಯೋಗಕ್ಕಾಗಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಾದಿಸಿದೆ (ಏಜೆನ್ಸೀಸ್).