ಆಡಂಬರ, ಬೂಟಾಟಿಕೆ, ಬಡಾಯಿ ; 2029ರ ಚುನಾವಣೆಯಲ್ಲಿ ಎನ್​ಡಿಎ ಗೆಲುವು ಎಂದ ಅಮಿತ್ ಶಾಗೆ ಕಾಂಗ್ರೆಸ್​ ತಿರುಗೇಟು | Congress

2029ರ ಲೋಕಸಭೆ ಚುನಾವಣೆಯಲ್ಲೂ ಎನ್​ಡಿಎ ಬಹುಮತ ಪಡೆಯಲಿದೆ, ಕಾಂಗ್ರೆಸ್ ಮತ್ತು ಅದರ ಇಂಡಿಯಾ ಮೈತ್ರಿಕೂಟ ಸೋಲಲಿದೆ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಆಡಂಬರ, ಬೂಟಾಟಿಕೆ, ಬಡಾಯಿ ಎಂದು ವಾಗ್ದಾಳಿ ನಡೆಸಿದೆ.
ಆಡಂಬರ, ಬೂಟಾಟಿಕೆ, ಬಡಾಯಿ ; 2029ರ ಚುನಾವಣೆಯಲ್ಲಿ ಎನ್​ಡಿಎ ಗೆಲುವು ಎಂದ ಅಮಿತ್ ಶಾಗೆ ಕಾಂಗ್ರೆಸ್​ ತಿರುಗೇಟು | Congress
Published on: 

ನವದೆಹಲಿ: 2029ರ ಲೋಕಸಭೆ ಚುನಾವಣೆಯಲ್ಲೂ ಎನ್​ಡಿಎ ಬಹುಮತ ಪಡೆಯಲಿದೆ, ಕಾಂಗ್ರೆಸ್ ಮತ್ತು ಅದರ ಇಂಡಿಯಾ ಮೈತ್ರಿಕೂಟ ಸೋಲಲಿದೆ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಆಡಂಬರ, ಬೂಟಾಟಿಕೆ, ಬಡಾಯಿ ಎಂದು ವಾಗ್ದಾಳಿ ನಡೆಸಿದೆ.

ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ದೇಶದ ಚುನಾವಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆ ಕಳವಳಗಳು ಇರುವಾಗಲೇ ಗೃಹ ಸಚಿವರು ಚುನಾವಣಾ ಗೆಲುವುಗಳನ್ನು ಸಂಭ್ರಮಿಸುತ್ತಿರುವುದು ವಿಪರ್ಯಾಸ. ಅವರೇ ಚುನಾವಣಾ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, 'ಮತ ಕಳ್ಳ' ಎಂದು ಕರೆಯಲ್ಪಡುವ ಅಮಿತ್ ಶಾ ಅವರು ಚುನಾವಣಾ ಗೆಲುವನ್ನು ಸಂಭ್ರಮಿಸುತ್ತಿರುವುದು ಪರಮ ವಿಪರ್ಯಾಸ. ಯಾಕಂದರೆ, ನಮ್ಮ ಚುನಾವಣಾ ವ್ಯವಸ್ಥೆಯನ್ನೇ ಅವರು ಹೇಗೆ ನಾಶಪಡಿಸುತ್ತಿದ್ದಾರೆ ಎಂಬುದೇ ಈಗ ಮೂಲ ಸಮಸ್ಯೆಯಾಗಿದೆ. ಆದ್ರೆ ಶಾ ಈಗಾಗಲೇ 2029ರ ಬಗ್ಗೆ ಮಾತನಾಡ್ತಿದ್ದಾರೆ. ಮೋದಿ ಅವರ ಸ್ಥಾನವು ಅಸ್ಥಿರವಾಗಿದೆ ಎಂಬುದು ಅವರಿಗೂ ಸ್ಪಷ್ಟವಾಗಿ ತಿಳಿದಿದೆ ಎಂದು ಕಿಡಿಕಾರಿದ್ದಾರೆ.

ಮುಂದುವರೆದು, ಅವರ ದೇಹಭಾಷೆಯನ್ನು ಗಮನಿಸಿ, ಅವರಲ್ಲಿರುವ ಭಯವು ಎದ್ದು ಕಾಣುತ್ತಿದೆ. ಎಷ್ಟು ಆತಂಕದಲ್ಲಿದ್ದರಂದರೆ, ಕೇವಲ 'ಗೋದಿ ಮೀಡಿಯಾ' (ಪಕ್ಷಪಾತದ ಮಾಧ್ಯಮ)ದೊಂದಿಗೆ ಮಾತ್ರ ಮಾತನಾಡಿದರು. ಮತ್ತು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಅವರ ಮುಖದಲ್ಲಿ ತೀವ್ರವಾದ ವಿಚಲಿತ ಭಾವನೆ ಎದ್ದು ಕಾಣುತ್ತಿತ್ತು. ಅಮಿತ್ ಶಾ ಅವರೇ 2029ರವರೆಗೂ ನಿಮ್ಮ ಹುದ್ದೆ ಉಳಿಸಿಕೊಳ್ಳುವ ಬಗ್ಗೆ ನೀವು ಚಿಂತಿಸಬೇಕಾಗಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಹ, ಕೇಂದ್ರ ಗೃಹ ಸಚಿವರು ತಮ್ಮ 3 ಬಿ-ಗಳೊಂದಿಗೆ ಹಿಂತಿರುಗಿದ್ದಾರೆ, ಆಡಂಬರ, ಬೂಟಾಟಿಕೆ, ಬಡಾಯಿ. ವೋಟ್ ಚೋರಿಯ ಸಹ ನಿರ್ಮಾಪಕ ಸಹ 2029ರ ಲೋಕಸಭಾ ಚುನಾವಣೆಯ 'ಭವಿಷ್ಯ' ನುಡಿದಿದ್ದಾರೆ. ಅಂದ್ರೆ ಅವರು ನಿಸ್ಸಂದೇಹವಾಗಿ ಈಗಾಗಲೇ ರಿಗ್ಗಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಅದು ಸಂಭವಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಳಿನ ಮೇಲೆ ಕಟ್ಟಲಾದ ಸರ್ವಾಧಿಕಾರಿ ಸರ್ಕಾರಗಳನ್ನು (ಈ ಸರ್ಕಾರದಂತೆಯೇ) ಹೊಣೆಗಾರರನ್ನಾಗಿಸಲು ಮತ್ತು ಅವುಗಳನ್ನು ಅಧಿಕಾರದಿಂದ ಕೆಳಗಿಳಿಸಲು ಮತದಾನದ ಸಾಂವಿಧಾನಿಕ ಹಕ್ಕೇ ತಮ್ಮ ಅತಿದೊಡ್ಡ ಶಕ್ತಿ ಎಂಬುದು ಜನರಿಗೆ ತಿಳಿದಿದೆ. ಇದೇ ಕಾರಣಕ್ಕಾಗಿ ಇಂಡಿಯಾ, ಅದರಲ್ಲೂ ವಿಶೇಷವಾಗಿ ಯುವಜನರು ಈಗ ಬೀದಿಗಿಳಿದಿದ್ದಾರೆ ಎಂದು ಹೇಳಿದ್ದಾರೆ.

Also Read
ಗಂಗಾ ನದಿಯಲ್ಲಿ ದುರಂತ; ದೋಣಿ ಮಗುಚಿ 14 ಮಂದಿ ಸಾವು; ಆರು ಮಂದಿ ರಕ್ಷಣೆ |boat capsizes
ಆಡಂಬರ, ಬೂಟಾಟಿಕೆ, ಬಡಾಯಿ ; 2029ರ ಚುನಾವಣೆಯಲ್ಲಿ ಎನ್​ಡಿಎ ಗೆಲುವು ಎಂದ ಅಮಿತ್ ಶಾಗೆ ಕಾಂಗ್ರೆಸ್​ ತಿರುಗೇಟು | Congress

ತಮ್ಮ ವಿರುದ್ಧ ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶದಿಂದಾಗಿ ಅಮಿತ್ ಶಾ ಮತ್ತು ಕೇಂದ್ರ ಸರ್ಕಾರ ಕಂಗೆಟ್ಟಿದೆ. ಪ್ರಸ್ತುತ ಸರ್ಕಾರ ಪತನಗೊಂಡ ಬಳಿಕ, ಕೇಂದ್ರ ಗೃಹ ಸಚಿವರು ತಾವು ಎಸಗಿದ್ದಾರೆನ್ನಲಾದ ಅಕ್ರಮಗಳ ಕುರಿತಾದ ತನಿಖೆಯನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.

ಅಮಿತ್ ಶಾ ಹೇಳಿದ್ದೇನು?

ಎಸ್​ಐಆರ್ ಮತ್ತು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ನಾಯಕರ ಪ್ರತಿಭಟನೆ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ, 2029ರ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲಲಿದೆ, ಎನ್​ಡಿಎ ಬಹುಮತ ಪಡೆಯಲಿದೆ ಎಂದು ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್ ನಾಯಕರ ಆರೋಪಗಳಿಗೆ ನೇರ ಉತ್ತರ ನೀಡಿದ ಅಮಿತ್ ಶಾ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ಅಗಾಧ ಜನಪ್ರಿಯತೆಯನ್ನು ಕೇವಲ ಮತದಾರರ ಪಟ್ಟಿ ಪರಿಷ್ಕರಣೆಯ ಮೇಲೆ ತಳ್ಳಿ ನೀವು ವಾಸ್ತವದಿಂದ ಓಡಿಹೋಗುತ್ತಿದ್ದೀರಿ. ಸೋಲಿಗೆ ಕಾರಣ ಬೇರೆಡೆ ಹುಡುಕುವ ಬದಲು ಕಾಂಗ್ರೆಸ್ ಪಕ್ಷ ಮೊದಲು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದಿದ್ದರು.

ಒಂದು ಕಾಲದಲ್ಲಿ ಸತತ 41 ವರ್ಷಗಳ ಕಾಲ ಗದ್ದುಗೆ ಹಿಡಿದು ಮೆರೆದಿದ್ದ ಪ್ರಮುಖ ರಾಜ್ಯವೊಂದರಲ್ಲೂ ಇಂದು ಕಾಂಗ್ರೆಸ್ ಒಂದೇ ಒಂದು ಸೀಟು ಗೆಲ್ಲಲು ಹೆಣಗಾಡುತ್ತಿದೆ. ಇಂತಹ ಹೀನಾಯ ಸ್ಥಿತಿಗೆ ತಲುಪಿರುವುದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಶಾ ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿಯವರಿಗೆ ನಾನು ಹೇಳಬಯಸುವುದೇನಂದ್ರೆ, ಎಸ್‌ಐಆರ್ ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ನಿಮ್ಮ ತಂತ್ರವನ್ನು ಈ ದೇಶದ ಜನರು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ. ಇನ್ನು ಮುಂದೆ ನಿಮ್ಮ ಕುತಂತ್ರಗಳಿಗೆ ಬಲಿಯಾಗುವುದಿಲ್ಲ. 2029ರ ಚುನಾವಣೆಯಲ್ಲೂ ನೀವು ಸೋಲಿಗೆ ಸಿದ್ದರಾಗಬೇಕು ಎಂದಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net