ದೇಶ

ತಾಜ್​ ಮಹಲ್ ನೋಡಲು ಪಾಕ್ ಸಚಿವ ಮುಸಾದಿಕ್ ಮಲಿಕ್ ನಿಯೋಗಕ್ಕೆ ಅನುಮತಿ: ನಿಜಾಮುದ್ದೀನ್ ದರ್ಗಾಕ್ಕೆ ನೋ ಎಂದ ಕೇಂದ್ರ | Musadik Malik

ದೆಹಲಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO)ಯ ಸಭೆಯಲ್ಲಿ ಭಾಗವಹಿಸಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ ಅವರ ನಿಯೋಗಕ್ಕೆ ತಾಜ್​ ಮಹಲ್​ ಭೇಟಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ದೆಹಲಿಯ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿದೆ ಎಂದು ಶನಿವಾರ(ನ. 21) ವರದಿಯಾಗಿದೆ.

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO)ಯ ಸಭೆಯಲ್ಲಿ ಭಾಗವಹಿಸಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ ಅವರ ನಿಯೋಗಕ್ಕೆ ತಾಜ್​ ಮಹಲ್​ ಭೇಟಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ದೆಹಲಿಯ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿದೆ ಎಂದು ಶನಿವಾರ(ನ. 21) ವರದಿಯಾಗಿದೆ.

ನವೆಂಬರ್ 20 ರಿಂದ 22 ರವರೆಗೆ ನಡೆಯಲಿರುವ ಮೊದಲ SCO ನಾಗರಿಕ ಸಂವಾದ ವೇದಿಕೆಯಲ್ಲಿ ಭಾಗವಹಿಸಲು ಪಾಕ್ ಹವಾಮಾನ ಸಚಿವ ಮುಸಾದಿಕ್ ಮಲಿಕ್ ಅವರ ನಿಯೋಗ ಭಾರತದಲ್ಲಿದೆ. ಬಂದ ದಿನವೇ ತಾಜ್ ಮಹಲ್ ಮತ್ತು ಹುಮಾಯೂನ್ ಸಮಾಧಿ ಸೇರಿದಂತೆ ಭಾರತದ ಹಲವಾರು ಐತಿಹಾಸಿಕ ಹೆಗ್ಗುರುತುಗಳಿಗೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿತ್ತು.

ಆದರೆ ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿತ್ತು. ಇಂದು ಅವರಿಗೆ ತಾಜ್​ ಮಹಲ್​ಗೆ ಭೇಟಿ ನೀಡಲು ಅನುಮತಿಸಿದೆ. ಜೊತೆಗೆ ದೆಹಲಿ ಹುಮಾಯೂನ್ ಸಮಾಧಿ ಮತ್ತು ದೆಹಲಿ ಹಾತ್ ಸೇರಿದಂತೆ ದೆಹಲಿಯ ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಅವರಿಗೆ ಅನುಮತಿ ನೀಡಲಾಗಿದೆ. ಇದರೊಂದಿಗೆ, ಮಲಿಕ್ ನೇತೃತ್ವದ ತಂಡವು ಆ ಸ್ಥಳಗಳಿಗೆ ಭೇಟಿ ನೀಡಲಿದೆ.

ವಿಶೇಷವೆಂದರೆ, 2025ರ ಮೇ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ಸೇನಾ ಕಾರ್ಯಾಚರಣೆಯ ನಂತರ ಪಾಕಿಸ್ತಾನದ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. 2023ರಲ್ಲಿ ಗೋವಾದಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಪಾಕಿಸ್ತಾನದ ಅಂದಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಪಾಲ್ಗೊಂಡ ಬಳಿಕ, ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಅಂತಾರಾಷ್ಟ್ರೀಯ ಶಿಷ್ಟಾಚಾರದಂತೆ ಭಾರತವು ಅಕ್ಟೋಬರ್ 28ರಂದು ಪಾಕಿಸ್ತಾನ ಸೇರಿದಂತೆ ಎಲ್ಲಾ ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಿತ್ತು, ಬಳಿಕ ಪಾಕಿಸ್ತಾನ ಸರ್ಕಾರವು ಮುಸಾದಿಕ್ ಮಲಿಕ್ ಅವರ ಭಾಗವಹಿಸುವಿಕೆಯನ್ನು ದೃಢಪಡಿಸಿತ್ತು. ಪರಸ್ಪರ ಗೌರವದ ನೆಲೆಯಲ್ಲಿ ಎಸ್‌ಸಿಒ ಚೌಕಟ್ಟಿನೊಳಗೆ ನಾಗರಿಕತೆಗಳ ನಡುವಿನ ಸಂವಾದ ಮತ್ತು ಜನರ ನಡುವಿನ ಸಂಪರ್ಕವನ್ನು ಉತ್ತೇಜಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿತ್ತು (ಏಜೆನ್ಸೀಸ್).