

ನವದೆಹಲಿ: ಇತ್ತೀಚೆಗೆ ವಿಶ್ವದಾದ್ಯಂತ ಬಿಡುಗಡೆಯಾಗಿ ದೇಶದಲ್ಲಿ ಸಂಚಲನ ಮೂಡಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಬಿಲಾಂಗಿಂಗ್; ಎ ಜರ್ನಿ ಆಫ್ ಲವ್ ಪುಸ್ತಕಕ್ಕೆ ಕೌಂಟರ್ ಆಗಿ ಅವರ ಕುರಿತು ನಿಜವಾದ ಪುಸ್ತಕ ಬರೆಯುವೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶನಿವಾರ(ನ. 21) ಘೋಷಣೆ ಮಾಡಿದ್ದಾರೆ.
ಪುಸ್ತಕದಲ್ಲಿ ಮಾರುತಿ ಕಂಪನಿಯ ಮೇಲಿನ ಅವರ ಒಡೆತನ, ನ್ಯಾಷನಲ್ ಹೆರಾಲ್ಡ್ ಸ್ವಾಧೀನ ಪ್ರಕ್ರಿಯೆ ಹಾಗೂ ಮೇನಕಾ ಗಾಂಧಿಯವರೊಂದಿಗಿನ ಭಿನ್ನಾಭಿಪ್ರಾಯದ ಹಿಂದಿನ ಕಾರಣಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸುತ್ತೇನೆ. ಮತ್ತು ಬೋಫೋರ್ಸ್ ಕುರಿತ ಪ್ರಶ್ನೆಗಳಿಗೆ ಇದರಲ್ಲಿ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.
ಎಕ್ಸ್ನಲ್ಲಿ ಈ ಕುರಿತು ಸರಣಿ ಪೋಸ್ಟ್ ಹಾಕಿರುವ ಅವರು, ಈ ಪುಸ್ತಕವು ಬೋಫೋರ್ಸ್ ಹಗರಣ, ಯುಪಿಎ ಸರ್ಕಾರದ 2004-14ರ ಅವಧಿಯಲ್ಲಿ ಸೋನಿಯಾ ಗಾಂಧಿಯವರ ಪ್ರಭಾವ ಮತ್ತು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರೊಂದಿಗಿನ ಅವರ ಹದಗೆಟ್ಟ ಸಂಬಂಧಗಳು ಸೇರಿದಂತೆ ಹಲವಾರು ನೈಜ ರಾಜಕೀಯ ವಿವಾದಗಳನ್ನು ತಿಳಿಸಲಿದೆ ಎಂದು ಪ್ರತಿಪಾದಿಸಿದ್ದಾರೆ.
ನಾನು ಬರೆಯುವ ಪುಸ್ತಕ ನೈಜವಾಗಿರಲಿದೆ ಎಂದಿರುವ ಅವರು, ಇದು ಯಾರನ್ನಾದರೂ ಗುರಿಯಾಗಿಸಿಕೊಂಡು ನಡೆಸುವ 'ದುರುದ್ದೇಶಪೂರಿತ ದಾಳಿ' ಆಗಿರುವುದಿಲ್ಲ. ಸೋನಿಯಾ ಗಾಂಧಿ ಅವರು ಮಾರುತಿ ಕಂಪನಿಯ ಒಡೆಯರಾದದ್ದು ಹೇಗೆ? 'ನ್ಯಾಷನಲ್ ಹೆರಾಲ್ಡ್' ಅನ್ನು ಖರೀದಿಸಿದ್ದು ಹೇಗೆ? 2004 ರಿಂದ 2014 ರ ಅವಧಿಯಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನ ಮಂತ್ರಿಗಿಂತಲೂ ಉನ್ನತ ಸ್ಥಾನದಲ್ಲಿ ಹೇಗೆ ಇದ್ದರು? ಮೇನಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ನಡುವಿನ ಜಗಳಕ್ಕೆ ನಿಜವಾದ ಕಾರಣವೇನು? ಈ ಎಲ್ಲಾ ಪ್ರಶ್ನೆಗೆ ಪುಸ್ತಕ ಉತ್ತರ ನೀಡಲಿದೆ ಎಂದಿದ್ದಾರೆ.
ಪ್ರಧಾನ ಮಂತ್ರಿಯವರ ಬದಲಿಗೆ ಸೋನಿಯಾ ಜಿ ಅವರು ತಮ್ಮ ಕುಟುಂಬದೊಂದಿಗೆ ಚೀನಾ ಒಲಿಂಪಿಕ್ಸ್‌ಗೆ ಏಕೆ ಹೋದರು? ಸೀತಾರಾಮ್ ಕೇಸರಿ ಜಿ ಅವರ ಧೋತಿಯ ಹಿಂದಿನ ಕಥೆಯೇನು? ಪ್ರಧಾನ ಮಂತ್ರಿ ನರಸಿಂಹ ರಾವ್ ಜಿ ಮತ್ತು ಸೋನಿಯಾ ಗಾಂಧಿ ಜಿ ಅವರ ನಡುವೆ ಜಗಳ ಏಕೆ ನಡೆಯಿತು? 1999ರಲ್ಲಿ ಯಾವ ಕಾಂಗ್ರೆಸ್ ನಾಯಕ ಅವರಿಗೆ ದ್ರೋಹ ಬಗೆದರು? ರಾಹುಲ್ ಗಾಂಧಿ ಜಿ ಮತ್ತು ಪ್ರಿಯಾಂಕಾ ಗಾಂಧಿ ಜಿ ಇವರಲ್ಲಿ, ರಾಜಕೀಯವಾಗಿ ಅವರು ಯಾರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ? ಎಂಬ ಎಲ್ಲಾ ವಿಷಯಗಳ ಮೇಲೆ ಬೆಳಕು ಚೆಲ್ಲಲಿದ್ದೇನೆ, ಕಾದು ನೋಡಿ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).