

ನವದೆಹಲಿ: 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾದಲ್ಲಿ ಕಟ್ಟುಕಥೆಗಳನ್ನು ಸೇರಿಸಲಾಗಿದ್ದು ಮತ್ತು ರಾಕ್ಷಸ ರಾವಣನನ್ನು ವೈಭವೀಕರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶನಿವಾರ(ನ. 21) ಆರೋಪಿಸಿದೆ. ಮತ್ತು ಸಿನಿಮಾಕ್ಕೆ ನೀಡಲಾದ ಸೆನ್ಸಾರ್ ಪ್ರಮಾಣಪತ್ರವನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಅದರ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವವ ವಿಹೆಚ್ಪಿ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ರಾ, ಸಿನಿಮಾ ನಿರ್ಮಾಪಕರು ಮಹರ್ಷಿ ವಾಲ್ಮೀಕಿ ಅವರ ಮೂಲ ರಾಮಾಯಣದಲ್ಲಿನ ಹಲವು ಘಟನೆಗಳನ್ನು ತಿರುಚಿದ್ದಾರೆ, ಕಲ್ಪಿತ ಸನ್ನಿವೇಶಗಳನ್ನು ಸೇರಿಸಿದ್ದಾರೆ ಮತ್ತು ಪ್ರಮುಖ ಪಾತ್ರಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬದಲಾವಣೆಗಳು ಮಹಾಕಾವ್ಯವನ್ನು ಉದ್ದೇಶಪೂರ್ವಕವಾಗಿ ತಿರುಚುವ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಪ್ರಯತ್ನವಾಗಿದೆ. ಅಹಲ್ಯೆಯ ವಿಮೋಚನೆ, ನಿಷಾದರಾಜ್ ಗುಹಾನ ಸ್ನೇಹ ಮತ್ತು ಕೇವತ್ ಭಕ್ತಿಯಂತಹ ಪ್ರಸಂಗಗಳು ರಾಮನ ಸಾರ್ವತ್ರಿಕ ಪಾತ್ರದ ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ಚಿತ್ರದಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಹೇಳಿದ್ದಾರೆ.
ಬದಲಿಗೆ, ಸಮಾಜದ ಶತ್ರುಗಳಾಗಿದ್ದ ಮತ್ತು ಋಷಿಗಳು ಮತ್ತು ಸಂತರ ಆಧ್ಯಾತ್ಮಿಕ ಅಭ್ಯಾಸಗಳು, ಯಜ್ಞಗಳು ಮತ್ತು ಗುರುಕುಲಗಳಲ್ಲಿ ಅಡ್ಡಿಪಡಿಸಿದ ರಾಕ್ಷಸರನ್ನು ನಿರ್ಮೂಲನೆ ಮಾಡುವ ಭಗವಾನ್ ರಾಮನ ಮಹಾನ್ ಧ್ಯೇಯವನ್ನು ತನ್ನ ಹೆಂಡತಿಯ ಅಪಹರಣದ ಪ್ರತೀಕಾರದಿಂದ ನಡೆಸಲ್ಪಡುವ ವೈಯಕ್ತಿಕ ಹೋರಾಟವೆಂದು ಚಿತ್ರಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾವಣನು ಜ್ಞಾನ, ಭಕ್ತಿ ಮತ್ತು ಶಕ್ತಿಯ ಪರಾಕಾಷ್ಠೆ ಸಾಧಿಸಿದ್ದರೂ ಸಹ, ದುರಹಂಕಾರದಿಂದ ಭೂಮಿಯಲ್ಲಿರುವ ಪ್ರತಿ ಜೀವಿಯನ್ನು ಭಯಭೀತಗೊಳಿಸಿ ದಮನ ಮಾಡುತ್ತಿದ್ದನು. ಇದನ್ನು ರಾಮಾಯಣದ ಪ್ರತಿಯೊಂದು ಆವೃತ್ತಿಯಲ್ಲೂ ವಿವರಿಸಲಾಗಿದೆ. ಆದರೆ ಸಿನಿಮಾದಲ್ಲಿ ದಮನಿತರ ವಿಮೋಚಕ ಎಂದು ವೈಭವೀಕರಿಸುವ ಮೂಲಕ ರಾಜಕೀಯ ನಿರೂಪಣೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ಶ್ರೀರಾಮ ಮತ್ತು ರಾಮಾಯಣದಲ್ಲಿ ಆಳವಾದ ನಂಬಿಕೆಯನ್ನು ಹೊಂದಿರುವ ಲಕ್ಷಾಂತರ ಹಿಂದೂಗಳ ಭಾವನೆಗಳಿಗೆ ಈ ಚಿತ್ರ ತೀವ್ರ ನೋವುಂಟು ಮಾಡಿದೆ. ವ್ಯಕ್ತಿ, ಕುಟುಂಬ, ಸಾಮಾಜಿಕ ಮತ್ತು ರಾಜಕೀಯ ನಡವಳಿಕೆಯನ್ನು ನಿಯಂತ್ರಿಸುವ ನೈತಿಕ ಮೌಲ್ಯಗಳು ಮತ್ತು ತತ್ವಗಳನ್ನು ಸ್ಥಾಪಿಸುವ ರಾಮಾಯಣದ ಇಂತಹ ವಿರೂಪಗಳು ಸಮಾಜದ ನೈತಿಕ ಅಡಿಪಾಯಗಳ ಮೇಲಿನ ದಾಳಿಗೆ ಸಮಾನವಾಗಿದೆ. ಹಿಂದೂ ಸಮುದಾಯದ ಭಾವನೆಗಳೊಂದಿಗೆ ಆಟವಾಡಲು ಇಂತಹ ಪ್ರಯತ್ನಗಳನ್ನು ಸಮಾಜ ಎಂದಿಗೂ ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಿಸಿದ ರಾಮಾಯಣ: ರೈಸ್ ಆಫ್ ಎ ಲೆಜೆಂಡ್ ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಒಟ್ಟು ಎರಡು ಭಾಗದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಮೊದಲನೇ ಭಾಗ ಇದೇ ನ. 05ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ (ಏಜೆನ್ಸೀಸ್).