ನಿಹಾಂಗ್ ಸಿಖ್ಖರ ಹಿಡಿತದಿಂದ ನಗರಸು ಗುರುದ್ವಾರ ಮುಕ್ತ
- ರುದ್ರಪ್ರಯಾಗದ ನಗರಸು ಗುರುದ್ವಾರದಲ್ಲಿ ನಡೆದ ಹೈಡ್ರಾಮಾ ಅಂತ್ಯ
- ಸತತ ಮಾತುಕತೆ ಯಶಸ್ವಿ
- ನಿಹಾಂಗ್ ಸಿಖ್ಖರ ಹಿಡಿತದಿಂದ ನಗರಸು ಗುರುದ್ವಾರ ಮುಕ್ತ
ರುದ್ರಪ್ರಯಾಗ: ಪಾರ್ಕಿಂಗ್ಗಾಗಿ ಪ್ರಾರಂಭವಾದ ಚಿಕ್ಕ ಗಲಾಟೆ ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮಟ್ಟಿಗಿನ ಉದ್ವಿಗ್ನ ಘಟನೆ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗನಲ್ಲಿ ನಡೆದಿತ್ತು.
ಶನಿವಾರ (ಜೂ. 20) ನಗರಸು ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ನಿಹಾಂಗ್ ಸಿಖ್ಗಳು (Nihang Sikhs in Nagarsu Gurudwara) ನಿನ್ನೆ (ಮಂಗಳವಾರ, ಜೂ.23) ಮಾತುಕತೆಗೆ ಒಪ್ಪಿದ್ದು ಗುರುದ್ವಾರವನ್ನು ತೊರೆಯುವುದಾಗಿ ಭರವಸೆ ನೀಡಿದ್ದಾರೆ.
ಎಲ್ಲಾ ಸಮಸ್ಯೆ ಪರಿಹಾರವಾಗಿದೆ!
ಕಳೆದ ನಾಲ್ಕು ದಿನಗಳಿಂದ ನಗರಸು ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ನಿಹಾಂಗ್ ಸಿಖ್ರು, ಪೊಲೀಸರಿಂದ ಬಂಧಿತರಾದ ತಮ್ಮ ಸಂಗಡಿಗರ ಬಿಡುಗಡೆಗೆ ಪಟ್ಟು ಹಿಡಿದು, ಗುರುದ್ವಾರದಲ್ಲಿದ್ದ ಭಕ್ತರನ್ನು ಬಂಧಿಗಳನ್ನಾಗಿಸಿ ಕೊಂಡಿದ್ದರು. ನಂತರ ನಿಹಾಂಗ್ಗಳನ್ನು ಸಮಾಧಾನ ಪಡಿಸಲು, ಸ್ಥಳೀಯ ಆಡಳಿತಾಧಿಕಾರಿಗಳು, ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಅರೆ ಮಿಲಿಟರಿ ಪಡೆಯನ್ನು ಸ್ಥಳಕ್ಕೆ ರವಾನಿಸಲಾಗಿತ್ತು.
ಸತತ ಮಾತುಕತೆ ನಂತರ, ಗುರುದ್ವಾರವನ್ನು ನಿಹಾಂಗ್ಗಳು ತಮ್ಮ ಹಿಡಿತದಿಂದ ಕೈಬಿಟ್ಟಿದ್ದಾರೆ, ಅವರ ಮನವಿಯನ್ನು ನಾವು ಸ್ವೀಕರಿಸಿದ್ದೆವೆ. ಈಗ ಸ್ಥಳದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಲ್ ಮಿಶ್ರಾ ತಿಳಿಸಿದ್ದಾರೆ.
ಘಟನೆ ಹಿನ್ನಲೆ
ಜೂನ್ 16 ರಂದು ಕರ್ಣಪ್ರಯಾಗದಲ್ಲಿ ಪಾರ್ಕಿಂಗ್ಗಾಗಿ ಸ್ಥಳೀಯರೊಂದಿಗೆ ನಿಹಾಂಗ್ ಸಿಖ್ರ ಜಗಳವಾಗಿತ್ತು. ಸ್ಥಳೀಯರು, ನಿಹಾಂಗ್ಗಳು ತಮ್ಮ ತಲ್ವಾರ್ ಮತ್ತು ಕೃಪಾಣಗಳ ಮೂಲಕ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ದೂರನ್ನು ನೀಡಿದ್ದು, ನಾಲ್ಕು ಜನ ನಿಹಾಂಗ್ಗಳನ್ನು ಬಂಧಿಸಲಾಗಿತ್ತು.
ಆದರೆ ನಿಹಾಂಗ್ಗಳ ಪ್ರಕಾರ, ಈ ಪ್ರಕರಣದಲ್ಲಿ ಪೊಲೀಸರು ಕೇವಲ ಸ್ಥಳೀಯರ ಮಾತನ್ನು ಕೇಳಿದ್ದು, ತಮ್ಮ ವಾದವನ್ನು ಆಲಿಸಿಯೇ ಇಲ್ಲ. ಅಷ್ಟೇ ಅಲ್ಲದೆ ಬಂಧಿಸಿದ ನಿಹಾಂಗ್ಗಳ ಮೇಲೆ ಪೊಲೀಸರು ಹಲ್ಲೆ ನಡೆಸಿ, ಅವರ ತಲೆ ಮೇಲಿದ್ದ ಪಗಡಿಯನ್ನು ತೆಗಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನಿಹಾಂಗ್ಗಳ ಕೋಪಕ್ಕೆ ಕಾರಣವಾಗಿತ್ತು.
ಈ ಘಟನೆ ಬಳಿಕ ನಗರಸು ಗುರುದ್ವಾರಕ್ಕೆ ಮರಳಿದ ನಿಹಾಂಗ್ಗಳು ನಾಳೆ ಪಂಜಾಬ್ನಿಂದ ಹೋರಾಟಗಾರರು ಬರಲಿದ್ದಾರೆ ನಮಗೆ 50-60 ಕೋಣೆಗಳನ್ನು ವ್ಯವಸ್ಥೆ ಮಾಡಿ ಎಂದು ಗುರುದ್ವಾರ ಆಡಳಿತ ಮಂಡಳಿಗೆ ಕೇಳಿಕೊಂಡಿದ್ದರು. ಆದರೆ ಅವರ ಈ ಮನವಿ ಅಂಗೀಕಾರವಾಗದ ಹಿನ್ನಲೆ ಗುರುದ್ವಾರವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು, (ಏಜನ್ಸೀಸ್).