MP S Jothimani | ಕಾಂಗ್ರೆಸ್ ನಾಯಕರೊಂದಿಗೆ ಸಂಸದೆ ಎಸ್. ಜೋತಿಮಣಿ
ಚೆನ್ನೈ: ಕೆಲ ನಾಯಕರ ಸ್ವಾರ್ಥದಿಂದಾಗಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಕ್ರಮೇಣ ವಿನಾಶದ ಹಾದಿಯತ್ತ ಸಾಗುತ್ತಿದೆ ಎಂದು ಸಂಸದೆ ಎಸ್. ಜೋತಿಮಣಿ ಆರೋಪಿಸಿದ್ದು, ಈ ಆಂತರಿಕ ಕಲಹವು ಪಕ್ಷ ಸಂಘಟನೆಗೆ ತೊಡಕಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸದೆ ಜೋತಿಮಣಿ, ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ), ರಾಹುಲ್ ಗಾಂಧಿಯವರ ನಿಸ್ವಾರ್ಥ, ತತ್ವಬದ್ಧ ಮತ್ತು ನಿರ್ಭೀತ ರಾಜಕೀಯಕ್ಕೆ ವಿರುದ್ಧವಾದ ಹಾದಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದರು.
ನಾವು ಅವರ (ರಾಹುಲ್ ಗಾಂಧಿ) ಕಠಿಣ ಪರಿಶ್ರಮ ಮತ್ತು ಅಪ್ರತಿಮ ತ್ಯಾಗಕ್ಕೆ ದ್ರೋಹ ಬಗೆಯಲು ಸಾಧ್ಯವಿಲ್ಲ ಎಂದು ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸದೆ ಪೋಸ್ಟ್ ಹಂಚಿಕೊಂಡಿದ್ದು, ಈ ಆರೋಪಕ್ಕೆ ಟಿಎನ್‌ಸಿಸಿ ಅಧ್ಯಕ್ಷ ಕೆ ಸೆಲ್ವಪೆರುಂಥಗೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರು, ಅವರ ಆಪ್ತ ಮೂಲಗಳು ಈ ಹೇಳಿಕೆಯನ್ನು ಸಂಪೂರ್ಣ ಸುಳ್ಳು ಎಂದು ಕರೆದಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವಾಗ ಯಾವುದೇ ರಾಜಕೀಯ ಪಕ್ಷವು ತನ್ನ ಸಂಸದರು ಚುನಾವಣಾ ಆಯೋಗಕ್ಕೆ ಮತಗಟ್ಟೆ ಏಜೆಂಟ್‌ಗಳ ಪಟ್ಟಿಯನ್ನು ಸಲ್ಲಿಸುವುದನ್ನು ತಡೆಯಲು ಯೋಚಿಸುವುದಿಲ್ಲ, ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಈ ಬೆಳವಣಿಗೆ ನಡೆಯುತ್ತಿದೆ, ಪ್ರತಿದಿನ ರಾಜ್ಯ ಕಾಂಗ್ರೆಸ್ ಸುದ್ದಿಯಲ್ಲಿರುವುದು ಜನರ ಸಮಸ್ಯೆಗಳಿಂದಲ್ಲ, ಬದಲಾಗಿ ತಪ್ಪು ಕಾರಣಗಳಿಗಾಗಿ ಎಂದಿದ್ದಾರೆ.
ತಮಿಳುನಾಡು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿಷಯಗಳು ಭಾರಿ ಕಳವಳವನ್ನು ಉಂಟುಮಾಡುತ್ತಿದ್ದು, ರಾಜಕೀಯ ಚಟುವಟಿಕೆಗಳು ಮತ್ತು ಸೈದ್ಧಾಂತಿಕ ನಿಲುವುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ದುಃಖಕರವಾಗಿವೆ, ರಾಜ್ಯ ಕೋಮುವಾದಿ, ವಿಭಜಕ ಮತ್ತು ಹಿಂಸಾತ್ಮಕ ಶಕ್ತಿಗಳಿಂದ ಹಿಂದೆಂದೂ ನೋಡಿರದ ದೊಡ್ಡ ಅಪಾಯವನ್ನು ಎದುರಿಸುತ್ತಿದೆ ಎಂದು ಜೋತಿಮಣಿ ಗಂಭೀರ ಆರೋಪ ಮಾಡಿದ್ದಾರೆ.
ಕೆ ಕಾಮರಾಜ್, ಪೆರಿಯಾರ್, ಇ.ವಿ. ರಾಮಸಾಮಿ ಸೇರಿದಂತೆ ಅನೇಕ ನಾಯಕರು ಪೋಷಿಸಿಕೊಂಡು ಬಂದಿದ್ದ ಸಾಮಾಜಿಕ ನ್ಯಾಯ, ಸ್ವಾಭಿಮಾನ, ಜನ-ಕೇಂದ್ರಿತ ಕಲ್ಯಾಣ ರಾಜಕೀಯ ಮತ್ತು ಬೆಳವಣಿಗೆಯಂತಹ ಆದರ್ಶಗಳನ್ನು, ಜನರ ಭಾವನೆಗಳನ್ನು ಕೆರಳಿಸುವ ಮೂಲಕ, ಅವುಗಳನ್ನೆಲ್ಲಾ ಹೂತುಹಾಕುವ ಮೂಲಕ ಅಧಿಕಾರವನ್ನು ಹಿಡಿಯಲು ಒಂದು ಗುಂಪು ಕಾಯುತ್ತಿದೆ.ಎಂದರು.
ಮುಂಬರುವ ಚುನಾವಣೆಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸುವ ಜವಾಬ್ದಾರಿ ಎಲ್ಲಾ ರಾಜಕೀಯ ಪಕ್ಷಗಳ ಮೇಲಿದ್ದು, ಕಾಂಗ್ರೆಸ್ ಪಕ್ಷವು ಆ ಅಗಾಧ ಜವಾಬ್ದಾರಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ, ಕೋಮು ಮತ್ತು ವಿಭಜಕ ನೀತಿಗೆ ಬಲಿಯಾಗದೆ, ಸಾಮಾಜಿಕ ನ್ಯಾಯ, ಸ್ವಾಭಿಮಾನ ಮತ್ತು ರಾಜ್ಯದ ಹಕ್ಕುಗಳಿಗಾಗಿ ದೃಢವಾಗಿ ಹೋರಾಡುವ ತಮಿಳುನಾಡಿನ ಜನರನ್ನು ಕಾಂಗ್ರೆಸ್ ಪಕ್ಷ ಕೈಬಿಡಬಾರದು ಎಂದು ಜೋತಿಮಣಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಪಕ್ಷ ಸುಮಾರು 60 ವರ್ಷಗಳಿಂದ ಅಧಿಕಾರದಲ್ಲಿದ್ದು, ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಪ್ರತಿ ಹಳ್ಳಿಯಲ್ಲಿ ಪಕ್ಷದ ಧ್ವಜವನ್ನು ಹೆಮ್ಮೆಯಿಂದ ಕಟ್ಟುತ್ತಾರೆ. ಹೀಗಿದ್ದಾಗ ಅವರ ಭಾವನೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದು, ನಡೆಯುತ್ತಿರುವ ಆಂತರಿಕ ಸಂಘರ್ಷಗಳು ಪಕ್ಷಕ್ಕೆ ತೊಂದರೆಯನ್ನುಂಟುಮಾಡುತ್ತಿವೆ ಎಂದು ಹೇಳಿದ್ದಾರೆ(ಏಜೆನ್ಸೀಸ್).