Navjot Kaur | ರಾಹುಲ್ ವಿರುದ್ಧ ನವಜೋತ್ ಕೌರ್ ಸಿಧು ವಾಗ್ದಾಳಿ 
ದೇಶ

ಪಪ್ಪು, ಕನಸಿನ ಲೋಕದಿಂದ ಹೊರಬನ್ನಿ...ನಿಮ್ಮ ಆಪ್ತರಿಂದಲೇ ಬಿಜೆಪಿಗರ ಭೇಟಿ!...ರಾಹುಲ್ ವಿರುದ್ಧ ನವಜೋತ್ ಕೌರ್ ಸಿಧು ವಾಗ್ದಾಳಿ | Navjot Kaur

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ನನ್ನ ಪ್ರತಿಭೆ ಗುರುತಿಸಿದೆ
  • ಪ್ರಾಮಾಣಿಕ ಮಿತ್ರರಿಗೆ ಆದ್ಯತೆ ನೀಡಿ
  • ಬಿಜೆಪಿ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರಂತೆ ರಾಹುಲ್​ ಆಪ್ತರು!
  • ರಾಹುಲ್ ವಿರುದ್ಧ ಮಾಜಿ ಶಾಸಕಿ ನವಜೋತ್ ಕೌರ್ ಸಿಧು ವಾಗ್ದಾಳಿ
ಚಂಡಿಗಢ: ಪಂಜಾಬ್ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ನವಜೋತ್ ಸಿಂಗ್ ಸಿಧು ಪತ್ನಿ, ಮಾಜಿ ಶಾಸಕಿ ಡಾ. ನವಜೋತ್ ಕೌರ್ ಸಿಧು (Navjotkaur) ಕಾಂಗ್ರೆಸ್​​​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈ ನಿರ್ಧಾರವು ಪಕ್ಷದ ಆಂತರಿಕ ಕಲಹವನ್ನು ಮತ್ತೊಮ್ಮೆ ಜಗಜ್ಜಾಹಿರುಗೊಳಿಸಿದೆ.
ರಾಜೀನಾಮೆ ಬಳಿಕ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ಕೌರ್​​, ಈ ಕುರಿತಾದ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನವಜೋತ್ ಕೌರ್ ಸಿಧು ಪತ್ರ 

ಪಪ್ಪು ತಮ್ಮನ್ನು ತಾವು ಏಕೈಕ ಪ್ರಾಮಾಣಿಕ ಮತ್ತು ಜ್ಞಾನವುಳ್ಳ ವ್ಯಕ್ತಿ ಎಂದು ಭಾವಿಸುವ ನಾಯಕನಾಗಿ ಕೊನೆಗೂ ಮುಂದಿನ ಹಾದಿಯಲ್ಲಿ ತಮ್ಮ ಹೆಸರನ್ನು ಮುದ್ರಿಸಿಕೊಂಡಿದ್ದಾರೆ. ಅವರಿಗೆ ಪ್ರದೇಶಗಳ ವಾಸ್ತವದ ಬಗ್ಗೆ ಅರಿವಿಲ್ಲ. ಸುತ್ತಲಿನ ಜನರು ಅವರನ್ನು ದೇಶಭ್ರಷ್ಟನನ್ನಾಗಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್​ನ ಹಿರಿಯ ನಾಯಕರು ನಿರ್ಧರಿಸುವ ಮುನ್ನವೇ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಅನೇಕರು ಲಾಭ ಗಳಿಸುತ್ತಿದ್ದಾರೆ. ಯಾವುದಾದರೂ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಕಾಂಗ್ರೆಸ್​​ ನಾಯಕ ಆರು ತಿಂಗಳುಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾನೆ, ಆ ಹೊತ್ತಿಗಾಗಲೇ ದೊಡ್ಡ ಪ್ರಮಾಣದ ಹಾನಿಯಾಗಿರುತ್ತದೆ ಎಂದು ಹೇಳಿದರು. 
ತಳಮಟ್ಟದ ಸಮಸ್ಯೆಗಳನ್ನು ಆಲಿಸಲು ಗಾಂಧಿಯವರಿಗೆ ಸಮಯವಿಲ್ಲ ಎಂದಿರುವ ಕೌರ್​, ಈ ಕಾರಣಕ್ಕಾಗಿಯೇ ಪಪ್ಪು ಎಂಬ ಅಡ್ಡಹೆಸರು ಬಂದಿದೆ. ಸ್ಥಳೀಯ ಸಮಸ್ಯೆಗಳ ಕುರಿತಾಗಿ ಕಾಂಗ್ರೆಸ್​​ನ ಹಿರಿಯ ನಾಯಕರನ್ನು ತಲುಪಲು ನಿರಂತರ ಪ್ರಯತ್ನ ಮಾಡಿದರು ಯಾವುದೇ ಉತ್ತರ ಸಿಗಲಿಲ್ಲ ಎಂದು ಹೇಳಿದರು.

ಬಿಜೆಪಿ ನನ್ನ ಪ್ರತಿಭೆ ಗುರುತಿಸಿದೆ...

ಬಿಜೆಪಿಯೊಂದಿಗಿನ ತಮ್ಮ ಹಿಂದಿನ ಸಂಬಂಧವನ್ನು ನೆನಪಿಸಿಕೊಂಡ ಸಿಧು, ಪಕ್ಷವು 2012 ರಲ್ಲಿ ತಮಗೆ ಟಿಕೆಟ್ ನೀಡುವ ಮೂಲಕ ಮತ್ತು ಮುಖ್ಯ ಸಂಸದೀಯ ಕಾರ್ಯದರ್ಶಿಯನ್ನು ನೇಮಿಸುವ ಮೂಲಕ ತಮ್ಮ ಪ್ರತಿಭೆಯನ್ನು ಗುರುತಿಸಿತ್ತು ಎಂದು ಹೇಳಿಕೆ ನೀಡಿದ್ದು, ಆದರೆ ಪ್ರಸ್ತುತ ಬಿಜೆಪಿಯೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಹೇಳುವ ಮೂಲಕ ಕಮಲ ಮುಡಿಯುವ ವದಂತಿಗಳಿಗೆ ತೆರೆ ಎಳೆದರು.
ಬಿಜೆಪಿಯ ಮನ್ನಣೆ vs ಕಾಂಗ್ರೆಸ್ ನಿರ್ಲಕ್ಷ್ಯ
ಪಕ್ಷಪಾತವಿಲ್ಲದ ಸಮೀಕ್ಷೆಗಳ ಮೂಲಕ ನನ್ನ ಪ್ರತಿಭೆಯನ್ನು ಗುರುತಿಸಿದ ಬಿಜೆಪಿ, 2012 ರಲ್ಲಿ ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ವಿಧಾನಸಭೆಯ ಟಿಕೆಟ್ ನೀಡಿತು, ಇದಾದ ಬಳಿಕ ಸಿಪಿಎಸ್ ಆಗಿ ನೇಮಿಸಿತು. ಸತ್ಯವನ್ನು ಮಾತನಾಡುವ, ಸಮಗ್ರತೆಯಿಂದ ಕೆಲಸ ಮಾಡುವ ಮತ್ತು ಇಲಾಖೆಯ ಸಮಸ್ಯೆಗಳನ್ನು ಪರಿಹರಿಸುವ ಸ್ವಾತಂತ್ರ್ಯವನ್ನು ನಾನು ಅದೇ ದಿನ ಆನಂದಿಸಿದೆ ಎಂದು ಕೌರ್​ ಬರೆದುಕೊಂಡಿದ್ದಾರೆ. 

ಪ್ರಾಮಾಣಿಕ ಮಿತ್ರರಿಗೆ ಆದ್ಯತೆ ನೀಡಿ

ತಮ್ಮ ಬೆಂಬಲಿಗರು ಎಂದು ಕರೆಯಲ್ಪಡುವವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದಾರೆಯೇ ಮತ್ತು ಪಂಜಾಬ್‌ಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆಯೇ ಎಂಬುದನ್ನು ರಾಹುಲ್​ ಗಾಂಧಿ ಮೊದಲು ಪರಿಶೀಲಿಸಲಿ. 
ತಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ತಿಳಿದುಕೊಂಡಿರುವ ಅನೇಕರು ಈಗಾಗಲೇ ತಮ್ಮ ಜೇಬು ತುಂಬಿಸಿಕೊಳ್ಳಲು ಆದ್ಯತೆ ನೀಡಿದ್ದಾರೆ, ಅವರೆಲ್ಲರಿಗೂ ಧೈರ್ಯವಿದ್ದರೆ ಪ್ರಸ್ತುತ ಸರ್ಕಾರದ ವಿರುದ್ಧ ಮಾತನಾಡುವಂತೆ ಸವಾಲು ಹಾಕಿದರು.

ಬಿಜೆಪಿ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರಂತೆ ರಾಹುಲ್​ ಆಪ್ತರು

ನಿಮ್ಮ ಹೆಚ್ಚಿನ ಅನುಯಾಯಿಗಳು ಬಿಜೆಪಿ ಕಚೇರಿಗಳಿಗೆ ಭೇಟಿ ನೀಡಿದ್ದಾರೆ, ಆದರೆ ನಾನು ಆ ಪಕ್ಷದ ನಾಯಕರನ್ನು ಎಂದಿಗೂ ಭೇಟಿ ಮಾಡಿಲ್ಲ, ಸಂಪರ್ಕಿಸಿಲ್ಲ. ನನ್ನ ಶಕ್ತಿ ಇರುವುದು ಪಂಜಾಬ್‌ನ ಕಲ್ಯಾಣಕ್ಕಾಗಿ. ಪ್ರಾಮಾಣಿಕ, ಶ್ರಮಶೀಲ ಜನರನ್ನು ಗೌರವಿಸುವುದನ್ನು ರೂಡಿಸಿಕೊಳ್ಳುವ ಮೂಲಕ ರಾಜಕೀಯ ಅಳಿವಿನ ಅಪಾಯವನ್ನು ಎದುರಿಸಿ. ನಿಮ್ಮ ಪಕ್ಷವು ಅತ್ಯಂತ ಭ್ರಷ್ಟರನ್ನು ಗೌರವಿಸಿದಾಗ ಪ್ರಾಮಾಣಿಕತೆಯನ್ನು ಬೋಧಿಸುವುದರಲ್ಲಿ ಅರ್ಥವಿಲ್ಲ, ನಿಮಗೆ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ.

ರಾಜೀನಾಮೆಗೆ ಕಾರಣ..?

ಕಳೆದ ಕೆಲವು ತಿಂಗಳುಗಳಿಂದ ನವಜೋತ್ ಸಿಂಗ್ ಸಿಧು ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಸಂಬಂಧ ಹಳಸಿದೆ, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಡಾ. ನವಜೋತ್ ಕೌರ್​​ರನ್ನು ಈ ಹಿಂದೆ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇದಾದ ತಿಂಗಳುಗಳ ಬಳಿಕ ಈಗ ಅವರು ಅಧಿಕೃತವಾಗಿ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಪಕ್ಷದ ವಿರುದ್ಧ ಬೆಂಕಿಯುಗುಳಿದ್ದಾರೆ(ಏಜೆನ್ಸೀಸ್​​).