ಕಾಶ್ಮೀರಿ ಪಂಡಿತರು ಮತ್ತು ಸರ್ಕಾರಿ ನೌಕರರನ್ನು ಗುರಿಯಾಗಿಸಿರುವ ಆನ್‌ಲೈನ್ ಬೆದರಿಕೆ ಪೋಸ್ಟರ್‌ನ ಸಾಂಕೇತಿಕ ಚಿತ್ರ.
ಜಮ್ಮು-ಕಾಶ್ಮೀರ: ಕಾಶ್ಮೀರ ಕಣಿವೆಯಲ್ಲಿ ಮತ್ತೆ ಶಾಂತಿ ಕದಡಲು ಉಗ್ರರು ಸಂಚು ರೂಪಿಸಿದ್ದು, ಲಷ್ಕರ್-ಎ-ತೈಬಾ ಉಗ್ರರ ಕೃತ್ಯಗಳಿಗೆ ಬೆಂಬಲವಾಗಿರುವ ಯುನೈಟೆಡ್ ಲಿಬರೇಶನ್ ಕೌನ್ಸಿಲ್ (ULC Threatens Hindus) ಎಂಬ ಆನ್‌ಲೈನ್ ಸಂಘಟನೆಯೊಂದು ಹೊರಡಿಸಿರುವ ಬೆದರಿಕೆ ಪತ್ರಗಳು ಈಗ ಕಾಶ್ಮೀರದಲ್ಲಿ ಭಾರಿ ಸಂಚಲನ ಮೂಡಿಸಿವೆ. ಸ್ಥಳೀಯರಲ್ಲದ ಉದ್ಯೋಗಿಗಳು ಹಾಗೂ ಕಾಶ್ಮೀರಕ್ಕೆ ಮರಳುತ್ತಿರುವ ಹಿಂದೂಗಳೇ ಈ ಉಗ್ರರ ಪ್ರಮುಖ ಟಾರ್ಗೆಟ್ ಆಗಿದ್ದಾರೆಂದು ಈ ಪತ್ರದಲ್ಲಿ ತಿಳಿಸಲಾಗಿದೆ.
ಈ ಆನ್‌ಲೈನ್ ಉಗ್ರ ಸಂಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಪತ್ರಗಳನ್ನು ವೈರಲ್ ಮಾಡುತ್ತಿದ್ದು, ಕಣಿವೆಯಲ್ಲಿ ಮತ್ತೆ ರಕ್ತಪಾತ ಹರಿಸುವುದಾಗಿ ಎಚ್ಚರಿಕೆ ನೀಡಿದೆ. ಸ್ಥಳೀಯರಲ್ಲದ ಕಾರ್ಮಿಕರು ಹಾಗೂ ಉದ್ಯೋಗಿಗಳು ದೆಹಲಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಯುಎಲ್‌ಸಿ, ಅವರನ್ನು ಕಾಶ್ಮೀರದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದೆ.
ಅಷ್ಟೇ ಅಲ್ಲ, ಮಹಿಳೆಯರು-ಪುರುಷರು ಎನ್ನದೆ ಎಲ್ಲರನ್ನೂ ಗುರಿಯಾಗಿಸಿಕೊಂಡು ಹಿಂಸಾತ್ಮಕ ಕ್ರಮ ಕೈಗೊಳ್ಳುವುದಾಗಿ ಹಾಗೂ ಬಲಿಪಶುಗಳ ಶವಗಳನ್ನು ಅವರವರ ಊರುಗಳಿಗೆ ಕಳುಹಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದೆ.
ಭಯಾನಕ ಸಂಚು ಮತ್ತು ಡಿಜಿಟಲ್ ಬೇಟೆ
ಕೇವಲ ಬೆದರಿಕೆ ಹಾಕಿ ಸುಮ್ಮನಿರದೆ, ಈ ಉಗ್ರರ ನೆರಳು ಸಂಘಟನೆಯು ಡಿಜಿಟಲ್ ಹ್ಯಾಕರ್‌ಗಳಂತೆ ವರ್ತಿಸುತ್ತಿದೆ. ಕಾಶ್ಮೀರದಲ್ಲಿ ಸರ್ಕಾರ ಮಾಡುತ್ತಿರುವ, ಪುನರ್ವಸತಿ ಪ್ರಯತ್ನಗಳನ್ನು ಅಡ್ಡಿಪಡಿಸುವುದು ಮತ್ತು ಇಲ್ಲಿ ಜನರಲ್ಲಿ ಭೀತಿ ಹುಟ್ಟುಹಾಕುವುದು ಇವರ ಮುಖ್ಯ ಉದ್ದೇಶವಾಗಿದೆ ಎಂದು ಭದ್ರತಾ ಪಡೆಗಳು ಸ್ಪಷ್ಟಪಡಿಸಿವೆ. ಈ ಪತ್ರಗಳ ಹಿಂದಿರುವವರು ಯಾರು ಎಂಬುದನ್ನು ಪತ್ತೆ ಹಚ್ಚಲು ಈಗ ಉನ್ನತ ಗುಪ್ತಚರ ಸಂಸ್ಥೆಗಳು ಡಿಜಿಟಲ್ ಹೆಜ್ಜೆಗುರುತನ್ನು ಬೆನ್ನಟ್ಟಿವೆ ಎಂದು ತಿಳಿದು ಬಂದಿದೆ.
ಆಗಸ್ಟ್‌ನಿಂದಲೇ ಶುರುವಾಗಿದೆ ಈ ಆಟ!
ಆಗಸ್ಟ್ 7, 2026 ರಂದು ಯುಎಲ್‌ಸಿ ತನ್ನ ಮೊದಲ ಬೆದರಿಕೆ ಪತ್ರವನ್ನು ಹೊರಡಿಸಿತು. ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಆರು ಕಾಶ್ಮೀರಿ ಪಂಡಿತ ಉದ್ಯೋಗಿಗಳ ಹೆಸರುಗಳು, ಅವರ ಫೋನ್ ನಂಬರ್‌ಗಳು ಮತ್ತು ಕುಟುಂಬದ ಸಂಪೂರ್ಣ ವಿವರಗಳನ್ನು ಈ ಪತ್ರದಲ್ಲಿ ಲೀಕ್ ಮಾಡಲಾಗಿತ್ತು. ಕಾಶ್ಮೀರದ ಹೊರಗೂ ಕೂಡ ಇವರ ಮೇಲೆ ಕಣ್ಣಿಡಲಾಗಿದೆ ಎಂದು ಉಗ್ರರು ಬೆದರಹಾಕಿದ್ದರು.
ಆಗಸ್ಟ್ 23, 2026 ರಂದು ಈ ಬೆದರಿಕೆ ಮತ್ತಷ್ಟು ಹೆಚ್ಚಾಯಿತು. ಜಮ್ಮುವಿನಲ್ಲಿರುವ ಉದ್ಯೋಗಿಗಳ ಮನೆಗಳ ವಿಳಾಸ, ಅವರು ಬಳಸುವ ವಾಹನಗಳ ನಂಬರ್‌ಗಳನ್ನು ಬಹಿರಂಗಪಡಿಸುವ ಮೂಲಕ 'ಡಾಕ್ಸಿಂಗ್' (ವೈಯಕ್ತಿಕ ಮಾಹಿತಿ ಸೋರಿಕೆ) ಅಭಿಯಾನವನ್ನು ತೀವ್ರಗೊಳಿಸಲಾಯಿತು.
ಆಗಸ್ಟ್ ಅಂತ್ಯದ ವೇಳೆಗೆ ಒಟ್ಟು ನಾಲ್ಕು ಬೆದರಿಕೆ ಪತ್ರಗಳು ಆನ್‌ಲೈನ್‌ನಲ್ಲಿ ಹರಿದಾಡಿವೆ. ಅಹ್ಮದ್ ಬಿಲಾಲ್ ಎಂಬ ಅಲಿಯಾಸ್ ಹೆಸರಿನಲ್ಲಿರುವ ವ್ಯಕ್ತಿಯೊಬ್ಬ ತಾನೇ ಈ ಯುಎಲ್‌ಸಿಯ ಮಾಧ್ಯಮ ಸಂಯೋಜಕ ಎಂದು ಹೇಳಿಕೊಂಡು ಈ ಪತ್ರಗಳಿಗೆ ಸಹಿ ಹಾಕಿದ್ದಾನೆ.
ರಾಜಕೀಯ ಕೆಸರೆರಾಟಕ್ಕೂ ಕಾರಣವಾದ ಬೆದರಿಕೆ
ಈ ಆನ್‌ಲೈನ್ ಬೆದರಿಕೆ ಪತ್ರಗಳು ಈಗ ರಾಜಕೀಯವಾಗಿ ಭಾರಿ ವಿವಾದವನ್ನೇ ಸೃಷ್ಟಿಸಿವೆ. ಸೆಪ್ಟೆಂಬರ್ 2 ಮತ್ತು 3 ರಂದು ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಈ ಪತ್ರಗಳ ಅಸಲಿಯತ್ತನ್ನು ಪ್ರಶ್ನಿಸಿದ್ದರೆ, ವಿರೋಧ ಪಕ್ಷದ ನಾಯಕರು ಇಸ್ಲಾಮಿಕ್ ಭಯೋತ್ಪಾದಕರ ಬೆದರಿಕೆಗಳನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಣಿವೆಯಲ್ಲಿ ರಾಜಕೀಯ ನಾಯಕರು ಜಟಾಪಟಿ ನಡೆಸುತ್ತಿದ್ದರೆ, ಮತ್ತೊಂದೆಡೆ ಅಮಾಯಕ ಉದ್ಯೋಗಿಗಳ ಜೀವಕ್ಕೆ ಉಗ್ರರಿಂದ ಕುತ್ತು ಬಂದೊದಗಿದೆ. ಸದ್ಯ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಆಗಿದ್ದು, ಈ ಬೆದರಿಕೆಗಳ ಹಿಂದೆ ಯಾರಿದ್ದಾರೆ ಮತ್ತು ಯಾವೆಲ್ಲ ಆನ್‌ಲೈನ್ ಚಾನೆಲ್‌ಗಳು ಇದರ ಹಿಂದೆ ಕೆಲಸ ಮಾಡುತ್ತಿವೆ ಎಂಬುದನ್ನು ತೀವ್ರವಾಗಿ ತನಿಖೆ ಮಾಡುತ್ತಿವೆ, (ಏಜನ್ಸೀಸ್).