ಭಾರತ & ಪಾಕಿಸ್ತಾನ 
ದೇಶ

ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕ್ ಆಡುವ ಸಾಧ್ಯತೆ; ಶ್ರೀಲಂಕಾ ಮನವಿ ಹಿನ್ನೆಲೆ ಬಹಿಷ್ಕಾರದಿಂದ ಯೂಟರ್ನ್​ | ICC T20 World Cup

ಪ್ರಮುಖ ಮುಖ್ಯಾಂಶಗಳು

  • ಐಸಿಸಿ ಟಿ20 ವಿಶ್ವಕಪ್​-2026ರಲ್ಲಿ ಭಾರತ ವಿರುದ್ಧ ಪಂದ್ಯ ಬಹಿಷ್ಕಾರ
  • ಭಾರತ ವಿರುದ್ಧದ ಪಾಕಿಸ್ತಾನ ಪಂದ್ಯ ಬಹಿಷ್ಕರಿಸಿದ್ದ ಪಾಕ್ ಸರ್ಕಾರ
  • ಫೆ. 15ರಂದು ನಡೆಯಬೇಕಿರುವ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ
ನವದೆಹಲಿ: ಐಸಿಸಿ ಟಿ20 ವಿಶ್ವಕಪ್​-2026(ICC T20 World Cup) ಪಂದ್ಯಾವಳಿಯಲ್ಲಿ ಫೆ. 15ರಂದು ನಡೆಯಬೇಕಿರುವ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್,​ ತನ್ನ ನಿರ್ಧಾರದಿಂದ ಯೂಟರ್ನ್ ತೆಗೆದುಕೊಂಡು ಭಾರತದ ವಿರುದ್ಧ ಪಂದ್ಯವನ್ನು ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಫೆ. 15ರ ಭಾರತದ ವಿರುದ್ದದ ಪಂದ್ಯವನ್ನು ಬಹಿಷ್ಕರಿಸದಂತೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮನವಿ ಮಾಡಿದ್ದು, ಈ ಕುರಿತು ಮತ್ತೊಮ್ಮೆ ತಮ್ಮ ಸರ್ಕಾರದೊಂದಿಗೆ ಚರ್ಚಿಸಲು ಪಿಸಿಬಿ ಮುಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ಗೆ ಇಮೇಲ್ ಕಳುಹಿಸಿದ್ದು, ಫೆ. 15ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ನಮಗೆ ಆರ್ಥಿಕ ನಷ್ಟವಾಗುತ್ತದೆ. ಮತ್ತು ಬಿಸಿಸಿಐ ಜೊತೆ ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸಿರುವ ನಮ್ಮ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ. ಪಂದ್ಯ ಬಹಿಷ್ಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದೆ ಎನ್ನಲಾಗಿದೆ.
ಇನ್ನೂ ಕ್ರಿಕೆಟ್ ವಿಚಾರದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದೊಂದಿಗೆ ಅವಿನಾಭಾವ ಸಂಬಂಧವಿದ್ದು, ಶ್ರೀಲಂಕಾದ ಮನವಿಯನ್ನು ಪಿಸಿಬಿ ಅಷ್ಟು ಸುಲಭವಾಗಿ ನಿರ್ಲಕ್ಷ್ಯಸುವ ಸಾಧ್ಯತೆ ಕಡಿಮೆ. ಎಸ್​ಎಲ್​ಸಿ ಅಧ್ಯಕ್ಷ ಶಮ್ಮಿ ಸಿಲ್ವಾ, ಪಿಸಿಬಿ ಬೋರ್ಡ್​ ಅಧ್ಯಕ್ಷ ಮೊಹ್ಸಿನ್ ನಖ್ವಿ ಜೊತೆ ನೇರವಾಗಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ವಿರುದ್ಧದ ಪಂದ್ಯವನ್ನು ಆಡದಿದ್ರೆ, ಶ್ರೀಲಂಕಕ್ಕೆ ಆಗುವ ಟಿಕೆಟ್, ಅತಿಥ್ಯ, ಜಾಹೀರಾತು ಸೇರಿ ಹಲವು ಕೋಟಿ ರೂ.ಗಳಷ್ಟು ನಷ್ಟವನ್ನು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಅನುಭವಿಸಲಿದೆ ಎಂಬುದನ್ನು ಮೊಹ್ಸಿನ್ ನಖ್ಬಿಗೆ ಮನವರಿಕೆ ಮಾಡಲಾಗಿದೆ. ಹೀಗಾಗಿ ಶಮ್ಮಿ ಸಿಲ್ವಾ ಅವರಿಗೆ ನಖ್ವಿ ಭರವಸೆ ನೀಡಿದ್ದು, ತಮ್ಮ ಸರ್ಕಾರದೊಂದಿಗೆ ಸಮಾಲೋಚಿಸಿ ನಿಮ್ಮನ್ನು ಸಂಪರ್ಕಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಫೆ. 01ರಂದು ಟ್ವೀಟ್ ಮಾಡಿದ್ದ ಪಾಕಿಸ್ತಾನ ಸರ್ಕಾರ, ಐಸಿಸಿ ಟಿ20 ವಿಶ್ವಕಪ್​-2026ರಲ್ಲಿ ನಮ್ಮ ತಂಡಕ್ಕೆ ಭಾಗವಹಿಸಲು ಅನುಮತಿ ನೀಡಲಾಗಿದೆ. ಆದಾಗ್ಯೂ, 2026 ಫೆಬ್ರವರಿ 15ರಂದು ಭಾರತದ ವಿರುದ್ಧ ನಿಗದಿಯಾಗಿರುವ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಹೇಳಿತ್ತು (ಏಜೆನ್ಸೀಸ್).