Coimbatore | ಕೊಯಮತ್ತೂರಿನಲ್ಲಿ 10 ವರ್ಷದ ಬಾಲಕಿಯ ಘೋರ ಕೊಲೆ; ಇಂತಹ ಅಮಾನವೀಯ ಕೃತ್ಯ ಸಹಿಸಲ್ಲ ಎಂದ ಸಿಎಂ ವಿಜಯ್​  
ದೇಶ

ಕೊಯಮತ್ತೂರಿನಲ್ಲಿ 10 ವರ್ಷದ ಬಾಲಕಿಯ ಘೋರ ಕೊಲೆ; ಇಂತಹ ಅಮಾನವೀಯ ಕೃತ್ಯ ಸಹಿಸಲ್ಲ ಎಂದ ಸಿಎಂ ವಿಜಯ್​ | Coimbatore

ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ (Coimbatore) ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ಶುಕ್ರವಾರ 10 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಗುರುವಾರ ಸಂಜೆಯಿಂದಲೇ ನಾಪತ್ತೆಯಾಗಿದ್ದ ಈ ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಕಾರ್ತಿಕ್ ಮತ್ತು ಮೋಹನ್ ರಾಜ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ. 
ಸುಲೂರು ಪ್ರದೇಶದ ತನ್ನ ಮನೆಯ ಬಳಿ ದಿನಸಿ ಖರೀದಿಸಲು ಬಾಲಕಿ ಹೊರಗೆ ಹೋಗಿದ್ದಾಗ ಆರೋಪಿಗಳು ಆಕೆಯನ್ನು ಅಪಹರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘೋರ ಘಟನೆಯಿಂದ ಆಕ್ರೋಶಗೊಂಡ ಬಾಲಕಿಯ ಪೋಷಕರು ಮತ್ತು ನೂರಾರು ವಿದ್ಯಾರ್ಥಿಗಳು ಸುಲೂರು ಪೊಲೀಸ್ ಠಾಣೆಯ ಹೊರಗೆ ರಸ್ತೆ ತಡೆ ನಡೆಸಿ ನ್ಯಾಯಕ್ಕಾಗಿ ತೀವ್ರ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ವಿಜಯ್​ ನೇರ ಭರವಸೆ ಸಿಗುವವರೆಗೂ ಮೃತರ ಕುಟುಂಬವು ಇ.ಎಸ್.ಐ ಆಸ್ಪತ್ರೆಯ ಶವಾಗಾರದಿಂದ ಶವವನ್ನು ತೆಗೆದುಕೊಳ್ಳಲು ನಿರಾಕರಿಸಿತ್ತು. ತಾವು ಬದಲಾವಣೆಗಾಗಿ ಹೊಸ ಸರ್ಕಾರಕ್ಕೆ ಮತ ಹಾಕಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯ ತಮ್ಮ ಗಮನಕ್ಕೆ ಬರುತ್ತಿದ್ದಂತೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೊಯಮತ್ತೂರಿನಲ್ಲಿ 10 ವರ್ಷದ ಬಾಲಕಿ ಮೇಲೆ ನಡೆದಿರುವ ಭಯಾನಕ ಘಟನೆ ಅಪಾರ ದುಃಖ ಮತ್ತು ಆಘಾತವನ್ನುಂಟುಮಾಡಿದೆ. ಇಂತಹ ಅಮಾನವೀಯ ಕೃತ್ಯಗಳನ್ನು ನಮ್ಮ ಸಮಾಜದಲ್ಲಿ ಎಂದಿಗೂ ಸಹಿಸಲಾಗುವುದಿಲ್ಲ ಎಂದು ಕಠಿಣ ಸಂದೇಶ ನೀಡಿದ್ದಾರೆ. ಇದರ ಜೊತೆಗೆ ತಮಿಳುನಾಡು ಸಚಿವ ಎಂ.ಎಸ್. ಸಂಪತ್ ಮತ್ತು ಸುಲೂರು ಕ್ಷೇತ್ರದ ಹೊಸ ಟಿವಿಕೆ (TVK) ಶಾಸಕ ಎನ್.ಎಂ. ಸುಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ಹೇಳಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದ್ದಾರೆ.
ಬಾಲಕಿಯ ಕೊಲೆ ಪ್ರಕರಣವು ರಾಜ್ಯದಲ್ಲಿ ತೀವ್ರ ರಾಜಕೀಯ ತಿರುವು ಪಡೆದುಕೊಂಡಿದೆ. ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಮೇಲೆ ವಿರೋಧ ಪಕ್ಷವಾದ ಡಿಎಂಕೆ ಕಾನೂನು ಸುವ್ಯವಸ್ಥೆಯ ವಿಷಯವಾಗಿ ತೀವ್ರ ವಾಗ್ದಾಳಿ ನಡೆಸಿದೆ. ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 12 ದಿನಗಳಲ್ಲಿ ಲೈಂಗಿಕ ಹಿಂಸೆ, ಗಾಂಜಾ ಕಳ್ಳಸಾಗಣೆ, ರೌಡಿಸಂ ಮತ್ತು ಆಡಳಿತ ಪಕ್ಷದ ಸದಸ್ಯರ ದೌರ್ಜನ್ಯಗಳು ಸೇರಿದಂತೆ 30 ಕ್ಕೂ ಹೆಚ್ಚು ಪ್ರಮುಖ ಅಪರಾಧ ಘಟನೆಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
ಈ ಘಟನೆಗಳು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದ್ದು, ಮಗುವಿನ ಕೊಲೆಗೆ ಕಾರಣರಾದವರನ್ನು ತ್ವರಿತವಾಗಿ ನ್ಯಾಯಕ್ಕೆ ಒಳಪಡಿಸಬೇಕು ಎಂದು ಉದಯನಿಧಿ ಒತ್ತಾಯಿಸಿದ್ದಾರೆ. ಇತ್ತ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಮಾತನಾಡಿ, ಮಹಿಳೆಯರ ಸುರಕ್ಷತೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿಎಂ ವಿಜಯ್ ಆಡಳಿತದಲ್ಲಿ ಮಹಿಳೆಯರ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯ ಬಗ್ಗೆ ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ನಾಯಕ ನಾರಾಯಣನ್ ತಿರುಪತಿ, ರಾಜ್ಯದ ಹದಗೆಟ್ಟ ಕಾನೂನು ಸುವ್ಯವಸ್ಥೆಗೆ ಹಿಂದಿನ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವೇ ಕಾರಣ ಎಂದು ತಿರುಗೇಟು ನೀಡಿದ್ದಾರೆ. ಕೊಯಮತ್ತೂರಿನಲ್ಲಿ 10 ವರ್ಷದ ಮಗುವಿನ ಮೇಲೆ ನಡೆದಿರುವುದು ಘೋರ ದುರಂತವಾಗಿದೆ ಎಂದಿರುವ ಅವರು, ಸರ್ಕಾರಗಳು ಬದಲಾದರೂ ಇಂತಹ ದೃಶ್ಯಗಳು ಬದಲಾಗದೆ ಇರುವುದಕ್ಕೆ ಹಿಂದಿನ ಡಿಎಂಕೆ ಆಡಳಿತವು ತಮಿಳುನಾಡಿನ ಕಾನೂನು ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಧ್ವಂಸಮಾಡಿತ್ತು ಎಂಬುದೇ ಸ್ಪಷ್ಟ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ(ಏಜೆನ್ಸೀಸ್​​).