ಅಪರೇಷನ್​ ಸಿಂದೂರ್​ ಬಳಿಕ ರಾಷ್ಟ್ರೀಯ ಭದ್ರತಾ ಸಲಹಾಗಾರರ ಪ್ರಥಮ ಪ್ರತಿಕ್ರಿಯೆ 
ದೇಶ

ನಮ್ಮ ತಾಳ್ಮೆ ಬಲಹೀನತೆಯಲ್ಲ, ಅದೇ ಭಾರತದ ಶಕ್ತಿ: ಪಾಕಿಸ್ತಾನಕ್ಕೆ ಅಜಿತ್​ ದೋವಲ್​ ಖಡಕ್​ ಎಚ್ಚರಿಕೆ! Ajit Doval Warning to Pakistan

ಪ್ರಮುಖ ಮುಖ್ಯಾಂಶಗಳು

  • ಅಪರೇಷನ್​ ಸಿಂದೂರ್​ ಬಳಿಕ ರಾಷ್ಟ್ರೀಯ ಭದ್ರತಾ ಸಲಹಾಗಾರರ ಪ್ರಥಮ ಪ್ರತಿಕ್ರಿಯೆ
  • ತಾಳ್ಮೆ ಎನ್ನುವುದು ನಮ್ಮ ಬಲಹೀನತೆಯಲ್ಲ, ಅದೇ ಭಾರತದ ಶಕ್ತಿ
  • ಉಗ್ರರಿಗೆ ಆಶ್ರಯ ಕೊಡಬೇಡಿ; ಅದು ನಿಮ್ಮ ದೇಶಕ್ಕೆ ಒಳ್ಳೆಯದಲ್ಲ
ನವದೆಹಲಿ: ಭಾರತ ಪಾಕಿಸ್ತಾನದ ಮೇಲೆ ಆಪರೇಷನ್​ ಸಿಂದೂರ್​ ನಡೆಸಿ ವರ್ಷ ಕಳೆದ ನಂತರ ರಾಷ್ಟ್ರೀಯ ಭದ್ರಾತಾ ಸಲಹೆಗಾರರಾದ ಅಜಿತ್​ ದೋವಲ್ (Ajit Doval Warning to Pakistan)​ ಅವರು ಇದೇ ಮೊದಲ ಬಾರಿಗೆ ಆಪರೇಷನ್​ ಸಿಂದೂರ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಡಿಸ್ಕವರಿ ಚಾನೆಲ್​ ನಿರ್ಮಿಸಿರುವ ಡೆಕ್ಲಾಸ್ಸಿಫೈಡ್​: ಆಪರೇಷನ್ ಸಿಂದೂರ್ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡು, ಮಾತನಾಡಿರುವ ಅಜಿತ್​ ದೋವಲ್​ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಈ ಸಾಕ್ಷ್ಯಚಿತ್ರವು ಆಗಸ್ಟ್​ 15 ರಾತ್ರಿ 9 ಗಂಟೆಗೆ ಬಿಡುಗಡೆಯಾಗಲಿದೆ.

ನಮ್ಮ ತಾಳ್ಮೆ ನಮ್ಮ ಬಲಹೀನತೆಯಲ್ಲ!

ಪಾಕಿಸ್ತಾನ ವರ್ಷಗಳಿಂದ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಾ ಭಾರತದ ವಿರುದ್ಧ ಪಿತೂರಿ ನಡೆಸುತ್ತಾ ಬಂದಿದೆ. ಆದರೆ ಆಪರೇಷನ್​ ಸಿಂದೂರ್​ ಮೂಲಕ, ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಕ್ಕೆ ನುಗ್ಗಿ ನಾವು ದಾಳಿ ಮಾಡುತ್ತೇವೆಂದು ವಿಶ್ವಕ್ಕೆ ಸಾಬೀತು ಪಡಿಸಿದ್ದಾಗಿ ದೋವಲ್​ ಹೇಳಿದ್ದಾರೆ.

ಹಾಗೆಯೇ, ಉಗ್ರರಿಗೆ ಆಶ್ರಯ ನೀಡಿದರೆ ಅದು ತನ್ನ ನೆರೆ ದೇಶಕ್ಕೆ ಮಾತ್ರವಲ್ಲ, ತನ್ನ ದೇಶಕ್ಕೂ ಆಪತ್ತನ್ನು ತರುತ್ತದೆ ಎಂದು ಪಾಕ್​ ಸೇನೆ ಮನವರಿಕೆ ಮಾಡಿಕೊಳ್ಳಬೇಕೆಂದು ಭದ್ರತಾ ಸಲಹೆಗಾರರು ತಿಳಿಸಿದ್ದಾರೆ.

ನಮ್ಮ ಮೇಲೆ ಪಾಕಿಸ್ತಾನ ಪ್ರೇರಿತ ದಾಳಿ ನಡೆದಾಗ ನಾವು ಕೆಲ ದಿನ ಸುಮ್ಮನೇ ಇರುತ್ತೇವೆ, ಆದರೆ ತಾಳ್ಮೆ ಎನ್ನುವುದು ಭಾರತದ ಬಲಹೀನತೆಯಲ್ಲ, ಬದಲಾಗಿ ಅದೇ ನಮ್ಮ ಅತ್ಯುನ್ನತ ಶಕ್ತಿಯಾಗಿದೆ ಎಂದಿದ್ದಾರೆ.


ಆದರೆ, ನಾವು ಒಮ್ಮೆ ಸಮರಕ್ಕೆ ಸಿದ್ಧವಾದರೆ, ನಮ್ಮ ಗುರಿಯನ್ನು ಸಾಧಿಸದೇ ಮರಳುವುದಿಲ್ಲ ಎನ್ನುವುದಕ್ಕೆ ಈ ಆಪರೇಷನ್​ ಸಿಂದೂರ್​ ಉತ್ತಮ ಉದಾಹರಣೆಯಾಗಿದೆ ಎಂದು ದೋವಲ್​ ತಿಳಿಸಿದ್ದಾರೆ.

ಏನಿದು ಆಪರೇಷನ್​ ಸಿಂದೂರ್​?

ಆಪರೇಷನ್ ಸಿಂಧೂರ್ ಎನ್ನುವುದು 2025ರ ಮೇ 7 ರಂದು ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಸೇನಾ ಕಾರ್ಯಾಚರಣೆಯಾಗಿದೆ.
ಅದೇ ವರ್ಷದ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದುರ್ಘಟನೆಗೆ ತಕ್ಕ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು (ಭೂ, ವಾಯು ಮತ್ತು ನೌಕಾಪಡೆ) ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಕೈಗೊಂಡಿತು.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪಾಕ್ ಹಾಗೂ ಪಿಒಕೆಯಲ್ಲಿ ಗುರುತಿಸಲಾಗಿದ್ದ ಒಟ್ಟು ಒಂಬತ್ತು ಪ್ರಮುಖ ಉಗ್ರರ ಅಡಗುತಾಣಗಳನ್ನು ಈ ವಾಯುದಾಳಿಯ ಮೂಲಕ ಭಾರತೀಯ ಪಡೆಗಳು ಧೂಳಿಪಟಗೊಳಿಸಿದವು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಹಾಗೂ ದೇಶದ ಭದ್ರತೆಯ ವಿಚಾರದಲ್ಲಿ ಭಾರತದ ದೃಢಸಂಕಲ್ಪವನ್ನು ಈ ಕಾರ್ಯಾಚರಣೆಯು ಜಗತ್ತಿಗೆ ಸಾರಿತು,

(ಏಜನ್ಸೀಸ್​).