ಸ್ಪೀಕರ್ ಓಂ ಬಿರ್ಲಾ  
ದೇಶ

ಸದನದಲ್ಲಿ ಪಕ್ಷಪಾತ ಆರೋಪ; ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ವಿಪಕ್ಷಗಳು | Speaker Om Birla

ಪ್ರಮುಖ ಮುಖ್ಯಾಂಶಗಳು

  • ಸಂಸತ್ತಿ ಬಜೆಟ್​ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಪಕ್ಷಪಾತ
  • ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ
  • ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದಿಂದ ಮಂಡನೆಗೆ ಸಿದ್ದತೆ
ನವದೆಹಲಿ: ಸಂಸತ್ತಿ ಬಜೆಟ್​ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಪಕ್ಷಪಾತ ಮಾಡಿದ ಆರೋಪ ಮೇಲೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಸೋಮವಾರ(ಫೆ. 09) ವರದಿಯಾಗಿದೆ.
ಕಳೆದ ಸೋಮವಾರ(ಫೆ. 02) ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗವನ್ನು ಓದಲು ಬಯಸಿದ್ದರು. ಆದರೆ ಸದನದ ನಿಯಮಾವಳಿಗಳನ್ನು ಉಲ್ಲೇಖಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅನುಮತಿ ನಿರಾಕರಿಸಿದ್ದರು.
2020 ಜೂನ್​ನಲ್ಲಿ ಲಡಾಖ್​ನಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗವನ್ನು ರಾಹುಲ್ ಗಾಂಧಿ ಉಲ್ಲೇಖಿಸಲು ಪ್ರಯತ್ನಿಸಿದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಅನೇಕ ಬಿಜೆಪಿ ಸಚಿವರು ಆಕ್ಷೇಪಿಸಿದರು. ಸದನದ ನಿಯಮದ ಪ್ರಕಾರ ಅಪ್ರಕಟಿತವಾದ ಪುಸ್ತಕವನ್ನು ಉಲ್ಲೇಖಿಸಲಾಗಲ್ಲ ಎಂದಿದ್ದರು.
ಮಾರನೇ ದಿನ ಮಂಗಳವಾರ ರಾಹುಲ್ ಗಾಂಧಿಯವರಿಗೆ ಮಾತನಾಡಲು ಅವಕಾಶ ನೀಡುವಂತೆ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದ್ದರು. ಸ್ಪೀಕರ್ ಚೇರ್​ನತ್ತ ಪೇಪರ್ ಎಸೆದು ಅಶಿಸ್ತು ತೋರಿಸಿದ ಆರೋಪ ಮೇಲೆ ಓರ್ವ ಸಿಪಿಎಂ ಸಂಸದ ಸೇರಿ 8 ಮಂದಿ ಕಾಂಗ್ರೆಸ್ ಸಂಸದರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿತ್ತು.
ಆದಾದ ಬಳಿಕ ಗುರುವಾರ ಕಾಂಗ್ರೆಸ್ ಸಂಸದರು ಪ್ರಧಾನಿ ಮೋದಿ ಮೇಲೆ ಹಲ್ಲೆ ಮಾಡಲು ಸಿದ್ದರಿದ್ದರು ಎಂಬ ಆರೋಪದ ಮೇಲೆ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಕುರಿತು ಪ್ರಧಾನಿ ಮಾತನಾಡಲು ಲೋಕಸಭೆಗೆ ಬರದಂತೆ ನಾನೇ ಹೇಳಿದ್ದೇನೆ ಎಂದು ಸ್ಪೀಕರ್ ಓಂ ಬಿರ್ಲಾ ಸದನಕ್ಕೆ ತಿಳಿಸಿದ್ದರು. ಇದರಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಭಾಷಣ ಮೇಲೆ ಪ್ರಧಾನಿ ವಂದನಾ ನಿರ್ಣಯ ಭಾಷಣವಿಲ್ಲದೇ ಮುಕ್ತಾಯಗೊಂಡಿತ್ತು.
ಈ ಹಿನ್ನೆಲೆ ಇಂದು(ಫೆ. 09) ಬೆಳಗ್ಗೆ ಸಂಸತ್ ಅಧಿವೇಶನ ಆರಂಭವಾಗುವ ಮೊದಲೇ ಸಭೆ ಸೇರಿದ್ದ ವಿರೋಧ ಪಕ್ಷಗಳ ನಾಯಕರು ಸಂಸತ್​ನಲ್ಲಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ (ಏಜೆನ್ಸೀಸ್).