ನವದೆಹಲಿ: ಸುಮಾರು 1,000 ವರ್ಷಗಳ ಗುಲಾಮಗಿರಿಯ ಬಳಿಕ ಇದೇ ಮೊದಲ ಬಾರಿಗೆ ಕಳೆದ 13 ವರ್ಷಗಳಲ್ಲಿ ಸುಮಾರು 50 ಕೋಟಿ ಜನ ಬಡತದಿಂದ ಹೊರ ಬಂದಿದ್ದಾರೆ ಎಂದು ಭಾನುವಾರ(ನ. 22) ಪ್ರಧಾನಿ ಮೋದಿ ಹೇಳಿದ್ದಾರೆ.
ದೀಪಾವಳಿ ನಂತರ ಆಯೋಜಿಸಲಾಗಿದ್ದ ಗುಜರಾತ್ ಬಿಜೆಪಿ ಕಾರ್ಯಕರ್ತರ 'ಸ್ನೇಹ ಮಿಲನ' ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿರುವ ಅವರು, ಬಡತನದ ಈ ಇಳಿಕೆಯು ದೇಶದಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತಿದೆ ಎಂದು ತಿಳಿಸಿದ್ದಾರೆ.
ತಮ್ಮ ಸರ್ಕಾರದ ಅವಧಿಯಲ್ಲಿ ಇಷ್ಟು ಬಡತನ ಮಟ್ಟ ಕುಸಿದಿರುವುದಕ್ಕೆ ವಿರೋಧ ಪಕ್ಷಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದಿರುವ ಅವರು, ಅವರಿಗೆ ಇಷ್ಟವಾಗಲಿ ಅಥವಾ ಬಿಡಲಿ, ನಮ್ಮ ಕೆಲಸದ ಫಲಿತಾಂಶಗಳು ಕಣ್ಣಿಗೆ ಕಾಣುತ್ತಿವೆ ಎಂಬ ತೃಪ್ತಿ ನಮಗಿದೆ. ನಮ್ಮ ಉದ್ದೇಶ ಸರಿಯಾಗಿತ್ತು, ನಮ್ಮ ನೀತಿಗಳು ಸರಿಯಾಗಿದ್ದವು, ನಮ್ಮ ದಿಕ್ಕು ಸರಿಯಾಗಿತ್ತು ಮತ್ತು ನಾವು ಯಾವುದೇ ಪ್ರಯತ್ನದಲ್ಲಿ ಹಿಂದೆ ಬಿದ್ದಿಲ್ಲ ಎಂದಿದ್ದಾರೆ.
ಇತ್ತೀಚಿನ ವಿಶ್ವಬ್ಯಾಂಕ್ ಮೌಲ್ಯಮಾಪನ ವರದಿಯನ್ನು ಉಲ್ಲೇಖಿಸಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಈ ವರದಿಯ ಪ್ರಕಾರ, ಕೆಳ-ಮಧ್ಯಮ ಆದಾಯದ ದೇಶಗಳ ಬಡತನ ರೇಖೆಗಿಂತ ಕೆಳಗೆ ವಾಸಿಸುವ ಭಾರತೀಯರ ಪ್ರಮಾಣವು 2011–12ರಲ್ಲಿ ಶೇ. 57.7 ರಷ್ಟಿತ್ತು, ಅದು 2023–24ರ ವೇಳೆಗೆ ಶೇ. 16.1ಕ್ಕೆ ಇಳಿದಿದೆ.
ಖರೀದಿ ಸಾಮರ್ಥ್ಯದ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಂಡು, ದಿನಕ್ಕೆ 4.20 ಡಾಲರ್ನಷ್ಟು ಆದಾಯದ ಮಿತಿಯನ್ನು ನಿಗದಿಪಡಿಸಿದರೆ, ಸುಮಾರು 49.6 ಕೋಟಿ ಜನರು ಈ ಮಿತಿಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜಿಸಿದೆ (ಏಜೆನ್ಸೀಸ್)