

ಮುಂಬೈ: ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕಾಗಿ ಬಿಜೆಪಿ ವಿರೋಧ ಪಕ್ಷಗಳ ಸಂಸದರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿದ್ದು, ಪ್ರತಿ ಸಂಸದರಿಗೆ 150 ಕೋಟಿ ರೂಪಾಯಿಗಳನ್ನು ನೀಡುವ ಆಮಿಷ ಒಡ್ಡುತ್ತಿದೆ ಎಂದು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಛತ್ರಪತಿ ಸಂಭಾಜಿನಗರದಲ್ಲಿ ಮಾತನಾಡಿರುವ ಅವರು, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸುವಂತೆ ಸಂಸದರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಹೀಗಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ವಿಳಂಬ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತಾವಿತ ಡಿಲಿಮಿಟೇಷನ್ ಮಸೂದೆ ಅಂಗೀಕರಿಸಲು ಸರ್ಕಾರದ ಬಳಿ ಸುಮಾರು 40 ರಿಂದ 45 ಸಂಸದರ ಸಂಖ್ಯೆ ಕಡಿಮೆಯಿದೆ. ಅದಕ್ಕಾಗಿ ಸಣ್ಣ ಪಕ್ಷಗಳ ಮೇಲೆ ಒತ್ತಡ ಹೇರುತ್ತಿದೆ. ಮತ್ತು ವೈಯಕ್ತಿಕವಾಗಿ ಸಂಸದರನ್ನು ಖರೀದಿಸಲು ನೋಡುತ್ತಿದೆ. ಸ್ವಲ್ಪ ದಿನಗಳ ಹಿಂದೆ 100 ಕೋಟಿ ರೂ. ಇದ್ದ ಸಂಸದರ ಬೆಲೆ ಈಗ 150 ಕೋಟಿ ರೂ.ಗಳಿಗೆ ಏರಿದೆ. ಈ ಜವಾಬ್ದಾರಿಯನ್ನು ರಾಜ್ಯದ ಪ್ರಮುಖ ನಾಯಕರಿಗೆ ವಹಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಮುಂಬೈಗೆ ಪದೇ ಪದೇ ಭೇಟಿ ನೀಡುವುದೇಕೆ? ಇಲ್ಲಿ ಯಾವ ರೀತಿಯ ವಹಿವಾಟುಗಳು ನಡೆಯುತ್ತವೆ? ಐದು ವರ್ಷಗಳ ಹಿಂದೆ ಒಬ್ಬ ಶಾಸಕನನ್ನು 50 ಕೋಟಿ ರೂ.ಗೆ ಮತ್ತು ಒಬ್ಬ ಸಂಸದನನ್ನು 75 ಕೋಟಿ ರೂ.ಗೆ ಖರೀದಿಸಲಾಗುತ್ತಿತ್ತು. ಈಗ ಅದು 150 ಕೋಟಿ ರೂ.ಗೆ ಹೆಚ್ಚಾಗಿದೆ. ಇದು ಒಳ್ಳೆಯ ಬೆಲೆ. ರಾಜಕೀಯವು ಈಗ ರಾಷ್ಟ್ರೀಯ ಷೇರು ಮಾರುಕಟ್ಟೆಯಂತಿದೆ ಎಂದು ಟೀಕಿಸಿದ್ದಾರೆ.
ಇನ್ನೂ ಡಿಲಿಮಿಟೇಷನ್ ಮಸೂದೆಯ ಸಾಂವಿಧಾನಿಕ ತಿದ್ದುಪಡಿಯು ಲೋಕಸಭೆಯ ಬಲವನ್ನು ಈಗಿರುವ 543 ರಿಂದ ಗರಿಷ್ಠ 850ಕ್ಕೆ ಹೆಚ್ಚಿಸಲು ಪ್ರಯತ್ನಿಸುತ್ತದೆ. ಮತ್ತು 2029ರ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ದಾರಿ ಮಾಡಿಕೊಡುತ್ತದೆ (ಏಜೆನ್ಸೀಸ್).