Operation Tiger | ಉದ್ಧವ್ ಬಣ ತೊರೆಯಲು 14 ಶಾಸಕರು ರೆಡಿ ಎಂದ ಶಿಂಧೆ ಕ್ಯಾಂಪ್  
ದೇಶ

ಆಪರೇಷನ್ ಟೈಗರ್ 2.0 ಲೋಡಿಂಗ್...? ಉದ್ಧವ್ ಬಣ ತೊರೆಯಲು 14 ಶಾಸಕರು ರೆಡಿ ಎಂದ ಶಿಂಧೆ ಕ್ಯಾಂಪ್ | Operation Tiger

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಪ್ರಮುಖ ರಾಜಕೀಯ ಧ್ರುವೀಕರಣದ ಮುನ್ಸೂಚನೆಗಳು ಲಭ್ಯವಾಗುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ (UBT) ಪ್ರಮುಖ ಶಾಸಕರು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಅಧಿಕೃತ ಶಿವಸೇನಾ ಬಣ ಸುದ್ದಿ ಹಬ್ಬಿಸಿದ್ದು, ಈ ಬೆಳವಣಿಗೆಯು ಸಂಚಲನ ಮೂಡಿಸಿದೆ.
ಇತ್ತೀಚೆಗಷ್ಟೇ ಉದ್ಧವ್ ಠಾಕ್ರೆ ಬಣದ ಆರು ಜನ ಸಂಸದರು ಬಂಡಾಯವೆದ್ದು ಶಿಂಧೆ ಪಾಳಯಕ್ಕೆ ಸೇರ್ಪಡೆಯಾಗಿದ್ದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಶಾಸಕರ ಪಕ್ಷಾಂತರದ ವದಂತಿಗಳು ದಟ್ಟವಾಗಿವೆ.

ರಾಜಕೀಯ ವಲಯದಲ್ಲಿ ತೀವ್ರಗೊಂಡ ವದಂತಿ

ರಾಜಕೀಯ ಮೂಲಗಳ ಪ್ರಕಾರ, ಉದ್ಧವ್ ಬಣದ 3 ರಿಂದ 4 ಶಾಸಕರು ಇತ್ತೀಚೆಗೆ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ತಮ್ಮ ಸಿದ್ಧಾಂತದ ಇನ್ನೂ 12 ಕ್ಕೂ ಹೆಚ್ಚು ಶಾಸಕರು ಶಿಂಧೆ ಬಣದೊಂದಿಗೆ ಕೈಜೋಡಿಸಲು ಆಸಕ್ತಿ ಹೊಂದಿದ್ದಾರೆ ಎಂಬ ಆಂತರಿಕ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ರಹಸ್ಯ ಸಭೆಯ ವಿವರಗಳನ್ನು ಉಭಯ ಪಕ್ಷಗಳೂ ಅಧಿಕೃತವಾಗಿ ದೃಢಪಡಿಸಿಲ್ಲ. ಇದೇ ವೇಳೆ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ ಕರೆದಿದ್ದ ಶಾಸಕರ ಮಹತ್ವದ ಸಭೆಗೆ ಒಟ್ಟು 60 ಶಾಸಕರಲ್ಲಿ ಕೇವಲ 37 ಮಂದಿ ಮಾತ್ರ ಹಾಜರಾಗಿದ್ದರು. ಗೈರುಹಾಜರಾದ ಶಾಸಕರು ವೈಯಕ್ತಿಕ ಕಾರಣಗಳನ್ನು ನೀಡಿದ್ದಾರಾದರೂ, ರಾಜಕೀಯ ವಿಶ್ಲೇಷಕರು ಮಾತ್ರ ಇದನ್ನು ಮುಂಬರುವ ದೊಡ್ಡ ಬದಲಾವಣೆಯ ಮುನ್ನುಡಿ ಎಂದೇ ವ್ಯಾಖ್ಯಾನಿಸುತ್ತಿದ್ದಾರೆ.

ನಾವು ನಿಜವಾಗಿಯೂ ಜೊತೆಯಾಗಿದ್ದೇವಾ..? ಉದ್ಧವ್ ಠಾಕ್ರೆ ಭಾವುಕ ಪ್ರಶ್ನೆ

ಕಳೆದ ವಾರವಷ್ಟೇ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಆರು ಜನ ಸಂಸದರು ಬಂಡಾಯವೆದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ಸೇರಿಕೊಂಡಿದ್ದರು. ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಉದ್ಧವ್ ಪಕ್ಷದಲ್ಲಿ ಈ ರೀತಿ ಬಿರುಕುಂಟಾಗಿರುವುದು ಮೈತ್ರಿಕೂಟದ ಭವಿಷ್ಯದ ಮೇಲೂ ಮಂಕು ಕವಿಯುವಂತೆ ಮಾಡಿದೆ. ಸಭೆಯಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಮಾಜಿ ಸಿಎಂ ಉದ್ಧವ್ ಠಾಕ್ರೆ, ನಾವು ಮೈತ್ರಿಕೂಟವಾಗಿ ದೊಡ್ಡ ಶಕ್ತಿಯಾಗಿದ್ದೇವೆ ನಿಜ. ಆದರೆ ನಾವು ನಿಜವಾಗಿಯೂ ಒಟ್ಟಾಗಿದ್ದೇವಾ? ಸದನದಲ್ಲಿ ಮಹಾ ವಿಕಾಸ್ ಅಘಾಡಿಯಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತುತ್ತಿದ್ದೇವಾ?" ಎಂದು ಮೈತ್ರಿ ನಾಯಕರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಹೋಗುವವರು ಹೋಗಲಿ, ಸದ್ಯ ನಮ್ಮೊಂದಿಗೆ ಯಾರಿದ್ದಾರೋ ಅವರ ಮೇಲೆ ಗಮನ ಹರಿಸೋಣ ಎಂದು ನಾಯಕರಲ್ಲಿ ಧೈರ್ಯ ತುಂಬಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಶಿಂಧೆ ಪಾಳಯದ ವಾದವೇನು..?

ಠಾಕ್ರೆ ಬಣದ 20 ಶಾಸಕರ ಪೈಕಿ ಬಹುಪಾಲು ನಾಯಕರು ತಮ್ಮ ಜೊತೆ ಬರಲು ಸಿದ್ಧರಿದ್ದಾರೆ ಎಂದು ಶಿಂಧೆ ಬಣ ಹೇಳಿಕೊಂಡಿದೆ. ನಾವು ಯಾರನ್ನೂ ಬಲವಂತವಾಗಿ ಕರೆಯುತ್ತಿಲ್ಲ, ಅವರೇ ಸ್ವಯಂಪ್ರೇರಿತರಾಗಿ ಆಡಳಿತ ಪಕ್ಷದ ಅಭಿವೃದ್ಧಿ ಕೆಲಸಗಳನ್ನು ನೋಡಿ ಬರುತ್ತಿದ್ದಾರೆ ಎಂದು ಶಿಂಧೆ ಆಪ್ತರು ತಿಳಿಸಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳನ್ನು ಕೇವಲ ವದಂತಿ ಎಂದು ತಳ್ಳಿಹಾಕಿರುವ ಉದ್ಧವ್ ಬಣದ ಹಿರಿಯ ನಾಯಕ ಸಂಜಯ್ ರಾವತ್, ನಮ್ಮ ಯಾವುದೇ ಶಾಸಕರು ಪಕ್ಷ ತೊರೆಯುತ್ತಿಲ್ಲ. ಸಭೆಗೆ ಬರದೇ ಇದ್ದವರು ಮುಂಚಿತವಾಗಿಯೇ ನಾಯಕತ್ವದ ಅನುಮತಿ ಪಡೆದಿದ್ದರು. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇವರು ನಾಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನೂ ನಮ್ಮ ಕಡೆ ಸೆಳೆಯುತ್ತೇವೆ ಎಂದು ಹೇಳಿದರೂ ಆಶ್ಚರ್ಯವಿಲ್ಲ. ಒಂದು ವೇಳೆ ನಿಜವಾಗಿಯೂ ಆಪರೇಷನ್ ಟೈಗರ್​ನಿಂದ ಯಾರಿಗಾದರೂ ಅಪಾಯವಿದ್ದರೆ ಅದು ಫಡ್ನವಿಸ್ ಅವರಿಗೆ ಮಾತ್ರ. ಹಾಗಾಗಿ ಅವರೇ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ರಾವತ್​ ಟಾಂಗ್ ನೀಡಿದ್ದಾರೆ(ಏಜೆನ್ಸೀಸ್​​).