ಸಾಂದರ್ಭಿಕ ಚಿತ್ರ 
ದೇಶ

ಆಪರೇಷನ್​ ಸಿಂಧೂರ್​ಗೆ ವರ್ಷದ ಸಂಭ್ರಮ; ಪಾಕ್​ ಭಯೋತ್ಪಾದನೆಯ ಮೂಲ ಮುರಿದ ಆರು ಪ್ರಮುಖ ಸ್ತಂಭಗಳ್ಯಾವವು? | Operation Sindoor

ನವದೆಹಲಿ: ಪೆಹಲ್ಗಾಮ್ ದಾಳಿಯ 26 ಅಮಾಯಕರ ಸಾವಿಗೆ ಪ್ರತೀಕಾರವಾಗಿ ಪಾಕ್​ನ ಭಯೋತ್ಪಾದನೆಯ ಮೂಲಗಳನ್ನು ಹೊಸ ಹಾಕಿದ ಆಪರೇಷನ್ ಸಿಂಧೂರ(Operation Sindoor) ಮಿಲಿಟರಿ ಕಾರ್ಯಾಚರಣೆಗೆ ವರ್ಷ ತುಂಬಿದ್ದು, ಅದರಲ್ಲಿ ಯಶಸ್ವಿಯಾದ ಪ್ರಮುಖ ಆರು ಸ್ತಂಭಗಳನ್ನು ಇಂದು(ಮೇ 07) ಭಾರತ ಸರ್ಕಾರ ಹಂಚಿಕೊಂಡಿದೆ.
2025 ಮೇ 07ರಂದು ಭಾರತೀಯ ಪ್ರಜೆಗಳ ಹತ್ಯೆಗೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ , ಸ್ಪಷ್ಟತೆ ಮತ್ತು ಸಂಕಲ್ಪದ ನಿರ್ಣಾಯಕ ಕ್ಷಣವಾಗಿತ್ತು. ರಾಷ್ಟ್ರವನ್ನು ಪರೀಕ್ಷಿಸಿದ ಸಮಯದಲ್ಲಿ ದೇಶವು ನಿಖರತೆ, ಉದ್ದೇಶ ಹಾಗೂ ಏಕತೆಯೊಂದಿಗೆ ಭಯೋತ್ಪಾದನೆ ವಿರುದ್ಧ ರಣಕಹಳೆ ಮೊಳಗಿಸಿತ್ತು.
ಪ್ರಮುಖ ಆರು ಸ್ತಂಭಗಳ ಆಧಾರದ ಮೇಲೆ ಆಪರೇಷನ್ ಸಿಂಧೂರವನ್ನು ನಮ್ಮ ಸೇನೆ ನಡೆಸಿತ್ತು. ನಿಯಂತ್ರಿತ ಯುದ್ಧ, ಉಗ್ರರ ಜಾಲದ ಮೇಲೆ ದಾಳಿ, ಕನಿಷ್ಠ ಹಾನಿಯೊಂದಿಗೆ ಗರಿಷ್ಠ ಪರಿಣಾಮ, ಸ್ವದೇಶಿ ಶಸ್ತಾಸ್ತ್ರಗಳ ಬಳಕೆ, ದೃಢವಾದ ರಾಜಕೀಯ ಇಚ್ಛಾಶಕ್ತಿ ಹಾಗೂ ಸಮಗ್ರ ರಾಜಕೀಯ ದೃಷ್ಠೀಕೋನವನ್ನು ಒಳಗೊಂಡಿದ್ದು, 88 ಗಂಟೆಗಳ ಕಾರ್ಯಾಚರಣೆಯು 100+ ಭಯೋತ್ಪಾದಕರನ್ನು ಹೊಸಕಿ ಹಾಕಿ, ಪಾಕ್​ನ ವಾಯುಪಡೆಯ 20% ಸ್ವತ್ತುಗಳನ್ನು ನಾಶಮಾಡಿತ್ತು.

ಕಾರ್ಯಾಚರಣೆಯ ಪ್ರಮುಖ ಆರು ಸ್ತಂಭಗಳು

ನಿಯಂತ್ರಿತ ಯುದ್ಧ: ಈ ಕಾರ್ಯಾಚರಣೆಯಲ್ಲಿ ಭಾರತವು ತನ್ನ ಅತ್ಯುತ್ತಮ ನಿಯಂತ್ರಿತ ಯುದ್ಧತಂತ್ರವನ್ನು ಪ್ರದರ್ಶಿಸಿತು. ಕೇವಲ 88 ಗಂಟೆಗಳಲ್ಲಿ ಯಾವುದೇ ನಾಗರಿಕ ಸಾವುನೋವುಗಳಿಲ್ಲದೇ ಗರಿಷ್ಠ ಪರಿಣಾಮವನ್ನು ಬೀರಿತು. ಸ್ಪಷ್ಟ ಉದ್ದೇಶಗಳು ಮತ್ತು ಶಿಸ್ತುಬದ್ಧ ದಾಳಿಯ ಯಶಸ್ಸನ್ನು ಖಚಿತಪಡಿಸಿತು.
ಉಗ್ರರ ಜಾಲದ ಮೇಲೆ ದಾಳಿ: ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳ ಹೃದಯಭಾಗವನ್ನು ಆಪರೇಷನ್ ಸಿಂದೂರ್ ಹೊಡೆದುರುಳಿಸಿತು. ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಪ್ರಮುಖ ಕೇಂದ್ರಗಳನ್ನು ನಾಶಪಡಿಸಲಾಯಿತು. ಐಸಿ-814 ಅಪಹರಣ ಮತ್ತು ಪುಲ್ವಾಮಾ ದಾಳಿಗೆ ಸಂಬಂಧಿಸಿದವರು ಸೇರಿದಂತೆ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಯಿತು.
ಕನಿಷ್ಠ ಹಾನಿಯೊಂದಿಗೆ ಗರಿಷ್ಠ ಪರಿಣಾಮ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯೂ ಶತ್ರು ಆಸ್ತಿಗಳಿಗೆ ಗರಿಷ್ಠ ಹಾನಿ ಮತ್ತು ಸ್ವದೇಶದಲ್ಲಿ ಕನಿಷ್ಠ ಪರಿಣಾಮದ ವಿಧಾನವನ್ನು ಪ್ರದರ್ಶಿಸಿತು. ಪರಮಾಣು-ಸಶಸ್ತ್ರ ರಾಷ್ಟ್ರದ ಹನ್ನೊಂದು ವಾಯುನೆಲೆಗಳನ್ನು ಒಂದೇ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿತು. ನಮ್ಮ ದೇಶದಲ್ಲಿ ಯಾವುದೇ ದಾಳಿಯಾಗದಂತೆ ನೋಡಿಕೊಳ್ಳಲಾಯಿತು.
ಸ್ವದೇಶಿ ಶಸ್ತಾಸ್ತ್ರಗಳ ಬಳಕೆ: ಕಾರ್ಯಾಚರಣೆಯಲ್ಲಿ ವಿನ್ಯಾಸದಿಂದ ನಿಯೋಜನೆಯವರೆಗೆ ಭಾರತವು ತನ್ನದೇ ಆದ ಬಲವನ್ನು ತೋರಿಸಿತು. ಸ್ಥಳೀಯ ರಕ್ಷಣಾ ವ್ಯವಸ್ಥೆಗಳ ಶಕ್ತಿ ಮತ್ತು ಸೇನೆಯ ಶೌರ್ಯವನ್ನು ಈ ಕಾರ್ಯಾಚರಣೆ ಎತ್ತಿ ತೋರಿಸಿ, ಆತ್ಮನಿರ್ಭರ ಭಾರತ್ ಕಾರ್ಯರೂಪದಲ್ಲಿದೆ ಎಂಬುದನ್ನು ತೋರಿಸಿತು.
ದೃಢವಾದ ರಾಜಕೀಯ ಇಚ್ಛಾಶಕ್ತಿ: ನಿರ್ಣಾಯಕ ರಾಜಕೀಯ ಇಚ್ಛಾಶಕ್ತಿಯು ಆಪರೇಷನ್ ಸಿಂಧೂರ್‌ನ ಪ್ರತಿಯೊಂದು ಹೆಜ್ಜೆಯನ್ನು ರೂಪಿಸಿತು. ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರ ನಿರ್ಣಾಯಕ ದಾಳಿಗಳನ್ನು ನಡೆಸಿತು. ಸೇನೆಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ನೀಡಲಾಯಿತು. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ, ಭಯೋತ್ಪಾದನೆಯ ವಿರುದ್ಧ ಸ್ಪಷ್ಟವಾದ ಕೆಂಪು ರೇಖೆಯನ್ನು ಎಳೆಯಿತು ಎನ್ನಬಹುದು.
ಸಮಗ್ರ ರಾಜಕೀಯ ದೃಷ್ಠೀಕೋನ: ನವ ಭಾರತವು ಹೀಗೆ ಪ್ರತಿಕ್ರಿಯಿಸುತ್ತದೆ, ನಿಖರ, ನಿರ್ಭೀತ, ಸ್ಥಳೀಯ ಮತ್ತು ಒಗ್ಗಟ್ಟಿನಿಂದ ಎಂಬುದನ್ನು ಜಗತ್ತು ವೀಕ್ಷಿಸಿತು. ಆತ್ಮವಿಶ್ವಾಸ, ಸಾಮರ್ಥ್ಯ ಮತ್ತು ಸಾಮೂಹಿಕ ಸಂಕಲ್ಪದೊಂದಿಗೆ ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಭಾರತದ ಸಿದ್ದವಿದೆ ಎಂಬುದನ್ನು ವಿಶ್ವಕ್ಕೆ ತೋರಿಸಿತು. (ಏಜೆನ್ಸೀಸ್).