Amit Shah | ಗೃಹ ಸಚಿವ ಅಮಿತ್ ಷಾ
ಮುಂಬೈ: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಪಕ್ಷದಲ್ಲಿ ಮತ್ತೊಮ್ಮೆ ಬಿರುಕು ಮೂಡಿರುವ ವದಂತಿಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅವರು ಶನಿವಾರ ನೀಡಿರುವ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಕೊಲ್ಹಾಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಷಾ, ಹಿಂದೆಲ್ಲಾ ಜನರು ಏಕನಾಥ್ ಶಿಂಧೆ ಅವರ ಹೆಸರಿನ ಮುಂದೆ ಶಿವಸೇನೆ-ಶಿಂಧೆ ಬಣ ಎಂದು ಹೇಳಬೇಕಾಗುತ್ತಿತ್ತು. ಆದರೆ ಈಗ ಯಾವುದೇ ಬಣಗಳು ಉಳಿದಿಲ್ಲ, ಮಹಾರಾಷ್ಟ್ರದಲ್ಲಿ ಇರುವುದು ಒಂದೇ ಒಂದು ನಿಜವಾದ ಶಿವಸೇನೆ ಮತ್ತು ಅದನ್ನು ಡಿಸಿಎಂ ಏಕನಾಥ್ ಶಿಂಧೆ ಮುನ್ನಡೆಸುತ್ತಿದ್ದಾರೆ ಎಂದು ಘೋಷಿಸಿದ್ದಾರೆ.
ಉದ್ಧವ್ ಠಾಕ್ರೆ ಅವರ ಶಿವಸೇನಾ (UBT) ಬಣದ ಹಲವು ಸಂಸದರು ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಅಧಿಕೃತ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾದ ತೆರೆಮರೆಯ ರಾಜಕೀಯ ತಂತ್ರಗಾರಿಕೆಗೆ ಆಪರೇಷನ್ ಟೈಗರ್ ಎಂದು ಕರೆಯಲಾಗುತ್ತಿದ್ದು, ಇದು ಉದ್ಧವ್ ಕ್ಯಾಂಪ್‌ನಲ್ಲಿ ಮತ್ತೊಂದು ದೊಡ್ಡ ಬಿಕ್ಕಟ್ಟು ಸೃಷ್ಟಿಸಿದೆ.
ಉದ್ಧವ್ ಬಣದ ರೆಬೆಲ್ ಸಂಸದರ ಫೋಟೋ ಲೀಕ್!...
ಉದ್ಧವ್ ಠಾಕ್ರೆ ಬಣದ ಬಂಡಾಯ ಸಂಸದರು ಪಂಚತಾರಾ ಹೋಟೆಲ್‌ನಲ್ಲಿ ರಹಸ್ಯವಾಗಿ ಸಭೆ ನಡೆಸುತ್ತಿರುವ ಫೋಟೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡಿದ ಬೆನ್ನಲ್ಲೇ ಅಮಿತ್ ಷಾ ಅವರ ಈ ಹೇಳಿಕೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ಈ ಫೋಟೋ, ಬಂಡಾಯ ಸಂಸದರು ಪಕ್ಷ ಬದಲಾಯಿಸುವುದು ಬಹುತೇಕ ಖಚಿತ ಎಂಬ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ. ಇತ್ತ ಬಂಡಾಯದ ತೀವ್ರತೆ ಹೆಚ್ಚಾಗುತ್ತಿದ್ದಂತೆ, ಉದ್ಧವ್ ಬಣ ತನ್ನ ಕಟ್ಟುನಿಟ್ಟಿನ ಆಜ್ಞೆಯನ್ನು ಮೀರಿ ಪ್ರಮುಖ ಸಂಸದೀಯ ಸಭೆಗೆ ಗೈರಾಗಿದ್ದ ಲೋಕಸಭಾ ಸಂಸದರಿಗೆ ಕಾರಣ ಕೇಳಿ ಹೊಸದಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪಕ್ಷದ ಮುಖ್ಯ ಸಚೇತಕ ಮತ್ತು ರಾಜ್ಯಸಭಾ ಸಂಸದ ಅನಿಲ್ ದೇಸಾಯಿ ಅವರು ಗೈರಾದ ಸಂಸದರಿಗೆ 24 ಗಂಟೆಗಳ ಒಳಗಾಗಿ ಲಿಖಿತ ವಿವರಣೆ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಒಂದು ವೇಳೆ ನಿಗದಿತ ಅವಧಿಯಲ್ಲಿ ಸಂಸದರು ಪ್ರತಿಕ್ರಿಯೆ ನೀಡಲು ವಿಫಲರಾದರೆ, ಅವರು ಸ್ವಯಂಪ್ರೇರಿತರಾಗಿ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದ್ದಾರೆ ಎಂದು ಪರಿಗಣಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ. ಇದು ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಬರುವ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಅವರ ವಿರುದ್ಧ ಅನರ್ಹತೆಯ ಕ್ರಮ ಕೈಗೊಳ್ಳಲು ದಾರಿ ಮಾಡಿಕೊಡಲಿದೆ. ಲೋಕಸಭೆಯಲ್ಲಿ ಶಿವಸೇನಾ (UBT) ಹೊಂದಿರುವ ಒಟ್ಟು ಒಂಬತ್ತು ಸಂಸದರ ಪೈಕಿ ಆರು ಸಂಸದರು ನವದೆಹಲಿಯಲ್ಲಿ ನಾಯಕತ್ವ ಕರೆದಿದ್ದ ಪ್ರಮುಖ ಸಭೆಗೆ ಗೈರಾಗುವುದರೊಂದಿಗೆ ಈ ಬಿಕ್ಕಟ್ಟು ಬಹಿರಂಗಗೊಂಡಿದೆ.
ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಾಭಾವು ವಾಜೆ ಅವರು ಸಭೆಗೆ ಹಾಜರಾಗಿದ್ದರೆ, ನಾಗೇಶ್ ಅಷ್ಟೀಕರ್, ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ಸಂಜಯ್ ದಿನಾ ಪಾಟೀಲ್, ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಭೌಸಾಹೇಬ್ ವಾಕಚೌರೆ ಸಭೆಯಿಂದ ದೂರ ಉಳಿದಿದ್ದರು. ಈ ಆರು ಸಂಸದರ ಒಟ್ಟಾರೆ ಗೈರುಹಾಜರಿಯು, ಪಕ್ಷದ ಸಂಸದೀಯ ವಿಭಾಗದ ದೊಡ್ಡದೊಂದು ಗುಂಪು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಕೈಜೋಡಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ ಎಂಬ ಅನುಮಾನಗಳನ್ನು ಬಲಪಡಿಸಿದೆ.
ರಾವತ್ ಶಾಕಿಂಗ್ ಸ್ಟೇಟ್ಮೆಂಟ್
ಇದಕ್ಕೂ ಮುನ್ನ ಮಾತನಾಡಿದ್ದ ಶಿವಸೇನಾ (UBT) ಹಿರಿಯ ನಾಯಕ ಸಂಜಯ್ ರಾವುತ್, ಸಭೆಗೆ ಗೈರಾದ ಸಂಸದರ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಜರುಗಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಪಕ್ಷದ ಆಜ್ಞೆಯನ್ನು ಧಿಕ್ಕರಿಸುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಸಂಸದರು ತಮ್ಮ ನಡೆಗೆ ಸೂಕ್ತ ಕಾರಣ ನೀಡದಿದ್ದರೆ ಅವರ ವಿರುದ್ಧ ಅನರ್ಹತೆ ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ(ಏಜೆನ್ಸೀಸ್).