ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಪ್ರತಿಭಟನೆ 
ದೇಶ

ಇಂಡಿಯಾ ಮೈತ್ರಿಕೂಟದ ಒಗ್ಗಟ್ಟು ತಾತ್ಕಾಲಿಕ ತಂತ್ರವಷ್ಟೆನಾ...? ಬೃಹತ್​ ಪ್ರತಿಭಟನೆಯ ಹಿಂದೆ ಮರೆಮಾಚಿದ ಸತ್ಯಗಳೇನು...? | INDIA Alliance

INDIA Alliance: ವಿರೋಧ ಪಕ್ಷಗಳ ಪ್ರತಿಭಟನೆಯ ದೃಶ್ಯಗಳು ರಾಷ್ಟ್ರ ರಾಜಕಾರಣದಲ್ಲಿ ಸತತ ಎರಡು ದಿನಗಳಿಂದ ಮುಂಚೂಣಿಯಲ್ಲಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿ ಪೊಲೀಸರ ವಶದಲ್ಲಿರುವ ದೃಶ್ಯಗಳು, ಪ್ರತಿಭಟನಾಕಾರರ ಧಿಕ್ಕಾರ, ಧರಣಿ ಮತ್ತು ಪೊಲೀಸರ ನಿರ್ಬಂಧದ ನಡುವೆಯೂ ಬಗ್ಗದ ಆಕ್ರೋಶದ ದೃಶ್ಯಗಳು ಸಾಮಾಜಿಕ ಜಾಲತಾಣಗಳು ಹಾಗೂ ಎಲ್ಲಾ ಮಾಧ್ಯಮಗಳಲ್ಲಿ ಎಲ್ಲೆಡೆ ಕಾಣಸಿಗುತ್ತಿವೆ.

INDIA Alliance: ವಿರೋಧ ಪಕ್ಷಗಳ ಪ್ರತಿಭಟನೆಯ ದೃಶ್ಯಗಳು ರಾಷ್ಟ್ರ ರಾಜಕಾರಣದಲ್ಲಿ ಸತತ ಎರಡು ದಿನಗಳಿಂದ ಮುಂಚೂಣಿಯಲ್ಲಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿ ಪೊಲೀಸರ ವಶದಲ್ಲಿರುವ ದೃಶ್ಯಗಳು, ಪ್ರತಿಭಟನಾಕಾರರ ಧಿಕ್ಕಾರ, ಧರಣಿ ಮತ್ತು ಪೊಲೀಸರ ನಿರ್ಬಂಧದ ನಡುವೆಯೂ ಬಗ್ಗದ ಆಕ್ರೋಶದ ದೃಶ್ಯಗಳು ಸಾಮಾಜಿಕ ಜಾಲತಾಣಗಳು ಹಾಗೂ ಎಲ್ಲಾ ಮಾಧ್ಯಮಗಳಲ್ಲಿ ಎಲ್ಲೆಡೆ ಕಾಣಸಿಗುತ್ತಿವೆ.

ಈ ಮುಂಚೂಣಿ ನಾಯಕರ ಹಿಂದೆ ದೊಡ್ಡ ಮಟ್ಟದ ವಿರೋಧ ಪಕ್ಷಗಳ ದಂಡೇ ಕೂಡಿತ್ತು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು, ಎನ್‌ಸಿಪಿ (ಶರದ್ ಬಣ), ಶಿವಸೇನಾ (ಉದ್ಧವ್ ಠಾಕ್ರೆ ಬಣ), ಸಮಾಜವಾದಿ ಪಕ್ಷ, ಬಿಜು ಜನತಾ ದಳ ಮತ್ತು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಗಳು ಒಂದೇ ವೇದಿಕೆಯಲ್ಲಿ ಕೈಜೋಡಿಸಿವೆ. ಜ್ಞಾನೇಶ್ ಕುಮಾರ್ ಅವರು ಹುದ್ದೆಯಿಂದ ಕೆಳಗಿಳಿಯಬೇಕು ಎನ್ನುವುದೇ ಈ ಎಲ್ಲಾ ಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ.

ಮಂಗಳವಾರ ಸುಮಾರು ನೂರಾರು ವಿಪಕ್ಷ ಸದಸ್ಯರು ಸಂಸತ್ತಿನಿಂದ ಚುನಾವಣಾ ಆಯೋಗದವರೆಗೆ ಬೃಹತ್ ಜಾಥಾ ನಡೆಸಲು ಮುಂದಾದಾಗ ಪೊಲೀಸರು ತಡೆದರು. ಬುಧವಾರ ಜಂತರ್‌ಮಂತರ್‌ ಕಡೆಗೆ ತೆರಳಲು ನಡೆಸಿದ ಮತ್ತೊಂದು ಪ್ರಯತ್ನವೂ ಹೆಚ್ಚಿನ ಬಂಧನಗಳಲ್ಲಿ ಅಂತ್ಯಗೊಂಡಿತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಒಗ್ಗಟ್ಟಿಗೆ ಕರೆ ನೀಡಿದ್ದರು. ಸೆಪ್ಟೆಂಬರ್ 30 ರಂದೇ ಮಮತಾ ಬ್ಯಾನರ್ಜಿ ಅವರು ಜ್ಞಾನೇಶ್ ಕುಮಾರ್ ಅವರನ್ನು ಟೀಕಿಸುವ ಮೂಲಕ ಧ್ವನಿ ಎತ್ತಿದ್ದರು.

ಇದನ್ನೂ ಓದಿ:ಅಣ್ಣ-ತಂಗಿಯರ 'ಸರ್ಪ್ರೈಸ್' ಶೋಗೆ ಗರಂ ಆದ ಮಿತ್ರಪಕ್ಷಗಳು: ಆಕ್ರೋಶ ತಣಿಸಲು ಕಾಂಗ್ರೆಸ್ ಹರಸಾಹಸ! | India Alliance

ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮ್ಮ ಗಮನಕ್ಕೆ ತರದೆ ತೆಗೆದುಕೊಂಡ ನಿರ್ಧಾರಗಳ ವಿರುದ್ಧ, ವಿಶೇಷವಾಗಿ ಎಸ್​​ಐಆರ್​ಗೆ ಸಂಬಂಧಿಸಿದ ಬದಲಾವಣೆಗಳ ವಿರುದ್ಧ ಹತ್ತು ತಿಂಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಬಹಿರಂಗಗೊಂಡಿದ್ದೇ ಈ ಎಲ್ಲ ಪ್ರತಿಭಟನೆಗಳಿಗೆ ಕಾರಣವಾಯಿತು. ವಿರೋಧ ಪಕ್ಷಗಳು ಈ ಬೆಳವಣಿಗೆಯನ್ನು ವೋಟ್ ಚೋರಿ (ಮತ ಕಳ್ಳತನ) ಆರೋಪದೊಂದಿಗೆ ಜೋಡಿಸಿವೆ. ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ, ಪರಿಷ್ಕರಣಾ ಪ್ರಕ್ರಿಯೆ ಸ್ಥಗಿತ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದು ವಿರೋಧ ಪಕ್ಷಗಳ ಪ್ರಮುಖ ಆಗ್ರಹವಾಗಿದೆ.

ಈ ಮಟ್ಟದ ಒಗ್ಗಟ್ಟು ವಿಪಕ್ಷಗಳ ಪಾಳಯಕ್ಕೆ ಒಳ್ಳೆಯ ಸುದ್ದಿಯಾದರು. ಇದು ಮುಂದೊಂದು ದಿನ ಕೇರಳದ ಯಾವುದು ಕ್ಷೇತ್ರದ ಟಿಕೆಟ್​ ಯಾರಿಗೆ ಬಿಟ್ಟುಕೊಡಬೇಕು, ಬಂಗಾಳದಲ್ಲಿ ಯಾರಿಗೆ ಜೂನಿಯರ್ ಪಾತ್ರ ಸಿಗಬೇಕು ಅಥವಾ 2029ರ ಲೋಕಸಭಾ ಚುನಾವಣೆಗೆ ಯಾರ ನೇತೃತ್ವದಲ್ಲಿ ಹೊಗಬೇಕು ಎಂಬುದನ್ನು ಅದು ತೀರ್ಮಾನಿಸಲು ಸಾಧ್ಯವಿಲ್ಲ.

ಈ ಪ್ರತಿಭಟನೆಯು ಇದರ ಸಂಘಟಕರು ಬಿಂಬಿಸುತ್ತಿರುವಷ್ಟು ದೊಡ್ಡ ರಾಜಕೀಯ ಬದಲಾವಣೆಯನ್ನಾಗಲಿ ಅಥವಾ ಮೈತ್ರಿಯ ಗಟ್ಟಿತನವನ್ನಾಗಲಿ ಸಂಪೂರ್ಣವಾಗಿ ಸಾಬೀತುಪಡಿಸುವುದಿಲ್ಲ. ವಿಭಿನ್ನ ದಾರಿಗೆ ಸರಿದಿದ್ದ ಅಥವಾ ಮುನಿಸಿಕೊಂಡು ದೂರ ಉಳಿದಿದ್ದ ವಿಪಕ್ಷಗಳೆಲ್ಲವೂ ಇಂದು ಒಂದೇ ವೇದಿಕೆಗೆ ಬರಲು ಕಾರಣ, ಅವರ ನಡುವಿನ ಸಾಮಾನ್ಯ ಗುರಿಯೇ ಹೊರತು ಬೇರೆ ಚುನಾವಣಾ ಲೆಕ್ಕಾಚಾರಗಳಲ್ಲ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇರಳ ಅಥವಾ ಪಂಜಾಬ್‌ನ ವಿಧಾನಸಭೆಯ ಚುನಾವಣಾ ಅಭ್ಯರ್ಥಿಯಲ್ಲ. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸುವುದರಿಂದ ಯಾವುದೇ ಪ್ರಾದೇಶಿಕ ಪಕ್ಷದ ಸೀಟ್​​ಗೆ ನೇರವಾಗಿ ಯಾವುದೇ ತೊಂದರೆ ಅಥವಾ ನಷ್ಟ ಉಂಟಾಗುವುದಿಲ್ಲ.

ಈ ಕಾರಣದಿಂದಲೇ ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒ ಬ್ರೇನ್, ಅಖಿಲೇಶ್ ಯಾದವ್, ಸುಪ್ರಿಯಾ ಸುಳೆ, ಶಿವಸೇನಾ (ಯುಬಿಟಿ), ಎಡಪಕ್ಷಗಳ ಜಾನ್ ಬ್ರಿಟ್ಟಾಸ್, ಮೈತ್ರಿಕೂಟದ ಸಾಂಪ್ರದಾಯಿಕ ಗಡಿಯ ಹೊರಗಿರುವ ಬಿಜು ಜನತಾ ದಳದ ಸಂಸದರು ಹಾಗೂ ತಮಿಳುನಾಡಿನ ಹೊಸ ರಾಜಕೀಯ ಶಕ್ತಿಯಾಗಿ ಮೂಡಿಬಂದಿರುವ ವಿಜಯ್ ಅವರ ಟಿವಿಕೆ ಪಕ್ಷದವರೆಲ್ಲರೂ ಯಾವುದೇ ಹಿಂಜರಿಕೆಯಿಲ್ಲದೆ ಈ ಪ್ರತಿಭಟನಾ ವೇದಿಕೆಯಲ್ಲಿ ಬಂದು ಕೈಜೋಡಿಸಲು ಸಾಧ್ಯವಾಯಿತು.

ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಮುಂತಾದ ನಾಯಕರು ಸಭೆ ನಡೆಸಿ ಅಕ್ಟೋಬರ್ 2ರಿಂದ ಪ್ರತಿಭಟನೆಗೆ ರೂಪುರೇಷೆ ಸಿದ್ಧಪಡಿಸಿದ್ದರು. ಆದರೆ ಪ್ರತಿಭಟನೆಯು ರಾಹುಲ್ ಗಾಂಧಿ ಕೇಂದ್ರಿತವಾಯಿತು ಎಂಬ ಬೇಸರದಿಂದ ಸಮಾಜವಾದಿ ಪಕ್ಷವು ಔತಣಕೂಟದಿಂದ ದೂರ ಉಳಿಯಿತು.

ಕಾಂಗ್ರೆಸ್ ಮುಂದೆ, ಮಿತ್ರಪಕ್ಷಗಳು ಹಿಂದೆ!

2024ರ ಲೋಕಸಭೆ ಚುನಾವಣೆಯಲ್ಲಿ 99 ಸ್ಥಾನ ಗೆದ್ದ ಕಾಂಗ್ರೆಸ್ ಬಲವೃದ್ಧಿಸಿಕೊಂಡರೆ, ಮಿತ್ರಪಕ್ಷಗಳು ಕುಸಿತ ಕಂಡಿವೆ. ಬಂಗಾಳದಲ್ಲಿ ಟಿಎಂಸಿ ಸೋತು ಮಮತಾ ಹಿನ್ನಡೆ ಅನುಭವಿಸಿದ್ದಾರೆ. ತಮಿಳುನಾಡಿನಲ್ಲಿ ಟಿವಿಕೆ ಎಂಟ್ರಿಯಿಂದ ಸಮತೋಲನ ಬದಲಾಗಿದ್ದು, ಕಾಂಗ್ರೆಸ್ ತಮ್ಮನ್ನು ಕಡೆಗಣಿಸಿ ಟಿವಿಕೆ ಜತೆ ವಾಲಿದೆ ಎಂದು ಡಿಎಂಕೆ ಆರೋಪಿಸಿದೆ. ಪ್ರಾದೇಶಿಕ ಪಕ್ಷಗಳ ಈ ಹಿನ್ನಡೆಯು ರಾಜಕೀಯವಾಗಿ ಕಾಂಗ್ರೆಸ್‌ಗೆ ಪ್ಲಸ್ ಆಗುತ್ತಿದೆ. ಹಿಂದೆ ಕಾಂಗ್ರೆಸ್ ಧೋರಣೆಯನ್ನು ವಿರೋಧಿಸಿದ್ದ ಮಮತಾ ಈಗ ಸೋನಿಯಾ ಗಾಂಧಿ ಜತೆ ಕೈಜೋಡಿಸುತ್ತಿರುವುದು, ರಾಜಕೀಯ ಸಮೀಕರಣಗಳು ಎಷ್ಟು ವೇಗವಾಗಿ ಬದಲಾಗುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ.ಎಂಬುದನ್ನು ತೋರಿಸುತ್ತದೆ.

ಎಎಪಿ (ಆಮ್ ಆದ್ಮಿ ಪಕ್ಷ) ಕಳೆದ ವರ್ಷ ಜುಲೈನಲ್ಲೇ ಮೈತ್ರಿಕೂಟದಿಂದ ಹೊರನಡೆದಿದ್ದು, ಪಂಜಾಬ್‌ನಲ್ಲಿ ಕಾಂಗ್ರೆಸ್ ನೇರ ಎದುರಾಳಿಯಾಗಿರುವುದರಿಂದ ದೆಹಲಿ ಪ್ರತಿಭಟನೆಯಿಂದಲೂ ದೂರ ಉಳಿಯಿತು. ಇಂದು ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಬಲಗೊಳ್ಳುತ್ತಿದ್ದರೂ, ಇದು ತಮಿಳುನಾಡು ಮತ್ತು ಪಂಜಾಬ್‌ನಲ್ಲಿ ಮಿತ್ರಪಕ್ಷಗಳ ಜೊತೆಗಿನ ಅಂತರವನ್ನು ಹೆಚ್ಚಿಸಿದೆ. ಡಿಎಂಕೆ ಮತ್ತು ಎಎಪಿ ಇಲ್ಲದ ಈ ಒಕ್ಕೂಟವು ಈಗ ದೊಡ್ಡ ಧ್ವನಿಯುಳ್ಳ ಆದರೆ ಕಡಿಮೆ ಸದಸ್ಯರಿರುವ ಸಣ್ಣ ಕೋಣೆಯಂತೆ ಮಾರ್ಪಟ್ಟಿದೆ.

ರಾಜ್ಯ ರಾಜಕಾರಣದ ಜಂಜಾಟಗಳು ಮತ್ತು ಮೈತ್ರಿಯ ಅಡೆತಡೆಗಳು

ದೆಹಲಿಯಲ್ಲಿ ಒಟ್ಟಾಗಿ ಧರಣಿ ನಡೆಸಿದ ಮಾತ್ರಕ್ಕೆ ರಾಜ್ಯ ರಾಜಕಾರಣದ ವಾಸ್ತವಗಳು ಬದಲಾಗುವುದಿಲ್ಲ. ಉದಾಹರಣೆಗೆ, ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ದಶಕಗಳಿಂದ ನೇರ ಎದುರಾಳಿಗಳು. ಸಂಸತ್ ರಸ್ತೆಯಲ್ಲಿ ಎಡಪಕ್ಷಗಳ ಸಂಸದರು ಕಾಂಗ್ರೆಸ್ ನಾಯಕರ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತರು ಮಾತ್ರಕ್ಕೆ, ಕೇರಳದಲ್ಲಿ ಸಿಪಿಎಂ ಸರ್ಕಾರ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿ ನಿಲ್ಲುವುದಿಲ್ಲ. ಅಲ್ಲದೆ, ಸ್ಥಳೀಯ ರಾಜಕಾರಣದಲ್ಲಿ ಅಥವಾ ಚುನಾವಣೆಯಲ್ಲಿ ಒಟ್ಟಾಗಿ ಜಂಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈ ರಾಷ್ಟ್ರಮಟ್ಟದ ಒಗ್ಗಟ್ಟು ಯಾವುದೇ ರೀತಿಯಲ್ಲಿ ಸಹಾಯಕ್ಕೆ ಬರುವುದಿಲ್ಲ.

ಬಂಗಾಳದಲ್ಲೂ ಹೊಸ ರಾಜಕೀಯ ಸವಾಲುಗಳು ಎದುರಾಗಿವೆ. ಹಿಂದೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅನ್ನು ದುರ್ಬಲ ಎದುರಾಳಿ ಎಂದೂ, ರಾಹುಲ್ ಗಾಂಧಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಅಸಮರ್ಥರೆಂದೂ ಬಿಂಬಿಸುತ್ತಿದ್ದರು. ಚುನಾವಣಾ ಸೋಲು ಅವರ ಮಾತಿನ ಶೈಲಿಯನ್ನು ಬದಲಿಸಿದ್ದರೂ, ಕೇವಲ ಮೃದು ಧೋರಣೆಯಿಂದ ಸೀಟು ಹಂಚಿಕೆ ಸುಲಭವಾಗುವುದಿಲ್ಲ. ಬಂಗಾಳ ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಮಮತಾ ಅವರ ರಾಜಕೀಯ ಅಡಿಪಾಯವೇ ಅಲುಗಾಡಿದೆ. ಟಿಎಂಸಿಯ ಬಹುತೇಕ ಶಾಸಕರು ರಿತಬ್ರತ ಬ್ಯಾನರ್ಜಿ ಬಣಕ್ಕೆ ಬೆಂಬಲ ನೀಡಿದ್ದರೆ, ಹಲವು ಸಂಸದರು ಎನ್‌ಸಿಪಿಗೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಹಳೆಯ ಹೆಸರು ಹಾಗೂ ಚಿಹ್ನೆಯ ಮೇಲಿನ ನಿಯಂತ್ರಣವೂ ಮಮತಾ ಅವರ ಕೈತಪ್ಪಿ ಹೋಗಿದ್ದು, ಬಂಗಾಳವನ್ನು 15 ವರ್ಷಗಳ ಕಾಲ ಆಳಿದ್ದ ಅವರ ಪಕ್ಷವು ಈಗ ಪೂರ್ಣವಾಗಿ ಕುಸಿದಿದೆ.

ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಇದೇ ರೀತಿಯ ಸವಾಲುಗಳಿವೆ. ವಿರೋಧ ಪಕ್ಷಗಳು ದೆಹಲಿಯಲ್ಲಿ ಒಟ್ಟಾಗಿ ಪ್ರತಿಭಟಿಸಬಹುದು, ಆದರೆ ಚುನಾವಣೆಗಳು ಬೂತ್ ಮಟ್ಟದಲ್ಲಿ, ಪ್ರತಿ ಕ್ಷೇತ್ರವಾರು ಚರ್ಚೆಯ ಮೂಲಕವೇ ನಿರ್ಧಾರವಾಗುತ್ತವೆ. ದೆಹಲಿ ನಮಗೆ ಒಗ್ಗಟ್ಟಿನ ಫೋಟೋ ನೀಡಬಹುದು, ಆದರೆ ಸೀಟು ಹಂಚಿಕೆಯ ಮೇಲಿನ ಜಗಳದಲ್ಲಿ ಆ ಫೋಟೋ ಉಳಿಯುತ್ತದೆಯೇ ಎಂಬುದು ರಾಜ್ಯ ರಾಜಕಾರಣದ ನಿಲುವುಗಳ ಮೇಲೆ ನಿಂತಿದೆ.

ಮುಂದಿನ ಸವಾಲುಗಳು ಮತ್ತು ನಾಯಕತ್ವದ ಪ್ರಶ್ನೆ

ಇಷ್ಟೆಲ್ಲಾ ಒಗ್ಗಟ್ಟಿನ ಬಳಿಕ ವಿರೋಧ ಪಕ್ಷಗಳ ಒಕ್ಕೂಟವು ಅಂತಿಮವಾಗಿ ಮುಂದಿನ ನಾಯಕ ಯಾರು? ಎಂಬ ಪ್ರಮುಖ ಪ್ರಶ್ನೆಗೆ ಬಂದು ನಿಲ್ಲುತ್ತದೆ. ಕಾಂಗ್ರೆಸ್ ಒಳಗೆ ರಾಹುಲ್ ಗಾಂಧಿ ಸ್ಪಷ್ಟ ಉತ್ತರವಾಗಿದ್ದರೂ, ಹೊರಗಿನವರಿಗೆ ಇದು ಗೊಂದಲದ ವಿಷಯವಾಗಿದೆ. 2029ರ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಿದಾಗ ಮಮತಾ ಬ್ಯಾನರ್ಜಿ ಮೌನ ವಹಿಸಿದ್ದು ಮೈತ್ರಿಕೂಟದ ನೈಜ ಸ್ಥಿತಿಯನ್ನು ತೋರಿಸುತ್ತದೆ. ಅಖಿಲೇಶ್ ಯಾದವ್ ತಮ್ಮ ರಾಜ್ಯದ ಗೆಲುವಿನ ಪ್ರಯತ್ನದಲ್ಲಿದ್ದಾರೆ, ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ತಮ್ಮ ಪಕ್ಷದ ಉಳಿವಿನ ಹೋರಾಟದಲ್ಲಿದ್ದಾರೆ, ಎಡಪಕ್ಷಗಳು ಕುಟುಂಬ ರಾಜಕಾರಣವನ್ನು ಬೆಂಬಲಿಸುವುದಿಲ್ಲ ಮತ್ತು ವಿಜಯ್ ಅವರು ಬೇರೆ ನಾಯಕತ್ವದ ಅಡಿಯಲ್ಲಿ ಕೆಲಸ ಮಾಡಲು ಒಪ್ಪುವುದಿಲ್ಲ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳು ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲಿವೆ. ಸೀಟು ಹಂಚಿಕೆ ಎನ್ನುವುದು ಗೆಳೆತನ ಮುಗಿದು ಕಠಿಣ ಮಾತುಕತೆಗಳು ನಡೆಯುವ ಜಾಗ. ಬಿಟ್ಟುಕೊಡುವ ಪ್ರತಿಯೊಂದು ಸೀಟು ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಪ್ರಶ್ನಿಸುತ್ತವೆ. ಪಂಜಾಬ್‌ನಲ್ಲಿ ಕಾಂಗ್ರೆಸ್-ಎಎಪಿ ಒಟ್ಟಾಗಿ ಹೆಜ್ಜೆ ಹಾಕುತ್ತವೆಯೇ..? ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್-ಟಿವಿಕೆ ಹೊಂದಾಣಿಕೆ ಮಾಡಿಕೊಳ್ಳುತ್ತವೆಯೇ..? ಅಥವಾ ಕೇರಳದಲ್ಲಿ ಕಾಂಗ್ರೆಸ್-ಎಡಪಕ್ಷಗಳು ಒಗ್ಗಟ್ಟಿನ ಕದನಕ್ಕೆ ಸಜ್ಜಾಗುತ್ತವೆಯೇ ಎಂಬುದು ಕಾಲವೇ ನಿರ್ಧರಿಸಬೇಕು. ಬಂಗಾಳದಲ್ಲಿ ಒಗ್ಗಟ್ಟು ಕೇವಲ ದೆಹಲಿ ಮಟ್ಟದ ತಂತ್ರವೋ ಅಥವಾ ಸೀಟು ಬಿಟ್ಟುಕೊಡುವ ಮನಸ್ಥಿತಿಯೇ ಎಂಬ ಪ್ರಶ್ನೆ ಮಮತಾ ಅವರನ್ನು ಕಾಡಲಿದೆ. ಸೀಟುಗಳ ತ್ಯಾಗ, ನಾಯಕರ ಒಮ್ಮತದ ಸ್ವೀಕಾರ ಮತ್ತು ಸೋಲುಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಾಗ ಮಾತ್ರ ನಿಜವಾದ ಮೈತ್ರಿ ನಿರ್ಮಾಣವಾಗಲು ಸಾಧ್ಯ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ(ಏಜೆನ್ಸೀಸ್​).